ಮಾಜಿ ಸಚಿವರೂ ಹಾಗೂ ಶಾಸಕರಾದ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದ ಅಂಗವಾಗಿ ಕ್ರೀಡಾ ವಿಕ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೂಡಾ ಅಧ್ಯಕ್ಷ ನಾಗರಾಜ್ ಹೇಳಿದರು.
ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ಅವರು, ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾಗಿ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕನಾಗಿ ಶಿವಮೊಗ್ಗ ನಗರದ ಮತ್ತು ರಾಜ್ಯದ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತ ಭಾರತೀಯ ಜನತಾ ಪಾರ್ಟಿಯ ಮುಖಾಂತರ ರಾಜ್ಯದ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಜೂ.10 ರಂದು ಈಶ್ವರಪ್ಪ ಜನ್ಮದಿನವಿದೆ. ಈ ಜನ್ಮದಿನಾಚರಣೆ ಅಂಗವಾಗಿ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕ್ರೀಡಾ ವಿಕ್ರಮ ಕಾರ್ಯಕ್ರಮ ನಡೆಸಲಾಗುವುದು ಜೂ10 ಮತ್ತು 11 ರಂದು ಎರಡು ದಿನಗಳ ಕ್ರೀಡಾಕೂಟ ನಡೆಸಲಾಗುವುದು. ಆಹ್ವಾನಿತ ತಂಡಗಳ ರಾಜ್ಯಮಟ್ಟದ ಖೋಖೋ , ಜಿಲ್ಲಾ ಮಟ್ಟದ ವಾಲಿಬಾಲ್ , ಕಬಡ್ಡಿ ಮತ್ತು ಮಹಿಳೆಯರಿಗಾರಿ ತ್ರೋಬಾಲ್ ಪಂದ್ಯಾವಳಿಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
“ಪರಿಕ್ರಮ” ಶೀರ್ಷಿಕೆಯಡಿ ಪ್ರಗತಿ-ಪ್ರಕೃತಿ ಜೊತೆ ಜೊತೆಗೆ ಎಂಬ ಘೋಷ ವಾಕ್ಯದೊಂದಿಗೆ ಜೂ.10 ರಂದು ಸೈಕಲ್ ಜಾಥಾ ನಡೆಸಲಾಗುವುದು ಅದೇ ದಿನ ಸಂಜೆ6 ಗಂಟೆಗೆ ಕೆ.ಎಸ್.ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕ್ರೀಡಾಕೂಟ ವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರೀಡಾ ಪಟು ಕೆ.ವೈ. ವೆಂಕಟೇಶ್ ಉದ್ಘಾಟಿಸುವರು.
ಸಮಾರೋಪ ಸಮಾರಂಭವು ಜೂ.11 ರಂದು ಸಂಜೆ ೬ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಚಿವ ನಾರಾಯಣ ಗೌಡ, ಸಂಸದ ಬಿ.ವೈ.ರಾಘವೇಂದ್ರ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ,ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ್, ಕೆ.ಇ.ಕಾಂತೇಶ್ ಮತ್ತಿತರರು ಉಪಸ್ಥಿತರಿರುತ್ತಾರೆ. ಪಂದ್ಯಾವಳಿಯನ್ನು ಈಶ್ವರಪ್ಪರ ಅಭಿಮಾನಿಗಳು, ಬೆಂಬಲಿಗರು ಸೇರಿ ನಡೆಸಲಿದ್ದಾರೆ ಎಂದು ನಾಗರಾಜ್ ಹೇಳಿದರು.
ಕ್ರೀಡಾ ವಿಕ್ರಮ ಕಾರ್ಯಕ್ರಮದಲ್ಲಿ ಎರಡು ದಿನಗಳ ಕಾಲ ಕ್ರೀಡಾ ಹಬ್ಬವೇ ನಡೆಯಲಿದೆ ಎಂದು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು. ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಆಗಮಿಸುವರು. ಆಹ್ವಾನಿತ ತಂಡಗಳೇ ಬರುವುದರಿಂದ ಪಂದ್ಯಾವಳಿಯಲ್ಲಿ ರೋಚಕತೆ ಇರಲಿದೆ. ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ನಗರದ ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಕೋರಿದರು. ಗೋಷ್ಠಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಉಪಮೇಯರ್ ಗನ್ನಿ ಶಂಕರ್, ಪಾಲಿಕೆ ಸದಸ್ಯರಾದ ವಿಶ್ವಾಸ್, ಜಗದೀಶ್, ಸುರೇಖಾ ಮುರಳೀಧರ್,ರಾಘವೇಂದ್ರ ಮತ್ತಿತರರು ಹಾಜರಿದ್ದರು.