Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡಿನ ಕಾಲು ಸಂಕಕ್ಕೆ ಕೇಂದ್ರದಿಂದ ನೆರವು: ಸಂಸದ ರಾಘವೇಂದ್ರ ಹೇಳಿಕೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು ಒಪ್ಪಿಗೆ ನೀಡಿ, ಅನುದಾನದ ಭರವಸೆ ನೀಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿ ಸಭೆಯಲ್ಲಿ ಕ್ಷೇತ್ರದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಸ್ತಾಪ ಮಾಡಿದ್ದು, ಗ್ರಾಮೀಣಾಭಿವೃದ್ಧಿ ಕೇಂದ್ರ ಸಚಿವರು ಇದಕ್ಕೆಲ್ಲಾ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಮಲೆನಾಡಿನಲ್ಲಿ ಕಾಲುಸಂಕ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಸೇರಿದಂತೆ ಕಾಲುಸಂಕಗಳ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸುಮಾರು 634 ಕಾಲು ಸಂಕಗಳನ್ನು ನಿರ್ಮಾಣ ಮಾಡಲು35 ಕೋಟಿ ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ. ಇದರಿಂದ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ನದಿ ಹಾಗೂ ಹಳ್ಳಗಳನ್ನು ದಾಟಲು ಅನುಕೂಲವಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುಸಂಕವನ್ನು ನಿರ್ಮಾಣ ಮಾಡಲಾಗುವುದು ಎಂದರು.
ಜಾನುವಾರು ಬಂಜೆತನ ನಿವಾರಣೆ:
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಾನುವಾರುಗಳಲ್ಲಿ ಬಂಜೆತನ ಕಂಡುಬಂದಿದೆ. ಸರಿಯಾದ ಸಮಯಕ್ಕೆ ಗರ್ಭಧಾರಣೆಯಾಗದಿದ್ದರೆ ತುಂಬಾ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಆರ್ಥಿಕ ಸಮಸ್ಯೆ ಎದುರಾಗದಂತೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರೈತರಿಗೆ ಮಾಹಿತಿ ನೀಡುವುದಲ್ಲದೆ ಸೂಕ್ತ ಅನುದಾನ ನೀಡಲು ಸಚಿವರು ಒಪ್ಪಿಕೊಂಡಿದ್ದಾರೆ. ಇದರಿಂದ ಹೈನುಗಾರಿಕೆ ಹೆಚ್ಚಳವಾಗುತ್ತದೆ ಎಂದರು.
ದೇವಸ್ಥಾನಗಳ ಅಭಿವೃದ್ಧಿ:
ಪುರಾತತ್ವ ಇಲಾಖೆಯ ಸಹಯೋಗದಲ್ಲಿ ಬಿದನೂರಿನ ಕೋಟೆ ಅಭಿವೃದ್ಧಿಗೆ ಕೇಂದ್ರದ ನೆರವು ಕೇಳಲಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಒಂದು ಕೋಟಿ ನೆರವು ಸಿಕ್ಕಿದ್ದು, ಕೇಂದ್ರದ ಅನುದಾನವೂ ಸೇರಿಕೊಂಡು ಬಿದನೂರು ಕೋಟೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಶಿಕಾರಿಪುರದ ಅಲ್ಲಮ ಪ್ರಭು ಕ್ಷೇತ್ರದ ಅಭಿವೃದ್ಧಿಗೆ ಮತ್ತು ಭದ್ರಾವತಿಯ ಲಕ್ಷ್ಮೀನರಸಿಂಹ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ಯೋಜನೆ:
ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾರಿಗೆ ತರಲಾಗುವುದು. ಜೂನ್28 ರಂದು ಕಾರ್ಮಿಕ ಸಚಿವರು ಶಿವಮೊಗ್ಗಕ್ಕೆ ಬರಲಿದ್ದು, ಸಿದ್ಲಿಪುರ ಗ್ರಾಮದಲ್ಲಿ ನಿರ್ಮಾಣ ಮಾಡಲು ಯೋಜಿಸಿರುವ ಕಾರ್ಮಿಕರ ವಸತಿ ಸಮುಚ್ಛಯ ಕಾಮಗಾರಿಗೆ ಚಾಲನೆ ನೀಡುವರು ಎಂದರು.

