ಸೊರಬ ತಾಲ್ಲೂಕಿನಲ್ಲಿ ಮಳೆಯಿಂದ ಸುಮಾರು ೭೦ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಫಲಾನುಭವಿಗಳಿಗೆ
ಸ್ಥಳದಲ್ಲಿಯೇ ರೂ ೧೦ಸಾವಿರ ಪರಿಹಾರ ನೀಡುವಂತೆ ತಾಲ್ಲೂಕು ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ
ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದರು. ಗುರುವಾರ ತಾಲ್ಲೂಕಿನ ವರದಾ ನದಿ ಪ್ರವಾಹದಿಂದ
ಹಾನಿಗೀಡಾದ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ನೆರೆಪೀಡಿತ
ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಮಂತ್ರಿ
ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಮಳೆಯಿಂದ ಮನೆಗಳಿಗೆ ಹಾನಿಯಾಗಿದ್ದರೆ ಸ್ಥಳದಲ್ಲಿಯೇ ಕಂದಾಯ
ಅಧಿಕಾರಿಗಳು ಪರಿಶೀಲನೆ ನಡೆಸಿ ರೂ ೧೦ಸಾವಿರ ಪರಿಹಾರವಿತರಿಸುವಂತೆ ತಿಳಿಸಿದ್ದಾರೆ. ಸಂಪೂರ್ಣ ಮನೆಗಳು
ಹಾಳಾಗಿದ್ದರೆ ಗರಿಷ್ಠ ರೂ ೫ಲಕ್ಷದವರೆಗೂ ಪರಿಹಾರ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಯಾವುದೇ ಕಾರಣಕ್ಕೂ ಅತಿವೃಷ್ಟಿಯಿಂದ ಹಾನಿಯಾದ ಮನೆ ಹಾಗೂ ರಸ್ತೆಗಳ ಅಭಿವೃದ್ಧಿಗೆ ಅನುದಾನ ಕೊರತೆ ಇಲ್ಲ.
ಅದಕ್ಕಾಗಿಯೇ ರೂ ೫೦೦ಕೋಟಿ ಅನುದಾನ ಮೀಸಲಿಡಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರತಿದಿನ ನೆರೆಪೀಡಿತ
ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಿದರು.
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ತಾಲ್ಲೂಕಿನ ಚಂದ್ರಗುತ್ತಿ ಹೋಬಳಿಯ ನೆಲ್ಲಿಕೊಪ್ಪ ಹಾಗೂ ಪುರ
ಗ್ರಾಮಗಳು ವರದಾ ನದಿ ಪ್ರವಾಹದಿಂದ ಪ್ರತಿವರ್ಷ ಮುಳುಗಡೆಯಾಗುತ್ತಿವೆ. ಶಾಶ್ವತವಾಗಿ ವಸತಿ ಕಲ್ಪಿಸುವ
ನಿಟ್ಟಿನಲ್ಲಿ ಆಶ್ರಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ ಮಳೆಗಾಲದಲ್ಲಿ
ಮಾತ್ರ ತಮ್ಮ ಗ್ರಾಮವನ್ನು ಸ್ಥಳಾಂತರ ಮಾಡಿ ಎನ್ನುವ ಗ್ರಾಮಸ್ಥರು ಮಳೆಗಾಲ ಮುಗಿದ ನಂತರ ಅಲ್ಲಿಯೇ
ವಾಸವಾಗಲು ಇಷ್ಟಪಡುತ್ತಾರೆ. ಈ ಬಾರಿ ಅವರಿಗೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ತಹಶೀಲ್ದಾರ್ ಶೋಭಾಲಕ್ಷ್ಮೀ, ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಎಂ.ಡಿ.ಉಮೇಶ್,
ಕಡಸೂರು ಶಿವಕುಮಾರ್, ಕೃಷ್ಣಮೂರ್ತಿ ಕೊಡಕಣಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ತಾಲ್ಲೂಕಿನ ಚಂದ್ರಗುತ್ತಿ ಹೋಬಳಿಯ ನೆಲ್ಲಿಕೊಪ್ಪ ಹಾಗೂ ಪುರ
ಗ್ರಾಮಗಳು ವರದಾ ನದಿ ಪ್ರವಾಹದಿಂದ ಪ್ರತಿವರ್ಷ ಮುಳುಗಡೆಯಾಗುತ್ತಿವೆ. ಶಾಶ್ವತವಾಗಿ ವಸತಿ ಕಲ್ಪಿಸುವ
ನಿಟ್ಟಿನಲ್ಲಿ ಆಶ್ರಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲಾಗಿದೆ– ಕುಮಾರ್ ಬಂಗಾರಪ್ಪ,ಶಾಸಕ