ಕಲಿತ ಶಿಕ್ಷಣ ಜೀವನಕ್ಕೆ ಆದರ್ಶವಾಗಿರಬೇಕು. ಮೌಲ್ಯಯುತ ಶಿಕ್ಷಣ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲೆ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜ್ ಸಂಸ್ಕೃತ ಉಪಪನ್ಯಾಸಕ ಡಾ. ಜಯಶಂಕರ್ ಕಂಗಣ್ಣಾರು ಹೇಳಿದರು
ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಶಿವಮೊಗ್ಗ ಇದರ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವಿಭಾಗ, ಎನ್,ಎಸ್.ಎಸ್. ಘಟಕ, ರೇಂಜರ್ಸ್ ಕ್ಲಬ್, ಭಾರತ ಸೇವಾದಳ ಮತ್ತು ಇ.ಎಲ್.ಸಿ. ಅಂಡ್ ಸಿಜೆಸಿ ಕ್ಲಬ್ ಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರದ್ಧೆ ಇದ್ದವನು ಮಾತ್ರ ಗುರಿ ಮುಟ್ಟುತ್ತಾನೆ. ಶ್ರದ್ಧಾವಂತನಾದರೆ ಜ್ಞಾನ ಸಹಜವಾಗಿ ಲಭಿಸುತ್ತದೆ ಎಂದರು.
ಸಂಬಂಧ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಮೂಹ ಮಾಧ್ಯಮಗಳ ಕಳೆದುಹೋಗಿದೆ. ಮೊಬೈಲ್ ಮೇನಿಯಾಕ್ಕೆ ಭವಿಷ್ಯ ಬಲಿಯಾಗಿದೆ. ಕಲ್ಪನೆಗಳಿಗೆ ಬಲಿಯಾಗಿ ವಿದ್ಯಾಭ್ಯಾಸ ಬಿಟ್ಟು ಹೋಗುತ್ತಿದ್ದೇವೆ. ಇದು ಸರಿಯಲ್ಲ. ಕಲಿಕೆ ಎಂದರೆ ಅದು ಜ್ಞಾನದ ತಪಸ್ಸು. ಸಂಪೂರ್ಣವಾಗಿ ಪ್ರೀತಿಯಿಂದ ತೊಡಗಿಸಿಕೊಂಡಾಗ ಮಾತ್ರ ಮಹೋನ್ನತ ಸಾಧನೆ ಮಾಡಬಹುದು ಎಂದರು.
ವಿದ್ಯೆಗೆ ನಾಲ್ಕು ಕೀಲಿಕೈಗಳಿವೆ. ಒಂದು ಮೊದಲ ಮೆಟ್ಟಿಲಾಗಿ ಮೈಯೆಲ್ಲಾ ಕಿವಿಯಾಗಿ ಕೇಳುವುದು. ಎರಡನೇದು ಚೆನ್ನಾಗಿ ಒಳಗಣ್ಣಿನಿಂದ ನೋಡಬೇಕು. ಮೂರನೇದು ಮನೆಗೆ ಹೋಗಿ ಕಲಿತಿದ್ದನ್ನು ಪುನಃ ಮೆಲುಕು ಹಾಕುತ್ತಿರಬೇಕು. ನಾಲ್ಕನೇದು ಕಲಿತಿದ್ದನ್ನು ತಲೆಯಲ್ಲಿ ಅಚ್ಚಳಿಯದೇ ಉಳಿಯಬೇಕು. ಮತ್ತು ಅದು ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಬೇಕು. ಈ ನಾಲ್ಕನ್ನು ಅಳವಡಿಸಿಕೊಂಡಾಗ ಶಿಕ್ಷಣದಲ್ಲಿ ಯಶಸ್ಸು ಸಿಗುತ್ತದೆ ಎಂದರು.
ಸತತ ಅಭ್ಯಾಸ, ನಿರಂತರ ಶ್ರಮ ಮತ್ತು ಶ್ರದ್ಧೆಯಿಂದ ವ್ಯಕ್ತಿತ್ವ ವಿಕಸನದ ದಾರಿಯಲ್ಲಿ ನಡೆದಾಗ ಮತ್ತು ಸಾಧಿಸುವ ಮನಸ್ಸನ್ನು ಹೊಂದಿದಾಗ ಖಂಡಿತವಾಗಿಯೂ ಗುರಿ ತಲುಪಬಹುದಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಡಾ.ಪಿ. ನಾರಾಯಣ್, ನಾಗರಾಜ್ ವಿ. ಕಾಗಲಕರ್, ಪ್ರಾಂಶುಪಾಲ ಬಿ. ರಂಗಪ್ಪ, ಉಪ ಪ್ರಾಂಶುಪಾಲ ಕೆ.ಆರ್. ಉಮೇಶ್ ಮತ್ತಿತರರು ಇದ್ದರು.
ಮೊಬೈಲ್ ಮೇನಿಯಾಕ್ಕೆ ಭವಿಷ್ಯ ಬಲಿಯಾಗಿದೆ. ಕಲ್ಪನೆಗಳಿಗೆ ಬಲಿಯಾಗಿ ವಿದ್ಯಾಭ್ಯಾಸ ಬಿಟ್ಟು ಹೋಗುತ್ತಿದ್ದೇವೆ. ಇದು ಸರಿಯಲ್ಲ. ಕಲಿಕೆ ಎಂದರೆ ಅದು ಜ್ಞಾನದ ತಪಸ್ಸು
-ಡಾ. ಜಯಶಂಕರ್ ಕಂಗಣ್ಣಾರು