Malenadu Mitra
ರಾಜ್ಯ ಶಿವಮೊಗ್ಗ

ಬಿಜೆಪಿಗೆ ಧ್ವಜ ಹಿಡಿಯುವ ಶಕ್ತಿ ನೀಡಿದ್ದೇ ಕಾಂಗ್ರೆಸ್, ಕಾಂಗ್ರೆಸಿಗರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ: ಮಧು ಬಂಗಾರಪ್ಪ

ರಾಷ್ಟ್ರ ಧ್ವಜವನ್ನು ವಿರೋಧಿಸಿ ಅವಮಾನ ಮಾಡಿದವರ ಪೀಳಿಗೆ ಇಂದು ಧ್ವಜದ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ. ಅವರಿಗೆ ಕೈಯಲ್ಲಿ ರಾಷ್ಟ್ರಧ್ವಜ ಹಿಡಿಯುವ ಶಕ್ತಿಕೊಟ್ಟಿರುವುದು ಕಾಂಗ್ರೆಸ್ ಪಕ್ಷ ಎನ್ನುವುದನ್ನು ಮರೆಯಬಾರದು ಎಂದು ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಮಧುಬಂಗಾರಪ್ಪ ಹೇಳಿದರು.
ಬುಧವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ನ ಸಹಸ್ರಾರು ನಾಯಕರ ಬಲಿದಾನವಾಗಿದೆ. ಅವರ ಶ್ರಮದಿಂದಗಳಿಸಿದ್ದ ಸ್ವಾತಂತ್ರ್ಯ ಮತ್ತು ಶ್ರೇಯಸ್ಸನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ದೇಶದ ದಾಸ್ಯದ ಸಂಕೋಲೆ ಬಿಡಿಸಲು ಹಿಂದೂ,ಮುಸ್ಲಿಂ ,ಕ್ರೈಸ್ತ ಸೇರಿದಂತೆ ಸರ್ವಧರ್ಮೀಯರ ನೆತ್ತರು ಚೆಲ್ಲಿದೆ. ಆದರೆ ಇಂದು ಧರ್ಮಗಳ ನಡುವೆ ಬೆಂಕಿ ಹಚ್ಚುವುದರಲ್ಲಿಯೇ ಬಿಜೆಪಿ ತನ್ನ ರಾಜಕೀಯ ಬೇಳೆಬೇಯಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕಾಶ್ಮೀರಿ ಫೈಲ್ಸ್ ಸಿನೆಮಾವನ್ನು ಉಚಿತವಾಗಿ ತೋರಿಸಿ ಮತರಾಜಕಾರಣ ಮಾಡುವ ಬಿಜೆಪಿ, ೨೫ ರೂ. ಪಡೆದು ರಾಷ್ಟ್ರ ಧ್ವಜ ಮಾರುತ್ತಿದೆ. ರಾಷ್ಟ್ರಧ್ವಜದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ ಎಂದು ಹೇಳಿದ ಮಧುಬಂಗಾರಪ್ಪ, ಎಐಸಿಸಿ ಆದೇಶದಂತೆ ದೇಶದೆಲ್ಲೆಡೆ ಆಗಸ್ಟ್ ತಿಂಗಳಲ್ಲಿ ೭೫ ಕಿ.ಮೀಟರ್ ಪಾದಯಾತ್ರೆ ಮಾಡುತ್ತಿದೆ. ರಾಜ್ಯದಲ್ಲಿಯೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಸೂಚನೆಯಂತೆ ಪಾದಯಾತ್ರೆ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟ ಮತ್ತು ಅಂದು ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನ ಕುರಿತು ಪಾದಯಾತ್ರೆಯಲ್ಲಿ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಅತೀವೃಷ್ಟಿ ಪರಿಹಾರ ವಿತರಣೆಯಲ್ಲಿ ಲೋಪ:

ರಾಜ್ಯದಲ್ಲಿ ಮಹಾಮಳೆಯಿಂದ ಅಪಾರ ಪ್ರಮಾಣದ ಆಸ್ತಿ ಹಾಗೂ ಜೀವಹಾನಿಯಾಗಿದೆ. ಸರಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಮನೆ ಬಿದ್ದವರು ಪರಿಹಾರ ಕೇಳಿದರೆ ನೀವೆ ಮನೆ ಬೀಳಿಸಿಕೊಂಡು ಬಂದಿದ್ದೀರಿ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಬೆಳೆ ಹಾನಿ ಪ್ರದೇಶಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ ಎಂದು ಮಧು ಬಂಗಾರಪ್ಪ ದೂರಿದರು.
ಕೋವಿಡ್ ಸಂತ್ರಸ್ತರಿಗೆ ಪರಿಹಾರವಿಲ್ಲ:

