Malenadu Mitra
ರಾಜ್ಯ ಶಿವಮೊಗ್ಗ

ಹಿಂದೂಗಳ ಮೇಲಿನ ದೌರ್ಜನ್ಯ ಕೊನೆಗಾಣಬೇಕು: ಸಂಸದ ರಾಘವೇಂದ್ರ ಆಗ್ರಹ

ಹಿಂದು ಕಾರ್ಯಕರ್ತರು ಕೈಗಳಿಗೆ ಬಳೆ ತೊಟ್ಟಿಲ್ಲ. ಜಿಹಾದಿಗಳಿಗೆ ಬೆನ್ನು ತೋರಿಸಿಲ್ಲ. ಎದೆಯೊಡ್ಡಿ ನಿಲ್ಲುವ ಶಕ್ತಿ ನಮಗಿದೆ. ಯಾವುದೇ ಕಾರಣಕ್ಕೂ ಇನ್ಮುಂದೆ ಇನ್ನೊಬ್ಬ ಹಿಂದು ಕಾರ್ಯಕರ್ತನ ನೆತ್ತರು ಮತ್ತೆ ಹರಿಯದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಇದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಗ್ರಹ.
ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಶುಕ್ರವಾರ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷದ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದರೂ ಹಿಂದುಗಳಿಗೆ ರಕ್ಷಣೆ ಸಿಗುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಮತೀಯವಾದಿಗಳು ಕ್ಯಾನ್ಸರ್‌ನಂತೆ ಹಬ್ಬಿದ್ದಾರೆ. ರಾಜ್ಯದಲ್ಲೂ ಉತ್ತರ ಪ್ರದೇಶ ಮಾದರಿ ಆಡಳಿತ ಜಾರಿಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಆ ನಿಟ್ಟಿನಲ್ಲೂ ಚರ್ಚೆಗಳು ನಡೆಯುತ್ತಿವೆ. ಆದಷ್ಟು ಬೇಗ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕೊನೆಯಾಗಬೇಕಿದೆ ಎಂದು ಒತ್ತಾಯಿಸಿದರು.
ಹಿಂದೂ ಸಮಾಜದ ಮುಖಂಡ ಯಧು ಕೃಷ್ಣ ಮಾತನಾಡಿ,ಹಿಂದೂ ಸಮಾಜ ಬಿಜೆಪಿಯನ್ನು ಗೆಲ್ಲಿಸಿರುವುದು ಪಕ್ಷದ ನಾಯಕರನ್ನು ಕಾರ್ ನಲ್ಲಿ ಓಡಾಡಿಸಲು ಅಲ್ಲ, ಅವರಿಗೆ ಹಿಂದೂ ಸಮಾಜ ರಕ್ಷಣೆ ಮಾಡಲು ಆಗದಿದ್ದರೆ ಎಚ್ಚರಿಕೆ ಕೊಡಲಾಗುತ್ತದೆ ಬಿಜೆಪಿ ನಾಯಕರ ಎದುರಿನಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಮುಸ್ಲಿಮರು ಒಂದು ಕ್ಷಣ ಯೋಚಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಅದು ಎಚ್ಚೆತ್ತುಕೊಳ್ಳಬೇಕು. ಮುಸ್ಲಿಂ ಮುಖಂಡರು ತಮ್ಮ ಸಮಾಜದಲ್ಲಿರುವ ಇಂತಹ ಕೆಟ್ಟವರಿಗೆ ಬುದ್ಧಿ ಹೇಳಿ ತಿದ್ದಬೇಕು. ಅವರು ಹೆಬ್ಬಾವನ್ನು ಸಾಕುತ್ತಿದ್ದಾರೆ. ಕೊನೆಗೊಂದು ದಿನ ಹೆಬ್ಬಾವೇ ಅವರನ್ನು ನುಂಗುತ್ತದೆ. ಎಚ್ಚರವಿರಲಿ ಎಂದರು.
ಪ್ರತಿಭಟನಾ ಸಭೆಯಲ್ಲಿ ಪ್ರಮುಖರಾದ ಕೆ.ಎಸ್. ಈಶ್ವರಪ್ಪ, ಪಟ್ಟಾಭಿರಾಂ, ವಾಸುದೇವ್, ಎಂ.ಬಿ. ಭಾನುಪ್ರಕಾಶ್, ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಸುನಿತಾ ಅಣ್ಣಪ್ಪ, ಚನ್ನಬಸಪ್ಪ ಮೊದಲಾದವರಿದ್ದರು.

