Malenadu Mitra
ಶಿವಮೊಗ್ಗ ಸೊರಬ

ಪಠ್ಯಪುಸ್ತಕ ತಿರುಚಿರುವುದರ ಹಿಂದೆ ಆರ್‌ಎಸ್‌ಎಸ್ ಕೈವಾಡ: ಚಂದ್ರಪ್ಪ ಮಾಸ್ತರ್ ಆರೋಪ

ದುಡಿಯುವ ವರ್ಗವನ್ನು ಶಾಶ್ವತವಾಗಿ ಗುಲಾಮಗಿರಿಗೆ ತಳ್ಳಿ ಅವರ ಕಷ್ಟವನ್ನು ಆನಂದದಿಂದ ಇಣಕಿ ನೋಡುವ ಸನಾತನ ಧರ್ಮದ ವಕ್ತಾರರಾಗಿ ಕೆಲಸ ಮಾಡುತ್ತಿರುವ ಪಠ್ಯಪುಸ್ತಕ ಸಮಿತಿಯು ಜ್ಞಾನ, ವಿದ್ಯೆ, ಸಂಪತ್ತು ಮೇಲ್ವರ್ಗಕ್ಕೆ ಮಾತ್ರ ಲಭಿಸುವಂತೆ ನೋಡಿಕೊಳ್ಳುವ ಹುನ್ನಾರ ಅಡಗಿದೆ ಎಂದು ವಿಶ್ವಮಾನವ ಶಕ್ತಿಸತ್ಯಶೋಧಕ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ ಮಾಸ್ತರ್ ಆರೋಪಿಸಿದರು.
ಸೊರಬ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಾಧಕರ ವಿಷಯವನ್ನು ಕೈಬಿಟ್ಟಿರುವ ಬಗ್ಗೆ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.
ಯುವ ಜನಾಂಗಕ್ಕೆ ದೇಶಾಭಿಮಾನ, ಭಾವೈಕ್ಯತೆ ಮೂಡಿಸುವ ಸಮಾಜ ಸುಧಾರಕರ ಕುರಿತ ಪಠ್ಯಗಳನ್ನು ತೆಗೆದುಹಾಕಿ ಮೂಲಭೂತವಾದವನ್ನು ಎತ್ತಿಹಿಡಿಯುವ ಹಾಗೂ ಮನು ಸಂಸ್ಕೃತಿಯನ್ನು ಬಿಂಬಿಸುವ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸುರುವುದರ ಹಿಂದೆ ಆರ್‌ಎಸ್‌ಎಸ್‌ನ ಕೈವಾಡವಿದೆ. ಹಿಂದಿನಿಂದಲೂ ಪುರೋಹಿತಶಾಹಿಯ ದಬ್ಬಾಳಿಕೆಯನ್ನು ವಿರೋಧಿಸುವ ಸಮಾಜ ಸುಧಾರಕರ ಜೀವನ ಕುರಿತಾದ ಪಠ್ಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸದೇ ದಲಿತ ಹಾಗೂ ಹಿಂದುಳಿದ ವರ್ಗವನ್ನು ಮೇಲೆತ್ತುವ ಚಿಂತನೆಯನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರನ್ನು ಅಪಹಾಸ್ಯ ಮಾಡುವ ರೋಹಿತ್ ಚಕ್ರತೀರ್ಥ ಈ ನೆಲದ ಅಸ್ಮಿತೆಯನ್ನು ಮರೆತು ವರ್ತಿಸುತ್ತಿದ್ದಾರೆ. ದೇವರನ್ನು ಕಾಣಲು ಮಧ್ಯವರ್ತಿಗಳ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿ, ಪುರೋಹಿತಶಾಹಿ ವ್ಯವಸ್ಥೆಯನ್ನು ವಿರೋಧಿಸಿದ್ದ ಬ್ರಹ್ಮಶ್ರೀನಾರಾಯಣ ಗುರುಗಳ ವಿಚಾರಧಾರೆಗಳನ್ನು ಪಠ್ಯದಿಂದ ಕೈಬಿಡುವ ಕೀಳು ಸಂಸ್ಕೃತಿಗೆ ಇಳಿದಿರುವುದು ದುರಂತ. ಹೊಸ ಪಠ್ಯ ಪರಿಷ್ಕರಣಿಗೆ ಕುಮ್ಮುಕ್ಕು ನೀಡಿರುವ ಶಿಕ್ಷಣ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಜನರ ಹಿತಕ್ಕಾಗಿ ತನ್ನ ಮಕ್ಕಳನ್ನು ಒತ್ತೆಯಾಗಿಟ್ಟಿದ್ದ ಟಿಪ್ಪುವಿನ ಕುರಿತಾದ ಪಠ್ಯವನ್ನು ಕೈಬಿಟ್ಟಿರುವುದು ಹಾಗೂ ಮೌಢ್ಯತೆಯನ್ನು ವಿರೋಧಿಸಿದ್ದ ಬಸವಣ್ಣನ ಕಾಯಕ ನಿಲುವುಗಳನ್ನು ತಿರುಚಿರುವುದು ರಾಜಕೀಯ ಷಡ್ಯಂತ್ರವಾಗಿದೆ ಎಂದು ತಿಳಿಸಿದರು.
ತಾಲೂಕು ಸೇವಾದಳದ ಅಧ್ಯಕ್ಷ ಶಿವಪ್ಪ ನಡಹಳ್ಳಿ ಮಾತನಾಡಿ, ದೇಶದ ಐಕ್ಯತೆಯ ಪ್ರತೀಕವಾಗಿರುವ ರಾಷ್ಟ್ರಧ್ವಜದ ಬದಲಾಗಿ ಕೇಸರಿ ಧ್ವಜವನ್ನು ಸಂಸತ್‌ನಲ್ಲಿ ಹಾರಿಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ದೂರಿದರು.
ಚೌಡಪ್ಪ ಬೈರೇಕೊಪ್ಪ, ಆರ್.ಬಿ. ಹುಚ್ಚರಾಯಪ್ಪ ಇದ್ದರು.
.

Ad Widget

Related posts

ಕಲ್ಲು ಎತ್ತಿಹಾಕಿ ಉದ್ಯಮಿ ಕೊಲೆ, ಕಲ್ಲೂರು ಮಂಡ್ಲಿ ತೋಟದಲ್ಲಿ ನಡೆದ ಘಟನೆ

Malenadu Mirror Desk

ಶಾರದಾ ಪೂರ್‍ಯಾನಾಯ್ಕ್ ನೇತೃತ್ವದಲ್ಲಿಜೆಡಿಎಸ್ ಪ್ರತಿಭಟನೆ

Malenadu Mirror Desk

ಶಿವಮೊಗ್ಗಮಹಿಳಾ ವಸತಿ ಪಾಲಿಟೆಕ್ನಿಕ್ ಅಭಿವೃದ್ಧಿಗೆ ನೆರವು: ಸಂಸದ ಬಿ.ವೈ.ರಾಘವೇಂದ್ರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.