ಕುವೆಂಪು ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ 4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನಾಂಕವನ್ನು ಮುಂದೂಡಬೇಕೆಂದು ಆಗ್ರಹಿಸಿ ಎನ್ಎಸ್ಯುಐ ಕಾರ್ಯಕರ್ತರು ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಕುವೆಂಪು ವಿಶ್ವವಿದ್ಯಾಲಯವು ಪದವಿ ಕಾಲೇಜುಗಳ 4 ಮತ್ತು 6ನೇ ಸೆಮಿಸ್ಟರ್ಗೆ ತರಗತಿಗಳು ಪ್ರಾರಂಭವಾಗಿ 2 ತಿಂಗಳಲ್ಲೇ ಪರೀಕ್ಷಾ ದಿನಾಂಕ ನಿಗದಿಪಡಿಸಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಆಗ್ರಹಿಸಿದರು.ನಿಗದಿತ ಪಠ್ಯಗಳನ್ನು ಪೂರ್ಣಗೊಳಿಸಲು ಇನ್ನೂ ಕನಿಷ್ಠ ಒಂದು ತಿಂಗಳಾದರೂ ಬೇಕು ಎಂದು ಉಪನ್ಯಾಸಕರು ತಿಳಿಸುತ್ತಿದ್ದಾರೆ. ಹಾಗೆಯೇ ಈ ವರೆಗೂ ಕೇವಲ 1 ಇಂಟರ್ನಲ್ ಪರೀಕ್ಷೆ ನಡೆಸಲಾಗಿದೆ. ಇನ್ನೂ 1 ಇಂಟರ್ನಲ್ ಪರೀಕ್ಷೆ ಬಾಕಿದೆ. ಆದರೆ, ವಿಟಿಯು ಆ.30 ರೊಳಗೆ ನಿಗದಿತ ಪಠ್ಯವನ್ನು ಪೂರ್ಣಗೊಳಿಸುವಂತೆ ಆದೇಶ ಹೊರಡಿಸಿದೆ.ಪಾಠಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದೇ ಇರುವುದರಿಂದ ಇದೇ ರೀತಿಯ ಸನ್ನಿವೇಶದಲ್ಲಿ ದಾವಣಗೆರೆ ವಿವಿಯವರು ಪರೀಕ್ಷೆ ಮುಂದೂಡಿರುವುದನ್ನು ಗಮನಿಸಿ ಕುವೆಂಪು ವಿವಿಯಲ್ಲೂ 4 ಮತ್ತು 6ನೇ ಸೆಮಿಸ್ಟರ್ನ ಪರೀಕ್ಷೆಗಳನ್ನು ಕನಿಷ್ಠ ಒಂದು ತಿಂಗಳು ಪರೀಕ್ಷೆ ಮುಂದೂಡಿ. ಬಾಕಿ ಉಳಿದಿರುವ 1 ಇಂಟರ್ನಲ್ ಪರೀಕ್ಷೆ ನಡೆಸಲು ಹಾಗೂ ಉಪನ್ಯಾಸಕರಿಗೆ ಪೂರ್ಣ ಪಾಠ ಮಾಡಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಕುವೆಂಪು ವಿವಿಯಲ್ಲಿ ಈ ಹಿಂದೆ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ಇತ್ತು. ಕೇವಲ ಅಂಕಪಟ್ಟಿ ಶುಲ್ಕ ಮಾತ್ರ ಪಡೆಯಲಾಗುತ್ತಿತ್ತು. ಆದರೆ ಈ ಬಾರಿ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೂ ಇತರೆ ವಿದ್ಯಾರ್ಥಿಗಳಂತೆ ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ, ಅರ್ಜಿ ಶುಲ್ಕ ವಸೂಲು ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ಕುಲಪತಿಗಳು ಈ ಆದೇಶವನ್ನು ರದ್ದುಗೊಳಿಸಿ, ಹಿಂದಿನಂತೆ ಪರೀಕ್ಷಾ ಶುಲ್ಕ ನಿಗದಿಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಎನ್ಎಸ್ಯುಐ ಜಿಲ್ಲಾಧ್ಯಕ್ಷ ಎಸ್.