“ಹೋರಾಟ ಜೈಲು, ಅನ್ಯಾಯ ಬಯಲು’ ಎಂಬ ತತ್ವದಡಿ ಇಂದು ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ಮಾಡಬೇಕಿದೆ ಎಂದು ಮಾಜಿ ಸ್ಪೀಕರ್ ಹಾಗೂ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಹೇಳಿದರು. ಅವರು ಶುಕ್ರವಾರ ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ರಾಜ್ಯ ರೈತ ಸಂಘ, ಜನಪರ ಹೋರಾಟವೇದಿಕೆ ಹಾಗೂ ಕಾಗೋಡು ಜನಪರ ವೇದಿಕೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಬಿಳಿಗಾರಿನಿಂದ-ಕಾರ್ಗಲ್‌ವರೆಗೆ ನಡೆದ ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಾನುಕುಳಿ ಪಂಚಾಯಿತಿ ಆವರಣದಲ್ಲಿ ರೈತರ ಬೃಹತ್ ಪ್ರತಿಭಟನೆಗೆ ಚಾಲನೆ ನೀಡಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ಅಮಾಯಕ ರೈತ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳಿಸಿದ್ದಾರೆ. ಅರಣ್ಯ ಇಲಾಖೆಯವರಿಗೆ ಸರಿಯಾದ ಕಾನೂನು ತಿಳಿವಳಿಕೆ ಇಲ್ಲವಾಗಿದೆ. ಕಾನೂರು, ಉರುಳುಗಲ್ ಗ್ರಾಮಗಳು ದುರ್ಗಮ ಅರಣ್ಯದಲ್ಲಿವೆ. ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸಿದ್ದ ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಅನ್ಯಾಯದ ವಿರುದ್ಧ ಹೋರಾಟ ಹಮ್ಮಿಕೊಂಡಿರುವುದು ಸಕಾಲಿಕ ಕ್ರಮವಾಗಿದೆ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು
.ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿಗಳಾದ ಡಾ.ಎಸ್‌ರಾಮಪ್ಪ ಅವರು ಮಾತನಾಡಿ, ಶರಾವತಿ ಹಿನ್ನೀರು ಪ್ರದೇಶದ ಜನರ ಬದುಕೇ ದುರ್ಗಮವಾಗಿದೆ. ಇಂತಹ ಸನ್ನಿವೇಶದಲ್ಲಿ ಅರಣ್ಯ ಇಲಾಖೆ ಸುಳ್ಳು ಕೇಸುಗಳನ್ನು ಹಾಕುತ್ತಿರುವುದು ಅನ್ಯಾಯವಾಗಿ. ಶರಾವತಿ ಸಂತ್ರಸ್ತರು ಇಂದಿಗೂ ತಮ್ಮ ಭೂಮಿಗೆ ಹಕ್ಕುಪತ್ರಿ ಸಿಗದ ಸ್ಥಿತಿಯಲ್ಲಿದ್ದಾರೆ. ಸರಕಾರದ ಮಟ್ಟದಲ್ಲಿ ಹಾಗೂ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಿದೆ. ಶರಾವತಿ ಮುಳುಗಡೆ ರೈತರ ಸ್ಥಿತಿ ಹೀನಾಯವಾಗಿದೆ. ಪ್ರಜಾಪ್ರಭುತ್ವದಲ್ಲಿ ನಮ್ಮನ್ನು ಹಿಂಸೆ ಮಾಡುತ್ತಿದ್ದಾರೆ ಈಗ ಬದುಕಬೇಕು ಎಂದರೆ ಹೋರಾಟ ಮಾಡಬೇಕು. ಉರುಳುಗಲ್ ಹೋರಾಟ ಒಂದು ಬುನಾದಿಯಾಗಿದ್ದು, ಇನ್ನುಮುಂದೆ ಹೋರಾಟ ದೊಡ್ಡದಾಗಿ ಬೆಳೆಯಬೇಕು ಎಂದರು.