ನಾರಾಯಣಗುರು ವಿಚಾರ ವೇದಿಕೆ ವತಿಯಿಂದ ಪ್ರತಿಭಟನೆ

ಶಿವಮೊಗ್ಗ : ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಬಂಧಿಸಿ ಮೃತನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ವಿಶ್ವಮಾನವ ಸಂದೇಶವನ್ನು ಇಡೀ ಮಾನವಕುಲಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರು ಅಗತ್ಯವಾಗಿ ಪಾಲಿಸಬೇಕಾಗಿರುವ ಸಂದರ್ಭದಲ್ಲಿ ಕೆಲವು ಸಮಾಜಘಾತುಕ ದುಷ್ಟಶಕ್ತಿಗಳು ಅರಾಜಕತೆ ಸೃಷ್ಠಿ ಮಾಡುವುದರ ಜೊತೆಗೆ ಸಮಾಜದಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ಬದುಕಲು ಬಿಡದೇ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ದುಷ್ಟ ಶಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಹಾಗೂ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸರ್ಕಾರಿ ನೌಕರಿ ನೀಡುವುದರ ಜೊತೆಗೆ ೧ ಕೋಟಿ ರೂ. ಪರಿಹಾರವನ್ನು ಅವರ ಕುಟುಂಬಕ್ಕೆ ಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಮುಖರಾದ ಪ್ರವೀಣ್ ಹಿರೇಇಡಗೋಡು, ಉಮೇಶ್ ಕೆ.ಎಲ್., ಲಿಂಗೇಶ್ ಕೆ.ಪಿ., ವಿಕಾಸ್ ಕುನ್ನೂರು, ಹೊದಲ ಶಿವಕುಮಾರ್, ವೀರಭದ್ರಪ್ಪ ಇಂಡವಳ್ಳಿ, ಸಂದೇಶ್ ನಾಯಕ್, ಮೋಹನ್ ಸಿಂಧುವಾಡಿ, ಹರಿಯಪ್ಪ ನಾಯಕ್, ಸುಧಾಕರ್ ಶೆಟ್ಟಿಹಳ್ಳಿ. ಕೇಶವಮೂರ್ತಿ, ಎಂ.ಕೆ. ರಮೇಶ್, ನಟರಾಜ್, ಶಿವಪ್ಪ, ಗಣಪತಿ, ವಸಂತ ಪೂಜಾರಿ, ಅಖಿಲೇಶ್, ಗಣೇಶ್, ಲಿಂಗರಾಜ್ ಎಸ್.ಎನ್. ಮೊದಲಾದವರಿದ್ದರು.

