ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32 ನೇ ಘಟಿಕೋತ್ಸವ ಸಮಾರಂಭವನ್ನು ಜೂನ್ 16 ರಂದು ಬೆಳಗ್ಗೆ 10.30 ಕ್ಕೆ ಕುವೆಂಪು ವಿವಿ ಜ್ಞಾನ ಸಹ್ಯಾದ್ರಿ ಆವರಣದ ಬಸವ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 31 ಮತ್ತು 32 ನೇ ವಾರ್ಷಿಕ ಘಟಿಕೋತ್ಸವ ಒಂದೇ ದಿನ ನಡೆಯಲಿದೆ. ಈ ಸಮಾರಂಭಕ್ಕೆ ಕುಲಾಧಿಪತಿ ಮತ್ತು ರಾಜ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಆಗಮಿಸಲಿದ್ದಾರೆ. ಎರಡೂ ಘಟಿಕೋತ್ಸವಗಳ ಮುಖ್ಯಭಾಷಣವನ್ನು ಮೈಸೂರಿನ ಭಾರತೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ಮಾಡಲಿದ್ದಾರೆ ಎಂದರು.
25,435 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹ:
2019 -20 ಸಾಲಿನ ಘಟಿಕೋತ್ಸವದಲ್ಲಿ 61 ಪುರುಷರು ಹಾಗೂ 30 ಮಹಿಳೆಯರು ಸೇರಿ ಒಟ್ಟು 91 ಅಭ್ಯರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. 10214 ಪುರುಷರು ಹಾಗೂ 15221 ಮಹಿಳೆಯರು ಸೇರಿ ಒಟ್ಟು 25435 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ಘಟಿಕೋತ್ಸವದಲ್ಲಿ 127 ಸ್ವರ್ಣಪದಕಗಳು ಇದ್ದು, ಅವುಗಳನ್ನು 20 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 71 ವಿದ್ಯಾರ್ಥಿಗಳು ಹಂಚಿಕೊAಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, ಎಲ್ಲವುಗಳನ್ನು 13 ಮಹಿಳಾ ವಿದ್ಯಾರ್ಥಿಗಳು ಹಂಚಿಕೊAಡಿಡಿರುತ್ತಾರೆ ಎಂದರು.
ಕನ್ನಡ ಭಾರತಿ ವಿಭಾಗದ ಪ್ರಣೀತಾ ಎಂ. ಟಿ. ಅವರು ಒಟ್ಟು 8 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿರುತ್ತಾರೆ. ವಿವಿಯ ಎಂಬಿಎ ವಿಭಾಗದ ಯತೀಶ್ ಕೆ.ಯು., ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಅನುಷಾ ಎಸ್., ಎನ್‌ಇಎಸ್ ಸಂಸ್ಥೆಯ ಬಿಕಾಂ. ವಿದ್ಯಾರ್ಥಿನಿ ನಿವ್ಯಾ ಕೆ. ನಾಯಕ್ ತಲಾ 5 ಸ್ವರ್ಣಪದಕಗಳನ್ನು ಪಡೆದಿದ್ದಾರೆ.
ಗಣಿತ ಶಾಸ್ತ್ರ ಅಧ್ಯಯನ ವಿಭಾಗದ ಬಿ.ಎನ್. ಉಷಾ 4 ಸ್ವರ್ಣ ಪದಕ ಹಾಗೂ 3 ನಗದು ಬಹುಮಾನ ಪಡೆದಿದ್ದಾರೆ. ಸಮಾಜಶಾಸ್ತ್ರ ವಿಭಾಗದ ನವೀನ್ ಕುಮಾರ್ ಸಿ., ಸಸ್ಯಶಾಸ್ತ್ರ ವಿಭಾಗದ ರಕ್ಷಿತ್ ಹೆಚ್.ಎಂ. ಜೈನ್, ರಸಾಯನ ಶಾಸ್ತ್ರ ವಿಭಾಗದಲ್ಲಿ ದಿವ್ಯಾ ಎಂ.ಸಿ., ಪರಿಸರ ವಿಜ್ಞಾನ ವಿಭಾಗದಲ್ಲಿ ಸಂಪದ ಶಾಸ್ತ್ರ ಬಿ.ಎಸ್. ತಲಾ 4 ಸ್ವರ್ಣ ಪದಕ ಪಡೆದಿದ್ದಾರೆ.