ಬಿಳಿಗಾರಿನಿಂದ ಆರಂಭವಾದ ಪಾದಯಾತ್ರೆಯಲ್ಲಿ ಸುರಿವ ಮಳೆಯನ್ನೂ ಲೆಕ್ಕಿಸದೆ ರೈತರು ಸುಮಾರು ೨೦ ಕಿಲೋಮೀಟರ್ ನಡೆದು ತಮ್ಮ ಆಕ್ರೋಶ ವ್ಯಕ್ತಮಾಡಿದರು. ಸಂಜೆ ಕಾರ್ಗಲ್‌ನ ಅರಣ್ಯಾಧಿಕಾರಿಗಳ ಕಚೇರಿ ತಲುಪಿದ ಪಾದಯಾತ್ರೆ ಬಳಿಕ ಅಲ್ಲಿ ಬೃಹತ್ ಸಭೆ ನಡೆಸಿ ಅರಣ್ಯ ಇಲಾಖೆಯ ದೌರ್ಜನ್ಯವನ್ನು ಖಂಡಿಸಿತು. ಜನರಪರ ಹೋರಾಟ ವೇದಿಕೆಯಲ್ಲಿ ಮುಖಂಡ ಜಿ.ಟಿ.ಸತ್ಯನಾರಾಯಣ್ ಪಾದಯಾತ್ರೆಯನ್ನು ಯಾಕಾಗಿ ಹಮ್ಮಿಕೊಳ್ಳಲಾಗಿತ್ತು ಎಂಬ ಬಗ್ಗೆ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಡಾ.ರಾಜನಂದಿನಿ ಕಾಗೋಡು, ತಾಲ್ಲೂಕುಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಶೋಕ ಬರದವಳ್ಳಿ,ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ರಾಜ್ಯ ರೈತ ಸಂಘದ ಮುಖಂಡ ಶಿವಾನಂದ ಕುಗ್ವೆ, ಚಿಂತಕ ಸಿರಿವಂತೆ ಚಂದ್ರಶೇಖರ್, ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ,ಆಮ್ ಆದ್ಮಿ ಪಕ್ಷದ ವಿ.ಕೆ.ವಿಜಯಕುಮಾರ್,ತ್ಯಾಗಮೂರ್ತಿ ವಕೀಲರು,ಪದ್ಮರಾಜ್ ಚಪ್ಪರಮನೆ,ಪ್ರವೀಣ ಹಿರೇಇಡಗೋಡು, ಭಾನುಕೊಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸೋಮರಾಜ್, ಆಮ್‌ಆದ್ಮಿ ಸುಭಾಷ್, ಬಿ.ಸಿ.ಲಕ್ಷ್ಮಿನಾರಾಯಣ,ಓಂಕಾರ್ ಅಮೃತರಾಸ್ ಅಣ್ಣಪ್ಪ ತುಮರಿ. ರವಿ ಅಳೂರು. ಭಾನುಕುಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್. ವಿಜಯ ಆಡಗಳಲೆ. ಸುಧಾಕರ ಸಸಿಗೊಳ್ಳಿ. ರೈತ ಸಂಘದ ದೀನೇಶ್ ಶಿರವಾಳ.ಲಿಲ್ಲಿ ತುಮರಿ ಮಹಿಳಾ ಹೋರಾಟಗಾರ್ತಿ. ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಂಘದ ಅಧ್ಯಕ್ಷೆ ಸಂಧ್ಯಾಸಿಗಂದೂರು, ರಾಘು ಸಸಿಗೊಳ್ಳಿ. ದೇವರಾಜ್ ಕಪ್ಪದೂರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆಪ್ರಭಾವತಿ ಚಂದ್ರಶೇಖರ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಅಹೋರಾತ್ರಿ ಧರಣಿ:
ಪ್ರತಿಭಟನಾ ಸ್ಥಳಕ್ಕೆ ಸಾಗರ ತಹಸೀಲ್ದಾರ್ ಅವರು , ಸ್ಥಳಕ್ಕೆ ಬರುತ್ತಾರೆ ಎಂದು ಪೊಲೀಸರು ತಿಳಿಸಿದಾಗ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಧರಣಿ ಮುಂದುವರಿಸಿದ್ದಾರೆ.
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ಕೊಡಿಸಲು ದೊಡ್ಡ ಮಟ್ಟದ ಹೋರಾಟಗಳು ನಡೆಯಬೇಕಿದೆ. ನಮ್ಮ ಜನಪ್ರತಿನಿಧಿಗಳು ಮತ್ತು ಸರಕಾರ ಅವರ ಬಗ್ಗೆ ಗಮನ ಹರಿಸಬೇಕು. ಪ್ರಜಾಪ್ರಭುತ್ವ ಸರಕಾರದಲ್ಲಿ ಪ್ರಜೆಗಳು ನಿರ್ಲಕ್ಷ್ಯಕ್ಕೊಳಗಾಗಬಾರದುಡಾ.ಎಸ್.ರಾಮಪ್ಪ, ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಸಿಗಂದೂರು
ನ್ಯಾಯ ಸಿಗುವತನಕ ಈ ಹೋರಾಟ ಮುಂದುವರಿಯಲಿದೆ. ಜಿಲ್ಲೆಯಲ್ಲಿ ರೈತರ ಮೇಲೆ ಸರಕಾರದ ದೌರ್ಜನ್ಯ ನಿರಂತರವಾಗಿದೆ. ಅನ್ನ ಕೊಡುವ ಸಮುದಾಯ ಆತಂಕದಲ್ಲಿ ಬದುಕುತ್ತಿದೆ
ಮಲ್ಲಿಕಾರ್ಜುನ ಹಕ್ರೆ