ಜೈ,ಜೈ ಯೋಗಿ ಘೋಷಣೆ ಕೂಗಿದ ಕಾರ್ಯಕರ್ತರು
ಬಿಜೆಪಿ ನಾಯಕರ ವಿರುದ್ದವೇ ತಿರುಗಿಬಿದ್ದ ಕಾರ್ಯಕರ್ತರು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೈ,ಜೈ ಎನ್ನುತ್ತಾ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ನಾಯಕರ ವಿರುದ್ಧವೇ ಹರಿಹಾಯ್ದ ಘಟನೆ ಶುಕ್ರವಾರ ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ನಡೆಯಿತು.
ಮಂಗಳವಾರ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕೊಲೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಶುಕ್ರವಾರ ನಗರದ ಗೋಪಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ಸಭೆಯ ಕೊನೆಯಲ್ಲಿ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸುವ ಸಂದರ್ಭದಲ್ಲಿ ಕೆಲವು ಯುವಕರು ಆಕ್ರೋಶ ವ್ಯಕ್ತಪಡಿಸುತ್ತಾ ಯೋಗಿ ಜೈ,ಜೈ ಎಂದು ಘೋಷಣೆ ಕೂಗಿ ಯೋಗಿ ಸರ್ಕಾರದ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾನೂನು ತರಬೇಕು ಎಂದು ಒತ್ತಾಯಿಸಿದರು.
ಹಿಂದೂ ಯುವಕರ ಹೆಣದ ಮೇಲೆ ರಾಜಕಾರಣ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಸಮಾಧಾನಪಡಿಸಲು ತೆರಳಿದ ಬಿಜೆಪಿ ಮುಖಂಡ ಚನ್ನಬಸಪ್ಪರನ್ನು ಕೆಲವು ಯುವಕರು ತರಾಟೆಗೆ ತೆಗೆದುಕೊಂಡರು. ನಮಗೆ ಬುದ್ಧಿ ಹೇಳಲು ಬರಬೇಡಿ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಿರುವಾಗ ಮುಖಂಡರು ಭಾಷಣ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ. ಮುಖಂಡ ಭಾಷಣ ಬೇಕಿಲ್ಲ. ಕೂಡಲೇ ಹಿಂದೂ ಯುವಕರ ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಸಹಜವಾಗಿ ಹಿಂದೂ ಸಮಾಜದಲ್ಲಿ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ಹಿರಿಯರು ಎಲ್ಲವನ್ನು ತ್ಯಾಗ ಮಾಡಿ ಪಕ್ಷ ಕಟ್ಟಿದ್ದಾರೆ. ರಾಜೀನಾಮೆ ಕೊಡುವುದು ಹೇಡಿಗಳ ಲಕ್ಷಣ. ನಮ್ಮ ಕಾರ್ಯಕರ್ತರಿಗೆ ಪ್ರಬುದ್ದತೆ ಕಡಿಮೆ. ರಾಜೀನಾಮೆ ಎಲ್ಲದಕ್ಕೂ ಉತ್ತರವಲ್ಲ, ಆಕ್ರೋಶದಿಂದ ಕೊಟ್ಟಿರಬಹುದು ಅದನ್ನು ವಾಪಸ್ ತೆಗೆದುಕೊಳ್ಳಿ ಎಂದು ವಿನಂತಿಸುತ್ತೇನೆ. ಈ ಪಕ್ಷವನ್ನು ಯಾರು ಬಿಟ್ಟರೂ ಇನ್ನೊಬ್ಬರು ಸೇರ್ಪಡೆಗೊಳ್ಳುತ್ತಾರೆ. ರಾಜೀನಾಮೆ ಕೊಟ್ಟವರು ಕೂಡ ಬಿಜೆಪಿಯನ್ನು ಬಿಡುವುದಿಲ್ಲ. ಏಕೆಂದರೆ ಈ ಪಕ್ಷದ ಸಿದ್ಧಾಂತವೇ ದೇಶ ಕಟ್ಟುವುದಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದಿಟ್ಟ ಹೆಜ್ಜೆಯನ್ನು ಕರ್ನಾಟಕದಲ್ಲೂ ಅವಶ್ಯವಿದ್ದರೆ ಜಾರಿಗೆ ತರುತ್ತೇವೆ

ಕೆ.ಎಸ್.ಈಶ್ವರಪ್ಪ , ಶಾಸಕರು

Ad Widget

Related posts

ಎಂಟು ತಿಂಗಳ ಹಿಂದೆಯೇ ಅಶುಭದ ಸುಳಿವು ನೀಡಿದ್ದ ಯೋಗೇಂದ್ರ ಗುರೂಜಿ, ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಸಂದೇಶ ಕಳುಹಿಸಿದ್ದರು

Malenadu Mirror Desk

ನಾರಾಯಣಗುರು ಅಭಿವೃದ್ಧಿ ಕೋಶ ರಚನೆ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಒತ್ತಾಯಕ್ಕೆ ಮಣಿದ ಸರಕಾರ

Malenadu Mirror Desk

ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮ ಹುಳುಕು ಸರಿಪಡಿಸಿಕೊಳ್ಳಲಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.