ಸಿದ್ಲಿಪುರ ಗ್ರಾಮದ ಹತ್ತು ಎಕರೆ ಜಾಗದಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ವಲಸೆ ಕಾರ್ಮಿಕರಿಗಾಗಿ ಶಾಶ್ವತವಾದ ಸೂರು ನಿರ್ಮಿಸಲಾಗುವುದು. ಇದರಲ್ಲಿ ಸುಮಾರು 96 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗುವುದು. ಸುಮಾರು 450 ಕಾರ್ಮಿಕರು ಅಲ್ಲಿ ವಾಸ ಮಾಡಬಹುದಾಗಿದೆ. ಹಾಗೆಯೇ ಭದ್ರಾವತಿಯ ಕಸಬಾ ಹೋಬಳಿ ಉಜ್ಜನೀಪುರದ ಎರಡು ಎಕರೆ ಜಾಗದಲ್ಲಿ ಎರಡು ಕೋಟಿ ವೆಚ್ಚದ ಕಾರ್ಮಿಕ ಭವನವನ್ನು ನಿರ್ಮಿಸಲಾಗುವುದು ಎಂದರು.
ಅದೇ ದಿನ ನಗರದ ಕುವೆಂಪು ರಂಗಮಂದಿರದಲ್ಲಿ ಹಾಗೂ ಭದ್ರಾವತಿಯಲ್ಲಿ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದು. ಇದೊಂದು ವಿಶೇಷ ತಪಾಸಣಾ ಶಿಬಿರವಾಗಿದೆ. ಕಾರ್ಮಿಕರು ಇಲ್ಲಿ ತಪಾಸಣೆಯ ಜೊತೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾಗಬಹುದು. ಆ ಹಣವನ್ನು ಕೂಡ ವಾಪಾಸ್ ಮಾಡಲಾಗುವುದು. ಇದಕ್ಕಾಗಿ ಸುಮಾರು 10 ಕೋಟಿ ರೂ.ವೆಚ್ಚವಾಗಲಿದೆ. ಕಾರ್ಮಿಕ ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸುವರು. ಜಿಲ್ಲೆಯ ಎಲ್ಲಾ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ. ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾರ್ಮಿಕ ವಿಮಾ ಆಸ್ಪತ್ರೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲಿಯೇ ಇದರ ಉದ್ಘಾಟನೆಯಾಗಲಿದೆ ಎಂದು ಸಂಸದರು ಹೇಳಿದರು.
ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ, ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಪ್ರಮುಖರಾದ ಎಂ.ಬಿ. ಭಾನುಪ್ರಕಾಶ್, ಟಿ.ಡಿ. ಮೇಘರಾಜ್, ಎಸ್. ದತ್ತಾತ್ರಿ, ಎಸ್.ಎಸ್. ಜ್ಯೋತಿ ಪ್ರಕಾಶ್, ಪೆರುಮಾಳ್, ಸುಂದರ ಬಾಬು, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.


ಪ್ರತಿ ಪಕ್ಷಗಳ ವಿರೋಧ ಯಾಕೆ ?

ಕೇಂದ್ರ ಸರ್ಕಾರ ಮಹತ್ವದ ಅಗ್ನಿಪಥ್ ಯೋಜನೆಯನ್ನು ವಿರೋಧ ಪಕ್ಷಗಳು ಏಕೆ ವಿರೋಧಿಸುತ್ತಿದ್ದಾರೆಂದೇ ಅರ್ಥವಾಗುತ್ತಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಯೋಜನೆ ಯುವಕರಿಗೆ ಒಳ್ಳೆಯ ಅವಕಾಶವಾಗಿದೆ. ದೇಶಸೇವೆಯನ್ನು ಮಾಡಿದಂತಾಗುತ್ತದೆ. ನಾಲ್ಕು ವರ್ಷದ ಉದ್ಯೋಗದ ನಂತರ ಹಣವೂ ಸಿಗುತ್ತದೆ. ಕೆಲಸದ ಸಂದರ್ಭದಲ್ಲಿ ಯುವಕರು ತಮ್ಮ ವ್ಯಾಸಂಗವನ್ನು ಕೂಡ ಮುಂದುವರಿಸಬಹುದಾಗಿದೆ. ಇಡೀ ಜಗತ್ತೇ ಮೆಚ್ಚುತ್ತಿರುವಾಗ ಕಾಂಗ್ರೆಸ್ಸಿಗರು ಕ್ಯಾತೆ ಯಾಕೆ ತೆಗೆಯುತ್ತಿದ್ದಾರೋ ಗೊತ್ತಿಲ್ಲ. ಅವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ದೆಹಲಿಯಲ್ಲಿ ಇರುವಾಗ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ನಾಮಪತ್ರಕ್ಕೆ ತಾವು ಸೂಚಕರಾಗಿದ್ದು ಹೆಮ್ಮೆ ತರುವ ವಿಷಯವಾಗಿದೆ. ವರಿಷ್ಟರು ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಅಭಿನಂದನೆಗಳು. ಭಾರತದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸುವ ಮೊದಲ ಬುಡಕಟ್ಟು ಮಹಿಳೆ ಎಂದು ಇಡೀ ದೇಶವೇ ಕೊಂಡಾಡುತ್ತಿರುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಅದೇಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ.

Ad Widget

Related posts

ಶಿವಮೊಗ್ಗದಲ್ಲಿ ತಗ್ಗಿದ ಕೊರೊನ, 5 ಸಾವು, 197 ಸೋಂಕು

Malenadu Mirror Desk

ಯಡಿಯೂರಪ್ಪ ಮನೆಗೆ ಮುತ್ತಿಗೆ ಕಲ್ಲು ತೂರಾಟ,ಲಾಠಿ ಪ್ರಹಾರ
ಮೀಸಲಾತಿ ಮರುಹಂಚಿಕೆಗೆ ಆಕ್ರೋಶ

Malenadu Mirror Desk

ಶಿಕ್ಷಣ ವ್ಯವಸ್ಥೆಯಲ್ಲಿ ಮಲೆನಾಡು ಗ್ರಾಮೀಣ ಭಾಷೆಗೆ ಆದ್ಯತೆ ಅಗತ್ಯ : ಡಾ. ಮೋಹನ್ ಚಂದ್ರಗುತ್ತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.