ಹೆತ್ತವ್ವ ಹಠಾತ್ ನಿಧನರಾಗಿದ್ದಾರೆ..ಇಡೀ ಮನೆಯೇ ಶೋಖ ಸಾಗರದಲ್ಲಿದೆ. ಬಂಧು ಬಾಂದವರು ನೆರೆದಿದ್ದಾರೆ. ಶವಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ಕರುಳು ಕುಡಿಯಾದ ಮಗಳು ನಾನು ಪರೀಕ್ಷೆ ಬರೆದು ಬರುವೆ ಆ ನಂತರ ಅಮ್ಮನ ಶವಸಂಸ್ಕಾರ ಮಾಡಿ ಎಂದು ಕಣ್ಣೀರಾಗುತ್ತಾಳೆ. ಮಗಳ ಇಚ್ಚೆಯಂತೆ ಕುಟುಂಬದವರು ಆಕೆಯನ್ನು ಪರೀಕ್ಷೆಗೆ ಕಳಿಸುತ್ತಾರೆ.
ಇದು ಸ್ಫೂರ್ತಿ ಎಂಬ ವಿದ್ಯಾರ್ಥಿನಿಯ ಮಾದರಿ ಕಾರ್ಯ. ಹೊಸನಗರ ತಾಲೂಕು ಕೋಡೂರು ಸಮೀಪದ ಶಾಂತಪುರದ ಅನುರಾಧ ಎಂಬ ಮಹಿಳೆ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸೋಮವಾರ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಮನೆಗೆ ಅಮ್ಮನ ಶವ ತರಲಾಯಿತು. ಮಂಗಳವಾರ ಬೆಳಗ್ಗೆ ಮಗಳು ಸ್ಫೂರ್ತಿಗೆ ಬಿಎಸ್ಸಿ ಕೃಷಿ ಪದವಿಗೆ ಕೃಷಿಕೋಟಾದಲ್ಲಿ ಪ್ರವೇಶ ಪಡೆಯಲು ಪ್ರಾಯೋಗಿಕ ಪರೀಕ್ಷೆ ಇತ್ತು. ಅಮ್ಮನ ಶವ ಮನೆಯಲ್ಲಿದ್ದರೂ ಮಗಳು ಪರೀಕ್ಷೆ ಬರೆಯುತ್ತೇನೆ ಎಂದು ಹೇಳುತ್ತಾಳೆ. ಶಿವಮೊಗ್ಗದ ಕೃಷಿ ಕಾಲೇಜಿನಲ್ಲಿ ಬೆಳಗ್ಗೆ ೯ ಗಂಟೆಗೆ ಪರೀಕ್ಷೆಗೆ ಬಂದ ಯುವತಿ ಪರೀಕ್ಷೆ ಮುಗಿಸಿ ಮನೆಗೆ ಹೋದ ಮೇಲೆ ಅಮ್ಮನ ಶವಸಂಸ್ಕಾರ ನೆರವೇರಿಸಲಾಯಿತು.
ಸಹಪಾಠಿಗಳ ಮೂಲಕ ಅಮ್ಮನ ಶವ ಮನೆಯಲ್ಲಿದ್ದರೂ, ಪರೀಕ್ಷೆಗೆ ಬಂದಿದ್ದ ಸ್ಫೂರ್ತಿಯ ವಿಚಾರ ತಿಳಿಯುತ್ತಿದ್ದಂತೆ ಎಲ್ಲರಿಂದ ಆಕೆಗೆ ಮೆಚ್ಚುಗೆ ಮತ್ತು ಸಾಂತ್ವನದ ಮಾತುಗಳು ಬಂದವು.
ಶಾಂತಪುರದ ನಾಗರಾಜ್ ಮತ್ತು ಅನುರಾಧ ದಂಪತಿ ಪುತ್ರಿ ಸ್ಫೂರ್ತಿ ಶಿವಮೊಗ್ಗದ ಮಹೇಶ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.೯೦ ಅಂಕ ಪಡೆದಿದ್ದು, ಸಿಇಟಿಯನ್ನು ಬರೆದಿದ್ದಾಳೆ. ಬಿಎಸ್ಸಿ ಕೃಷಿ ಪದವಿ ಮಾಡುವ ಇಚ್ಚೆ ಹೊಂದಿರುವ ಸ್ಫೂರ್ತಿ ಇಂತಹ ನೋವಿನ ಸಂದರ್ಭದಲ್ಲಿಯೂ ಪರೀಕ್ಷೆ ಬರೆಯುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ
previous post