ದೀಪ ಆರುವ ಮುನ್ನ ಉರಿಯುವಂತೆ ಮುಖಂಡರು ಉರಿಯುತಿದ್ದು, ಮುಂದೆ ಅಸ್ತಿತ್ವ ಕಳೆದುಕೊಳ್ಳುತ್ತಾರೆ ಎಂದು ಶಾಸಕ ಹಾಗೂ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಬುಧವಾರ ಬಾಗಿನ ಅರ್ಪಿಸಿದ ನಂತರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿಯೇ ಒಗ್ಗಟ್ಟಿಲ್ಲ. ಅದು ಛಿದ್ರ ಛಿದ್ರವಾಗುತ್ತಿದೆ. ಮನೆಯ ದೊಡ್ಡಣ್ಣನ(ಪಕ್ಷದ ಹಿರಿಯ ನಾಯಕ ಸಿದ್ಧರಾಮಯ್ಯ) ಜನ್ಮದಿನೋತ್ಸವ ಸಿದ್ದರಾಮೋತ್ಸವಕ್ಕೆ ಅವರ ಅಣ್ಣತಮ್ಮಂದಿರೇ(ಪಕ್ಷದ ಮುಖಂಡರು) ವಿರೋಧಿಸುತ್ತಿದ್ದಾರೆ. ಸಿದ್ದರಾಮೋತ್ಸವಕ್ಕೂ ನಮಗೂ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇಂತಹ ದುಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬರಬಾರದಿತ್ತು ಎಂದರು.
ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಯಾರೂ ಮಾತನಾಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ತಿಳಿಸಿದ್ದರೂ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎಂದು ಅವರವರೇ ಕಚ್ಚಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ಒಗ್ಗಟ್ಟೂ ಇಲ್ಲ, ಏನೂ ಇಲ್ಲ. ತಮ್ಮ ಅಸ್ಥಿತ್ವಕ್ಕಾಗಿ ಮಾತನಾಡುವುದನ್ನು ಬಿಟ್ಟರೆ ಆ ಪಕ್ಷಕ್ಕೆ ದುರ್ಗತಿ ಬಂದಿರುವುದಂತೂ ನಿಜ ಎಂದರು.
ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳುತ್ತಿರುವ ಕಾಂಗ್ರೆಸ್ ನವರಿಗೆ ಅರ್ಥವಾಗಬೇಕು. ಕಳೆದ ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿ ಮಾಡಿದ್ದರು. ಬಿಜೆಪಿ ಒಂದು ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ ಎಂದಿದ್ದರು. ಆಗ ಬಿಜೆಪಿ ೨೮ ಲೋಕಸಭೆ ಕ್ಷೇತ್ರಗಳಲ್ಲಿ ೨೫ ಸ್ಥಾನಗಳನ್ನು ಗೆದ್ದಿತ್ತು. ಇದು ಕಾಂಗ್ರೆಸ್ ನವರಿಗೆ ತಿಳಿಯಲಿ ಎಂದರು.
ಬಿಜೆಪಿ ನಗರಾಧ್ಯಕ್ಷ ಜಗದೀಶ್, ಜಯಲಕ್ಷ್ಮಿ ಈಶ್ವರಪ್ಪ, ಕೆ.ಇ. ಕಾಂತೇಶ್, ಸಂತೋಷ್ ಬಳ್ಳೆಕೆರೆ, ಇ. ವಿಶ್ವಾಸ್, ಉಪಮೇಯರ್ ಶಂಕರ್ ಗನ್ನಿ ಮೊದಲಾದವರಿದ್ದರು.
ಎಲ್ಲಾ ಕಡೆ ಮಳೆಯಾಗುತ್ತಿದೆ. ರೈತರಿಗೆ ಸಂತೋಷವಾಗಿದೆ, ಪ್ರತಿಬಾರಿಯೂ ತುಂಗಾ ನದಿ ತುಂಬಿದಾಗ ಬಿಜೆಪಿ ಕಾರ್ಯಕರ್ತರು ಬಾಗಿನ ಅರ್ಪಿಸುವುದು ವಾಡಿಕೆ. ಆ ಮೂಲಕ ತುಂಗಾ ಮಾತೆಗೆ ನಮಿಸಿ ಈ ನಾಡಿನ ಜನ ನೆಮ್ಮದಿಯಿಂದ ಇರುವಂತೆ ಪ್ರಾರ್ಥಿಸಲಾಗಿದೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಕಸ್ಮಾತ್ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾದರೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ
-ಕೆ.ಎಸ್.ಈಶ್ವರಪ್ಪ