ಶಿವಮೊಗ್ಗ ನಗರದ ಅಮೀರ್ ಅಹಮದ್ ವೃತ್ತದಲ್ಲಿ ಹಾಕಿದ್ದ ವೀರಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಸೋಮವಾರ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ಉದ್ವಿಗ್ನತೆಗೆ ತಿರುಗಿ ಒಬ್ಬ ಯುವಕನಿಗೆ ದುಷ್ಕರ್ಮಿ ಗಳು ಚಾಕು ಇರಿದಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ಗಾಂಧಿಬಜಾರಿನ ಉಪ್ಪಾರ ಕೇರಿಯಲ್ಲಿ ಯುವಕ ಪ್ರೇಮ್ ಸಿಂಗ್(೨೦) ಎಂಬ ಯುವಕನಿಗೆ ಚಾಕು ಚುಚ್ಚಲಾಗಿದ್ದು, ಅತನನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಆರ್‌ಎಎ- ಸೇರಿದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.
ಘಟನೆಗೆ ಕಾರಣವೇನು?:
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಶಿವಮೊಗ್ಗದಲ್ಲಿ ಅದ್ಧೂರಿ ಯಾಗಿತ್ತು. ಶಿವಪ್ಪನಾಯಕ ವೃತ್ತದಲ್ಲಿ ಹಿಂದೂಪರ ಸಂಘಟನೆಗಳು ವೀರ ಸಾವರ್ಕರ್ ಅವರ ಉದ್ದನೆಯ ಫ್ಲೆಕ್ಸ್ ಹಾಕಿದ್ದರು. ಇದನ್ನು ಖಂಡಿಸಿದ ಮತ್ತೊಂದು ಕೋಮಿನ ಗುಂಪು ಅದನ್ನು ತೆರವುಮಾಡಿ ಇಲ್ಲದಿದ್ದರೆ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಕೂಡಾ ಹಾಕಿ ಎಂದು ಒತ್ತಾಯಿಸಿತು. ಈ ಸಂದರ್ಭ ಪರಸ್ಪರ ವಾಗ್ವಾದ ನಡೆದು, ಕಿಡಿಗೇಡಿಗಳು ಸಾವರ್ಕರ್ ಫ್ಲೆಕ್ಸ್ ಅನ್ನು ತೆರವು ಮಾಡಿದರು. ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ವಿರೋಧ ವ್ಯಕ್ತ ವಾಯಿತು. ಈ ಸಂದರ್ಭ ಉಂಟಾದ ಪ್ರಕ್ಷುಬ್ಧ ವಾತಾವರಣ ತಿಳಿಗೊಳಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು.
ಈ ಎಲ್ಲ ಗಲಾಟೆಗೆ ಸಂಬಂಧವೇ ಇಲ್ಲದ ಪ್ರೇಮ್‌ಸಿಂಗ್ ತಾನು ಕೆಲಸ ಮಾಡುತ್ತಿದ್ದ ಬಟ್ಟೆ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುವಾಗ ದುಷ್ಕರ್ಮಿಗಳು ಉಪ್ಪಾರ ಕೇರಿ ಸಮೀಪ ಚಾಕುವಿನಿಂದ ಚುಚ್ಚಿದ್ದಾರೆ.
ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಎರಡು ಗುಂಪುಗಳು ಮುಖಾಮುಖಿ ಯಾಗುವುದನ್ನು ತಪ್ಪಿಸಲಾಗಿದ್ದು ನಗರ ಮತ್ತು ಭದ್ರಾವತಿ ನಗರದಲ್ಲಿ ಎರಡೂ ಕಡೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ, ಫ್ಲೆಕ್ಸ್ ವಿಚಾರವಾಗಿ ನಡೆದ ಘರ್ಷಣೆ ಯಲ್ಲಿ ಓರ್ವನಿಗೆ ಚಾಕು ಇರಿದಿರುವುದು ದೃಢಪಟ್ಟಿದೆ.
-ಎಸ್ಪಿ ಲಕ್ಷ್ಮಿ ಪ್ರಸಾದ್
ಮಾಹಿತಿ ಪಡೆದ ಸಚಿವ
ಶಿವಮೊಗ್ಗ ನಗರದಲ್ಲಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಪೂರ್ವ ವಲಯದ ಐಜಿಪಿ ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.