ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಬದಲಾಯಿಸಿರುವುದನ್ನು ವಿರೋಧಿಸಿ ಮತ್ತು ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯಿಸಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣಗುರು ಜೀವನ ಚರಿತ್ರೆಯನ್ನು ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ತೆಗೆದು ೭ ನೇ ತರಗತಿಯ ಕನ್ನಡ ಐಚ್ಛಿಕ ವಿಷಯಕ್ಕೆ ಬದಲಾಯಿಸಿದೆ. ಇದನ್ನು ಓದಲು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿ ಈಗ ಇರುವಂತೆಯೇ ೧೦ ನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿ ನಾರಾಯಣ ಗುರುಗಳ ಜೀವನ ಚರಿತ್ರೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೋಹಿತ್ ಚಕ್ರತೀರ್ಥ ಸಮಿತಿ ಭಗತ್ ಸಿಂಗ್, ಬಸವಣ್ಣ, ಕುವೆಂಪು, ಅಂಬೇಡ್ಕರ್ ಅವರ ಚರಿತ್ರೆಯ ಪಾಠಗಳಲ್ಲಿ ಆಗಿರುವ ಲೋಪ ದೋಷಗಳನ್ನು ಆಯಾ ಮೇಲ್ವರ್ಗದ ಸ್ವಾಮೀಜಿಗಳ ಹೋರಾಟದ ಎಚ್ಚರಿಕೆ ಬಂದಾಗ ತಿದ್ದಿಕೊಳ್ಳಲಾಗಿದೆ. ಆದರೆ, ಮಹಾನ್ ಸಂತ ಶೈಕ್ಷಣಿಕ ಕ್ರಾಂತಿಯನ್ನೇ ಉಂಟು ಮಾಡಿದ ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಚರಿತ್ರೆಯನ್ನು ಮಾತ್ರ ತೆಗೆದು ಹಾಕಲಾಗಿದೆ. ಇದನ್ನು ನಮ್ಮ ಸಮಾಜ ಒಪ್ಪುವುದಿಲ್ಲ. ಈ ಹಿಂದೆಯೂ ಕೂಡ ಜನವರಿ ೨೬ ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧ ಚಿತ್ರದ ಟ್ಯಾಬ್ಲೋಗೆ ನಿರಾಕರಿಸಲಾಗಿತ್ತು ಎಂದು ದೂರಿದರು.
ಇದರ ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇದಕ್ಕಾಗಿ ೫೦೦ ಕೋಟಿ ರೂ. ಮೀಸಲಿಡಬೇಕು. ನಿಗಮ, ಮಂಡಳಿಗಳ ನೇಮಕಾತಿಯಲ್ಲಿ ಈಡಿಗ ಸಮಾಜಕ್ಕೆ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಚಾರ ವೇದಿಕೆಯ ಪದಾಧಿಕಾರಿಗಳಾದ ಪ್ರವೀಣ್ ಹಿರೇಇಡಗೋಡು, ಮುಡುಬ ರಾಘವೇಂದ್ರ, ಕೆ.ಎಲ್. ಉಮೇಶ್, ಟೆಂಕಬೈಲ್ ಲೋಕೇಶ್, ಕೆ.ಪಿ. ಲಿಂಗೇಶ್, ವಿ.ಹೆಚ್. ಶಿವಮೂರ್ತಿ, ಸುಧಾಕರ್ ಶೆಟ್ಟಿಹಳ್ಳಿ ,ಮೋಹನ್, ಯೋಗೀಶ್, ಹೂವಪ್ಪ, ವೀರಭದ್ರಪ್ಪ, ಮರಿಯಪ್ಪ ನಾಯಕ, ರಾಜೇಶ್, ಪುನಿತ್ ಬೆಳ್ಳೂರು ಮೊದಲಾದವರಿದ್ದರು.
ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ: ಶ್ರೀರೇಣುಕಾನಂದ ಸ್ವಾಮೀಜಿ
ನಮ್ಮ ಸಮಾಜಕ್ಕೆ ಬ್ರಹ್ಮಶ್ರೀ ನಾರಾಯಣ ಗುರು(ಈಡಿಗರ ಅಭಿವೃದ್ಧಿ ನಿಗಮ) ನಿಗಮ ರಚಿಸಬೇಕು ಎಂದು ನಿಟ್ಟೂರು ಬ್ರಹ್ಮಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ಶ್ರೀರೇಣುಕಾನಂದ ಸ್ವಾಮೀಜಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಸಮಾಜ ಈಡಿಗ, ಬಿಲ್ಲವ, ನಾಮಧಾರಿ ಮುಂತಾದ ೨೬ ಪಂಗಡಗಳನ್ನು ಹೊಂದಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದೆ ಉಳಿದಿದೆ. ಈ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ನೀಡುತ್ತಾ ಬಂದಿದ್ದೇವೆ. ಆದರೆ, ಇದುವರೆಗೂ ಸರ್ಕಾರ ಪ್ರತ್ಯೇಕ ನಿಗಮ ರಚಿಸದೇ ನಮ್ಮ ಸಮಾಜವನ್ನು ನಿರ್ಲಕ್ಷ್ಯದಿಂದ ಕಾಣುತ್ತಿದೆ. ಯಾವುದೇ ಪ್ರಯೋಜನವಿಲ್ಲದ ೫ ವಸತಿ ಶಾಲೆಗಳಿಗೆ ಶ್ರೀ ನಾರಾಯಣಗುರುಗಳ ಹೆಸರನ್ನಿಟ್ಟು ಸಮಾಜಕ್ಕೆ ಭಾರಿ ಕೊಡುಗೆ ನೀಡಿದ ಹಾಗೇ ಸರ್ಕಾರ ಹಾಗೂ ಸಚಿವರು ಪ್ರಚಾರ ಪಡೆಯುತ್ತಿದ್ದಾರೆ ಎಂದು ದೂರಿದರು.
ನಮ್ಮ ಸಮಾಜದ ಮೇಲೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ತಕ್ಷಣವೇ ಈಡಿಗರ ಅಭಿವೃದ್ಧಿ ನಿಗಮ ರಚಿಸಬೇಕು. ಅದಕ್ಕೆ ೫೦೦ ಕೋಟಿ ರೂ. ಅನುದಾನ ನೀಡಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನಚರಿತ್ರೆಯನ್ನು ಹಿಂದೆ ಇದ್ದಂತೆ ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.