ಎನ್. ವಿಜಯಕುಮಾರ್, ಕಾರ್ಯಾಧ್ಯಕ್ಷ ಜಿ. ರವಿಕುಮಾರ್, ನಗರಾಧ್ಯಕ್ಷ ಕಿರಣ್, ಗ್ರಾಮಾಂತರ ಅಧ್ಯಕ್ಷ ಹರ್ಷಿತ್, ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಜಂದೋಜಿರಾವ್, ಹೌಫಿಕ್, ಕಾರ್ಯದರ್ಶಿಗಳಾದ ಪ್ರಮೋದ್, ವಿಕ್ರಮ್, ಸಮರ್ಥಗೌಡ್ರ, ಅಭಿಷೇಕ್ ಇನ್ನಿತರರು ಭಾಗವಹಿಸಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಘಟಕದಿಂದ ಜಿಲ್ಲಾಡಳಿತಕ್ಕೆ ಮನವಿ
ಕುವೆಂಪು ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ವೇಳಾಪಟ್ಟಿ ಖಂಡಿಸಿ ಮತ್ತು ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಘಟಕದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಆ.18ರಂದು ಕುವೆಂಪು ವಿವಿ ನೂತನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ್ದು, ಇದರ ಅನ್ವಯ ಪದವಿಯ 4 ಮತ್ತು 6 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆ. 30ರಂದು ಪ್ರಸಕ್ತ ಸೆಮ್ ನ ಕೊನೆಯ ದಿನವೆಂದು ಪ್ರಕಟಿಸಲಾಗಿದೆ. ಸೆ. 7 ರಿಂದ ಪರೀಕ್ಷೆಗಳನ್ನು ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ಪ್ರಸಕ್ತ ಸೆಮ್ ವಿದ್ಯಾರ್ಥಿಗಳಿಗೆ ತರಗತಿಗಳು ಬಹುತೇಕ ಜೂನ್ ನಿಂದ ಆರಂಭವಾಗಿರುವುದರಿಂದ ನೂತನ ಆದೇಶದನ್ವಯ ಈ ಸೆಮ್ ನ ವಿದ್ಯಾರ್ಥಿಗಳಿಗೆ ಅಗತ್ಯಕ್ಕಿಂತ ಕಡಿಮೆ ತರಗತಿ ಅವಧಿಗಳಾಗಿರುವುದರಿಂದ ಪಾಠ ಪ್ರವಚನಗಳು ಸಂಪೂರ್ಣವಾಗದೇ ವಿದ್ಯಾರ್ಥಿಗಳು ಒತ್ತಡದಲ್ಲಿ ಪರೀಕ್ಷೆ ಎದುರಿಸುವಂತಾಗಿದೆ ಎಂದರು.
ಅಲ್ಲದೇ, 2 ನೇ ಸೆಮ್ ನ ವಿದ್ಯಾರ್ಥಿಗಳು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದು, ಕುವೆಂಪು ವಿವಿ ಪದವಿ ವಿದ್ಯಾರ್ಥಿಗಳಿಗೆ ನೂತನವಾಗಿ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯನ್ನು ಹಿಂತೆಗೆದುಕೊಂಡು ಪರೀಷ್ಕರಿಸಿ ವಿದ್ಯಾರ್ಥಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ವೇಳಾಪಟ್ಟಿಯನ್ನು ರಚಿಸಬೇಕೆಂದು ಎಬಿವಿಪಿ ಆಗ್ರಹಿಸಿದೆ. ಅಲ್ಲದೇ, ಪರೀಕ್ಷಾ ಶುಲ್ಕ ಕೂಡ ಕಡಿಮೆ ಮಾಡಬೇಕೆಂದು ಒತ್ತಾಯಿಸಿದೆ. ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಎಬಿವಿಪಿ ಪ್ರಮುಖರಾದ ದರ್ಶನ್, ಲೋಹಿತ್, ಸಣ್ಣಪ್ಪ, ಆದರ್ಶ್, ಮಾಲತೇಶ್ ಮೊದಲಾದವರಿದ್ದರು.