ಜಯಂತ್ ಕಾಯ್ಕಿಣಿ ಬರೆದಿರುವ ಜೊತೆಗಿರುವವನು ಚಂದಿರ ನಾಟಕದಲ್ಲಿ ಮುಸ್ಲಿಂ ಕಥಾಹಂದರ ಇದೆ ಎಂದು ಆರೋಪಿಸಿ ನಾಟಕ ಪ್ರದರ್ಶನಕ್ಕೆ ತಡೆಯೊಡ್ಡಿದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಆಗ್ರಹಿಸಿ ಹವ್ಯಾಸಿ ರಂಗ ತಂಡಗಳ ಒಕ್ಕೂಟದ ಕಲಾವಿದರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸೊರಬ ತಾಲೂಕಿನ ಆನವಟ್ಟಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜುಲೈ 3 ರಂದು ಶಿವಮೊಗ್ಗದ ರಂಗಬೆಳಕು ತಂಡದ ಕಲಾವಿದರು ಜಯಂತ್ ಕಾಯ್ಕಿಣಿ ರಚನೆಯ ರಘು ಪುರಪ್ಪೆಮನೆ ನಿರ್ದೇಶನದ ‘ಜೊತೆಗಿರುವನು ಚಂದಿರ’ ಎಂಬ ನಾಟಕ ಪ್ರದರ್ಶನ ಆಯೋಜಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಒಟ್ಟಾಗಿಯೇ ಈ ನಾಟಕ ಪ್ರದರ್ಶನ ಏರ್ಪಡಿಸಿದ್ದವು. ಆದರೆ, ನಾಟಕ ಪ್ರದರ್ಶನ ನಡೆಯುತ್ತಿರುವಾಗಲೇ ಕೆಲ ಕಿಡಿಗೇಡಿಗಳು ವೇದಿಕೆ ಮೇಲೆ ಬಂದು ನಾಟಕ ನಿಲ್ಲಿಸುವಂತೆ ಅಡ್ಡಿಪಡಿಸಿದರು ಎಂದು ಪ್ರತಿಭಟನಾಕಾರರು ತಿಳಿಸಿದರು.
ನಾಟಕ ನಿಲ್ಲಿಸದಿದ್ದರೆ ಕಲಾವಿದರನ್ನು ವೇದಿಕೆಯಿಂದ ಹೊರದಬ್ಬುತ್ತೇವೆ ಎಂದು ಬೆದರಿಕೆ ಹಾಕಿದರು. ನಾಟಕ ನೋಡುತ್ತಿದ್ದ ಪ್ರೇಕ್ಷಕರನ್ನು ಹೊರಹೋಗುವಂತೆ ಒತ್ತಾಯಿಸಿದರು. ಘೋಷಣೆ ಕೂಗಿದರು. ನಾಟಕ ಸ್ಥಗಿತಗೊಳಿಸಿದರು ಎಂದು ದೂರಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಕಪ್ಪುಚುಕ್ಕೆಯಾಗಿದೆ. ವೇದಿಕೆ ಮೇಲೆ ನಾಟಕ ನಡೆಯುತ್ತಿದ್ದಾಗ ನುಗ್ಗಿ ನಾಟಕ ನಿಲ್ಲಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದಂತೆ. ಅಲ್ಲದೇ, ಕಲಾವಿದರನ್ನು ದಬ್ಬುತ್ತೇವೆ ಎಂದು ಹೇಳುವ ಮೂಲಕ ಅಪರಾಧಿಕ ಕೃತ್ಯವೆಸಗಿದ್ದಾರೆ. ಇಂತಹ ದಬ್ಬಾಳಿಕೆಯ ಕೃತ್ಯ ಯಾವತ್ತೂ ನಡೆದಿರಲಿಲ್ಲ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಮತ್ತು ವಿವಿಧ ಸಂಘಟನೆಗಳ ಪ್ರಮುಖರಾದ ಕೆ.ಟಿ. ಗಂಗಾಧರ್, ಪ್ರೊ. ರಾಜೇಂದ್ರ ಚೆನ್ನಿ, ಅಕ್ಷತಾ, ಡಿ. ಮಂಜುನಾಥ್, ಎಂ. ಗುರುಮೂರ್ತಿ, ರಮೇಶ್ ಹೆಗ್ಡೆ, ಬಿ. ಚಂದ್ರೇಗೌಡ, ಟೆಲೆಕ್ಸ್ ರವಿ, ಕಾಂತೇಶ್ ಕದರಮಂಡಲಗಿ, ಕೊಟ್ಟಪ್ಪ ಹಿರೇಗಮಾಗಡಿ, ಕೆ.ಎಲ್. ಅಶೋಕ್, ಗೋ.ರಾ. ಲವ, ಹೊನ್ನಾಳಿ ಚಂದ್ರಶೇಖರ್, ಆರ್.ಎಸ್. ಹಾಲಸ್ವಾಮಿ, ಭಾಸ್ಕರ್, ಜಿ.ಡಿ. ಮಂಜುನಾಥ್, ಅನನ್ಯ ಶಿವಕುಮಾರ್, ಲೋಹಿತ್ ಕುಮಾರ್, ರೇಖಾಂಬ, ಕೃಷ್ಣಮೂರ್ತಿ ಮೊದಲಾದವರಿದ್ದರು.
ನಾಟಕ ಪ್ರದರ್ಶನಗಳ ಮೇಲೆ ಈ ರೀತಿ ದಾಳಿ ನಡೆಸುವಂತಹ ಘಟನೆಗಳನ್ನು ತಡೆಯದೇ ಹೋದರೆ ಮುಂದೆ ಇಂತಹ ವಿಕೃತ ಮನಸ್ಥಿತಿಗಳು ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆಯೂ ದಾಳಿ ನಡೆಸುವ ಅಪಾಯಗಳಿವೆ.ಆದ್ದರಿಂದ ಈ ಘಟನೆಯನ್ನು ಖಂಡಿಸುತ್ತೇವೆ.ಸರ್ಕಾರ ಈ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
–ಡಿ.ಮಂಜುನಾಥ್, ಜಿಲ್ಲಾ ಕಸಾಪ ಅಧ್ಯಕ್ಷ