ಸೌರಭ ಎಸ್. ಕಾಮತ್, ಅಬ್ದುಲ್ ಫತಾ, ಶ್ವೇತಾ ಎಸ್., ಸರಳಾ ವೈ.ಪಿ., ಸಂಜನಾ ಕೆ. ತಲಾ ಮೂರು ಸ್ವರ್ಣ ಪದಕ ಪಡೆದಿದ್ದಾರೆ. ದೂರಶಿಕ್ಷಣ ನಿರ್ದೇಶನಾಲಯದಡಿ ಕಲಾ, ವಾಣಿಜ್ಯ, ಕಾನೂನು, ವಿಜ್ಞಾನ ನಿಖಾಯಗಳಡಿ 12923 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದರು.
32 ನೇ ಘಟಿಕೋತ್ಸವದಲ್ಲಿ 20638 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹ:
2020 -21 ನೇ ಸಾಲಿನ ಘಟಿಕೋತ್ಸವದಲ್ಲಿ 82 ಪುರುಷರು ಹಾಗೂ 47 ಮಹಿಳೆಯರು ಸೇರಿ ಒಟ್ಟು 129 ಅಭ್ಯರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ 8324 ಪುರುಷರು ಹಾಗೂ 12314 ಮಹಿಳೆಯರು ಸೇರಿ ಒಟ್ಟು 20638 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ಘಟಿಕೋತ್ಸವದಲ್ಲಿ 132 ಸ್ವರ್ಣಪದಕಗಳಿದ್ದು, 14 ಪುರುಷರು ಹಾಗೂ 52 ಮಹಿಳೆಯರು ಸೇರಿ ಒಟ್ಟು 66 ವಿದ್ಯಾರ್ಥಿಗಳು ಹಂಚಿಕೊAಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, 13 ಮಹಿಳಾ ವಿದ್ಯಾರ್ಥಿಗಳು ಹಾಗೂ ಇಬ್ಬರು ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 15 ವಿದ್ಯಾರ್ಥಿಗಳು ಹಂಚಿಕೊAಡಿರುತ್ತಾರೆ ಎಂದು ಮಾಹಿತಿ ನೀಡಿದರು.
ಕನ್ನಡ ಭಾರತಿ ವಿಭಾಗದ ದಿವ್ಯಾ ಹೆಚ್. ಎನ್. ಒಟ್ಟು 11 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿರುತ್ತಾರೆ. ಎಂಬಿಎ ವಿಭಾಗದ ಪ್ರಿಯಾಂಕ ಟಿ. 6 ಸ್ವರ್ಣಪದಕಗಳನ್ನು ಗಳಿಸಿದ್ದಾರೆ. ಎಂಎ ಸಮಾಜಶಾಸ್ತ್ರ ವಿಭಾಗದ ತನೂಷಾ ಸಿ., ರಸಾಯನಶಾಸ್ತ್ರ ವಿಭಾಗದ ಸಂಯುಕ್ತ ಪೈ ಎಂ. ಹಾಗೂ ಎಟಿಎನ್‌ಸಿಸಿಯ ಬಿಕಾಂ. ವಿಭಾಗದ ಮೇಘನಾ ತಲಾ 5 ಚಿನ್ನದ ಪದಕಗಳನ್ನು ಗಳಿಸಿಕೊಂಡಿದ್ದಾರೆ.
ಗಣಿತಶಾಸ್ತ್ರ ವಿಭಾಗದ ಎನ್. ಸಿಂಧೂ 4 ಸ್ವರ್ಣ ಪದಕ, 2 ನಗದು ಬಹುಮಾನ, ರಾಜ್ಯಶಾಸ್ತ್ರ ವಿಭಾಗದ ಎಂ. ಅಶ್ವಿನಿ 4 ಸ್ವರ್ಣ ಪದಕ, ಪರಿಸರ ವಿಜ್ಞಾನ ವಿಭಾಗದ ಎಸ್. ಪೂಜಾ 4 ಸ್ವರ್ಣ ಪದಕ ಪಡೆದಿದ್ದಾರೆ. ಬಿಎಡ್ ವಿಭಾಗದಲ್ಲಿ ಆಯಿಷಾ ಫರ್ ಹಿನ್ ಶೇಖ್ 3 ಸ್ವರ್ಣ ಪದಕ, 1 ನಗದು ಬಹುಮಾನ ಪಡೆದಿದ್ದಾರೆ.
