Malenadu Mitra
ರಾಜ್ಯ ಶಿವಮೊಗ್ಗ

ಸಾಮಾಜಿಕ,ರಾಜಕೀಯ ಹೋರಾಟ ಮಾಡಿ ಆದರೆ ಯಾರ ಗುಲಾಮರಾಗಬೇಡಿ, ಈಡಿಗ ಸಮಾಜದ ಯುವಕರಿಗೆ ವಿಖ್ಯಾತಾನಂದ ಸ್ವಾಮೀಜಿ ಕಿವಿಮಾತು

ಸಾಮಾಜಿಕ, ರಾಜಕೀಯ ಹೋರಾಟಗಳಲ್ಲಿ ಪಾಲ್ಗೊಳ್ಳಿ ಆದರೆ ಯಾರ ಗುಲಾಮರಾಗಬೇಡಿ, ವಿದ್ಯಾವಂತರಾಗಿ, ಉದ್ಯೋಗಸ್ಥರಾಗಿ ನಿಮ್ಮ ನೆಲೆಯಲ್ಲಿ ಸಮಾಜದ ನೊಂದವರಿಗೆ ನೆರವಾಗಿ ಎಂದು ಸೋಲೂರು ಆರ್ಯಈಡಿಗ ಮಹಾಸಂಸ್ಥಾನದ ಶ್ರೀ ರೇಣುಕಾ ಪೀಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಈಡಿಗ ಸಮುದಾಯದ ಯುವಜ ಜನರಿಗೆ ಕರೆ ನೀಡಿದರು.
ಬೆಂಗಳೂರಿನ ಜೆಪಿನಾರಾಯಣಸ್ವಾಮಿ ಪ್ರತಿಷ್ಠಾನವುಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದ ಸಹಯೋಗದಲ್ಲಿ ಶನಿವಾರ ಈಡಿಗ ಭವನದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿವೇತನ ವಿತರಣೆ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ವಿದ್ಯೆಯಿಂದ ಮಾತ್ರ ಶೋಷಿತ ಸಮುದಾಯಗಳು ಮುಂದೆ ಬರಲು ಸಾಧ್ಯ. ಕುಲಗುರು ಶ್ರೀ ನಾರಾಯಣ ಗುರುಗಳು ಪ್ರತಿ ದೇವಾಲಯದ ಪ್ರಾಂಗಣಗಳು ವಿದ್ಯೆ ನೀಡುವ ಸರಸ್ವತಿ ಮಂದಿರಗಳಾಗಬೇಕೆಂಬ ಪರಿಕಲ್ಪನೆ ಹೊಂದಿದ್ದರು. ಅಂದು ಅವರು ಸಮಾಜಕ್ಕೆ ಜ್ಞಾನದ ಬೆಳಕು ನೀಡುವ ಕಾಯಕ ಮಾಡಿದ್ದರು. ಅವರ ತತ್ವ ಸಿದ್ಧಾಂತಗಳಲ್ಲಿ ಈಡಿಗ ಸಮಾಜ ಸಾಗಿದರೆ ಉನ್ನತಿ ಸಾಧ್ಯವಿದೆ. ಕೇರಳದಲ್ಲಿ ಗುರುಗಳು ಹಚ್ಚಿದ ವಿದ್ಯಾಜ್ಯೋತಿಯಿಂದ ಆ ರಾಜ್ಯ ಇಂದು ಮಾದರಿ ರಾಜ್ಯವಾಗಿದೆ ಎಂದು ಹೇಳಿದರು.
ಶಿವಮೊಗ್ಗ,ಉತ್ತರ ಕನ್ನಡ, ಉಡುಪಿ, ಮಂಗಳೂರಿನಲ್ಲಿ ಈಡಿಗ ಸಮಾಜ ಬಹುಸಂಖ್ಯಾತರಾಗಿದ್ದಾರೆ. ಹಿಂದೆ ರಾಜಕೀಯವಾಗಿಯೂ ಪ್ರಬಲವಾಗಿದ್ದರು. ಆದರೆ ಇಂದು ಸಂಘಟನೆಯ ಕೊರತೆಯಿಂದ ಸಮಾಜಕ್ಕೆ ರಾಜಕೀಯವಾಗಿ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಈಡಿಗರಿಗೆ ರಾಜಕೀಯ ಕ್ಷೇತ್ರವೊಂದೇ ಪರ‍್ಯಾಂiiವಲ್ಲ. ನೀವು ಮಾಡುವ ಯಾವುದೇ ಉದ್ಯೋಗದಲ್ಲಿ ಶ್ರದ್ಧೆ ಮತ್ತು ನಾರಾಯಣ ಗುರುಗಳ ತತ್ವ ಇದ್ದರೆ ಸಾಫಲ್ಯ ಕಾಣುತ್ತೀರಿ ಎಂದರು.