ಕೋವಿಡ್‌ನಿಂದ ಮೃತರಾದವರಿಗೆ ಸರಕಾರದಿಂದ ಪರಿಹಾರ ನೀಡಲಾಗುತ್ತಿದೆ ಎಂದು ಸರಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾದ ಸೊರಬದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನಿರಾಕರಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸರಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಮಾತು ತಪ್ಪಿದ ಮುಖ್ಯಮಂತ್ರಿ:
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಇನ್ನುಮುಂದೆ ನೋಟಿಸ್ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ ಜಿಲ್ಲೆಯಾದ್ಯಂತ ಈಗಲೂ ನೋಟಿಸ್ ನೀಡುತ್ತಿರುವ ಅರಣ್ಯ ಇಲಾಖೆ ಬಡ ರೈತರನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಅಲೆದಾಡಿಸುತ್ತಿದೆ. ಸಂಸದರು ಇನ್ನು ಒಂದು ವರ್ಷ ಅರಣ್ಯಭೂಮಿ ಸಾಗುವಳಿದಾರರಿಗೆ ತೊಂದರೆಯಿಲ್ಲ ಎಂದು ಹೇಳಿದ್ದಾರೆ. ಅಂದರೆ ಚುನಾವಣೆ ಬಂದಿರುವ ಕಾರಣ ಅವರು ಈ ರೀತಿಯ ಹೇಳಿಕೆ ನೀಡಿ ರೈತರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸೊರಬದಲ್ಲಿ ಪಾದಯಾತ್ರೆ:

ಸೊರಬದಲ್ಲಿ ಗುರುವಾರ ಬೆಳಗ್ಗೆಯಿಂದ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಪಾದಯಾತ್ರೆ ಆಯೋಜಿಸಲಾಗಿದೆ. ೧೨ ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಈ ಪಾದಯಾತ್ರೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಆಗಮಿಸುವರು ಎಂದು ಹೇಳಿದರು.

ಜಿಲ್ಲೆಗೊಂದು ಪ್ರಣಾಳಿಕೆ


ರಾಷ್ಟ್ರೀಯ ಕಾಂಗ್ರೆಸ್ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಈ ಬಾರಿ ಪಕ್ಷದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಜಿಲ್ಲೆಗಳಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಬೇಕೆಂಬ ಸಲಹೆ ಬಂದಿದೆ. ಸಿದ್ದರಾಮಯ್ಯರ ನೇತೃತ್ವದಲ್ಲಿ ಪಕ್ಷ ಅಧಿಕಾರದಲ್ಲಿದ್ದಾಗ ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ಪಕ್ಷ ಕೊಟ್ಟ ಅವಕಾಶವನ್ನು ಬಳಸಿಕೊಂಡು ಜನರ ನಡುವೆ ಓಡಾಡಿ ಸಮಸ್ಯೆ ಅರಿತು ಪ್ರಣಾಳಿಕೆ ಸಿದ್ಧಮಾಡಲಾಗುವುದು. ಡಾ.ಜಿ.ಪರಮೇಶ್ವರ್ ಮತ್ತು ಪ್ರೊ.ಕೆ.ಇ.ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಸೂಡಾ ಮಾಜಿ ಅದ್ಯಕ್ಷ ಎನ್.ರಮೇಶ್, ಪ್ರಮುಖರಾದ ಜಿ.ಡಿ.ಮಂಜುನಾಥ್, ಶ್ರೀನಿವಾಸ್ ಕರಿಯಣ್ನ,ವಕ್ತಾರರಾದ ರಮೇಶ್ ಶಂಕರಘಟ್ಟ, ದೀಪಕ್ ಸಿಂಗ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ದಾಸ್ಯದ ಸಂಕೋಲೆಯಿಂದ ಭಾರತವನ್ನು ಬಿಡಿಸುವ ಸ್ವತಂತ್ರ ಹೋರಾಟದಲ್ಲಿ ಹಿಂದೂ,ಮುಸ್ಲಿಂ, ಕ್ರೈಸ್ತ ಸೇರಿದಂತೆ ಸರ್ವಧರ್ಮಿಯರ ನೆತ್ತರು ಚೆಲ್ಲಿದೆ ಎಂಬುದನ್ನು ಮರೆಯಬಾರದು. ಬಿಜೆಪಿಯವರಿಗೆ ರಾಷ್ಟ್ರಧ್ವಜದ ಬಗ್ಗೆ ಮಾತನಾಡಲು ನೈತಿಕ ಹಕ್ಕು ಇಲ್ಲ
ಮಧು ಬಂಗಾರಪ್ಪ ,ಕೆಪಿಸಿಸಿ ಚುನಾವಣೆ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ

Ad Widget

Related posts

ನಮ್ಮ ಹಾಡು, ನಮ್ಮ ಹಸೆ, ಜನಮನ ಸೆಳೆದ ದೀವರ ಸಾಂಸ್ಕೃತಿಕ ವೈಭವ

Malenadu Mirror Desk

ಅತಿಥಿ ಉಪನ್ಯಾಸಕರ ಕಾಯಂಗೊಳಿಸಬೇಕು: ಆಯನೂರು ಮಂಜುನಾಥ್

Malenadu Mirror Desk

ಬಜೆಟ್‌ನಲ್ಲಿ ನೀರಾವರಿಗೆ ಆದ್ಯತೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.