ಅಂಜುಮ್ ಬಷೀರ್ ಸಾಬ್, ಆಲಿಷಾ ಜೋಸೆಫ್, ಕೆ.ಎ. ಗಾಯಿತ್ತಿ, ಸಿ.ಕೆ. ರಂಜಿತಾ, ಎಂ. ಯಶಸ್ವಿನಿ, ಎಂ. ರುಚಿತಾಶ್ರೀ, ಬಿ.ಎಂ. ಸೃಷ್ಠಿ ತಲಾ 3 ಸ್ವರ್ಣ ಪದಕ ಪಡೆದಿದ್ದಾರೆ. ದೂರಶಿಕ್ಷಣ ನಿರ್ದೇಶನಾಲಯದಡಿ ಕಲಾ, ವಾಣಿಜ್ಯ, ಕಾನೂನು, ವಿಜ್ಞಾನ ನಿಕಾಯಗಳಡಿ 7188 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ವಿವಿ ಕುಲಸಚಿವೆ ಜಿ. ಅನುರಾಧಾ, ಮೌಲ್ಯಮಾಪನ ಕುಲಸಚಿವ ಪ್ರೊ. ನವೀನ್ ಕುಮಾರ್, ಉಪ ಕುಲಸಚಿವ ಡಾ.ಕೆ.ಆರ್. ಮಂಜುನಾಥ್, ಎಸ್.ಕೆ., ಪಿ.ಆರ್.ಒ. ಸತ್ಯಪ್ರಕಾಶ್ ಇದ್ದರು.
ಆರು ಮಂದಿಗೆ ಗೌರವ ಡಾಕ್ಟರೇಟ್
ಕುವೆಂಪು ವಿಶ್ವವಿದ್ಯಾಲಯವು ಜೂನ್ 16ರಂದು ಏರ್ಪಡಿಸಿರುವ 31 ಮತ್ತು32ನೇ ಘಟಿಕೋತ್ಸವದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ ಸೇರಿ ಇತರೆ ಐದು ಮಂದಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರು,ಎರಡು ಘಟಿಕೋತ್ಸವಗಳಿಂದ ಒಟ್ಟು ಆರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ಕೊರೊನಾ ಹಾವಳಿ ಹಾಗೂ ಅತಿಥಿಗಳ ಸಮಯ ಹೊಂದಾಣಿಕೆ ಸಾಧ್ಯವಾಗದ ಕಾರಣ ನೆನೆಗುದಿಗೆ ಬಿದ್ದಿದ್ದ ವಿವಿಯ ಎರಡು ಶೈಕ್ಷಣಿಕ ಘಟಿಕೋತ್ಸವಗಳನ್ನು ಪ್ರಸ್ತುತ ಜೂನ್ 16 ರಂದು ಒಂದೇ ದಿನ ನಡೆಸಲು ವಿಶ್ವವಿದ್ಯಾಲಯವು ಮುಂದಾಗಿದೆ. 2019-20ಮತ್ತು 2020-21ನೇ ಸಾಲಿನ ಘಟಿಕೋತ್ಸವಗಳನ್ನು ರಾಜ್ಯಪಾಲರ ಅನುಮತಿ ಮೇರೆಗೆ ಒಂದೇ ದಿನ ಆಯೋಜಿಸಲು ಸಿದ್ಧತೆ ಕೈಗೊಂಡಿದೆ.
31ನೇ ಘಟಿಕೋತ್ಸವದ ಭಾಗವಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ, ಶಿಕ್ಷಣತಜ್ಞೆ ಗೀತಾ ನಾರಾಯಣನ್ ಹಾಗೂ ಯೋಗ ಗುರು ಭ. ಮ. ಶ್ರೀಕಂಠ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಗುತ್ತಿದೆ. 32ನೇ ಘಟಿಕೋತ್ಸವದ ಭಾಗವಾಗಿ ಶಿಕ್ಷಣತಜ್ಞ, ಆಂದ್ರ ಪ್ರದೇಶದ ಕೇಂದ್ರ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ. ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗಗುರು ಬಾ. ಸು. ಅರವಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಘಟಿಕೋತ್ಸವ ಕಾರ್ಯಕ್ರಮಕ್ಕೆ ಕುಲಾಧಿಪತಿ ಮತ್ತು ರಾಜ್ಯ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಆಗಮಿಸಲಿದ್ದಾರೆ.