ಜೆಪಿನಾರಾಯಣ ಸ್ವಾಮಿ ಕುಟುಂಬದವರು ಇಂದು ಪ್ರತಿ ವರ್ಷ ಸಮಾಜದ ಮಕ್ಕಳಿಗಾಗಿ ಕೋಟ್ಯಂತರ ರೂ. ವ್ಯಯ ಮಾಡುತ್ತಿದ್ದಾರೆ. ಅವರು ನೀಡಿದ ನೆರವನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು. ಮುಂದೆ ನೀವು ವಿದ್ಯಾವಂತರಾಗಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಇಂದು ಉತ್ತಮ ಸಂಸ್ಕಾರ ನೀಡುವ ಶಿಕ್ಷಣ ಅಗತ್ಯವಾಗಿದೆ. ಈಡಿಗ ಸಮುದಾಯದ ಎಲ್ಲ ಉಪ ಪಂಗಡಗಳ ಶ್ರೇಯಸ್ಸಿಗೆ ಶಿಕ್ಷಣ , ಆರೋಗ್ಯ, ಉದ್ಯೋಗ ನೀಡುವ ನೆಲೆಯಲ್ಲಿ ಮಠ ಕೆಲಸ ಮಾಡುತ್ತದೆ ಸಮಾಜ ಬಾಂದವರು ಕೈಜೋಡಿಸಬೇಕೆಂದು ಶ್ರೀಗಳು ಮನವಿ ಮಾಡಿದರು.

ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಕೆಪಿಎಸ್ಸಿ ಮಾಜಿ ಸದಸ್ಯರಾದ ಪ್ರೊ.ಲಕ್ಷ್ಮೀ ನರಸಿಂಹಯ್ಯ ಅವರು ಮಾತನಾಡಿ, ಜೆಪಿ ನಾರಾಯಣ ಸ್ವಾಮಿಯವರ ಕುಟುಂಬ ೨೦೧೮ರಲ್ಲಿ ಆರಂಭಿಸಿದ್ದ ಜೆಪಿ ಪ್ರತಿಷ್ಠಾನ ಪ್ರತಿ ವರ್ಷ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಿದೆ. ಇದೊಂದು ಸ್ವಯಂಸೇವಾ ಮತ್ತು ರಾಜಕೀಯೇತರ ಸಂಸ್ಥೆಯಾಗಿದೆ. ಗ್ರಾಮೀಣ ಭಾಗದ ಈಡಿಗ ಸಮಾಜದ ಮಕ್ಕಳು ಶಿಕ್ಷಣ ಸೌಲಭ್ಯದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಜನಮುಖಿ ಕಾರ್ಯಕ್ರಮ ಮಾಡುತ್ತಿದೆ. ಪ್ರತಿಷ್ಠಾನವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಮೂಲಕ ಸಮಾಜದ ಮಕ್ಕಳಿಗೆ ನೆರವಾಗುತ್ತಿದೆ. ಮುಂದಿನ ದಿನಗಳಲ್ಲಿ ಶ್ರೀಮಠದ ಸಹಕಾರದಿಂದ ಇನ್ನಷ್ಟು ಜನಪರ ಕೆಲಸ ಮಾಡಲಿದೆ ಎಂದು ಹೇಳಿದರು.
ಪ್ರತಿಷ್ಠಾನದ ಹೆಚ್.ಎಲ್.ಶಿವಾನಂದ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಇರುವ ಅವಕಾಶಗಳು, ಮತ್ತು ಉದ್ಯೋಗ ಅವಕಾಶಗಳು, ಕೋರ್ಸ್‌ಗಳ ಆಯ್ಕೆ ಇತ್ಯಾದಿಗಳ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಅವರು, ಜೆಪಿ ನಾರಾಯಣ ಸ್ವಾಮಿ ಪ್ರತಿಷ್ಠಾನ ಮಾದರಿ ಕಾರ್ಯ ಮಾಡುತ್ತಿದೆ. ಜೆಪಿ ಸುಧಾಕರ್ ಅವರ ಈ ಕೆಲಸದಿಂದ ಸಮಾಜದ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮಾಜದ ಮಕ್ಕಳಿಗೆ ಹಾಸ್ಟೆಲ್ ಅಗತ್ಯವಿದ್ದು, ಈ ನೆಲೆಯಲ್ಲಿ ಚಿಂತನೆ ಮಾಡಬೇಕಿದೆ ಎಂದು ಹೇಳಿದರು. ಈ ಸಂದರ್ಭ ಸುರೇಶ್ ಬಾಳೆಗುಂಡಿ ದಂಪತಿ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರೆ, ವಿವಿಧ ಸಂಘಟನೆಗಳಿಂದ ಗುರುಕಾಣಿಕೆ ನೀಡಿ ಗುರುವಂದನೆ ಸಲ್ಲಿಸಲಾಯಿತು.
ಪ್ರತಿಷ್ಠಾನದ ಖಜಾಂಚಿ ಪೂರ್ಣೇಶ್ ಎಂ.ಆರ್., ಕುಸುಮಾ ಅಜಯ್, ಬ್ರಹ್ಮಶ್ರೀ ನಾರಾಯಣ ಗುರು ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಮಾಜಿ ಶಾಸಕರಾದ ಡಾ.ಜಿ.ಡಿನಾರಾಯಣಪ್ಪ, ಅಕ್ಷಯ ಸೊಸೈಟಿಯ ಅಧ್ಯಕ್ಷರೂ ಉದ್ಯಮಿಗಳಾದ ಸುರೇಶ್ ಕೆ.ಬಾಳೇಗುಂಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಬಂಡಿ ರಾಮಚಂದ್ರ, ಕಾಸರಗುಪ್ಪೆ ಅಜ್ಜಪ್ಪ, ಮಹಿಳಾ ಸಂಘದ ಗೀತಾಂಜಲಿ ದತ್ತಾತ್ರೇಯ, ಬಿಲ್ಲವ ಸಂಘದ ಅಧ್ಯಕ್ಷ ಭುಜಂಗಯ್ಯ ಮತ್ತಿತರರಿದದ್ದರು.
ಪ್ರತಿಷ್ಠಾನದ ಜಿಲ್ಲಾ ಸಂಚಾಲಕ ತೇಕಲೆ ರಾಜಪ್ಪ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಈಡಿಗ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಸ್ವಾಗತಿಸಿದರು. ಜಿ.ಡಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಅಪೂರ್ವ ಪ್ರಾರ್ಥಿಸಿದರು.ಹಿಳ್ಳೋಡಿ ಕೃಷ್ಣಮೂರ್ತಿ ವಂದಿಸಿದರು. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ೩೮೦ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ನಾರಾಯಣ ಗುರುಗಳು ಮಧ್ಯಾಹ್ನದ ಬಿಸಿಯೂಟದ ಪರಿಕಲ್ಪನೆ ನೀಡಿದವರು. ಕೇರಳದಲ್ಲಿ ತಮಗೆ ಭಕ್ತರು ನೀಡಿದ್ದ ತೆಂಗಿನ ತೋಟದ ಆದಾಯದಿಂದ ಆ ಕಾಲದಲ್ಲಿಯೇ ಬಡ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ ಆರಂಭಿಸಿದ್ದರು
-ವಿಖ್ಯಾತನಂದ ಸ್ವಾಮೀಜಿ

Ad Widget

Related posts

ಜಿಂಕೆ ಬೇಟೆ ಮೂವರ ಬಂಧನ

Malenadu Mirror Desk

ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಯಾಗಬೇಕು, ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಗುಂಡಾ ಜೋಯ್ಸ್ ಅಭಿಮತ

Malenadu Mirror Desk

ಉತ್ತಮ ಪರಿಸರ ನೀಡುವ ಮೂಲಕ ಧನ್ಯರಾಗಬೇಕು : ಅನುರಾಧ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.