ಶಿವಮೊಗ್ಗ : ವಿಶೇಷಚೇತನ ಮಕ್ಕಳಿಗೆ ಅನುಕಂಪಕ್ಕಿಂತ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಸರ್ಜಿ ಸಮೂಹ ಆಸ್ಪತ್ರೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಧನಂಜಯ ಹೇಳಿದರು.
ಭದ್ರಾವತಿ ನೂತನ ಸತ್ಯ ಸಾಯಿ ಮಂದಿರದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಕಾರಿಗಳು ಹಾಗೂ ಬ್ಲಾಕ್ ಯೋಜನಾ ಸಮನ್ವಯಾಕಾರಿಗಳ ಕಚೇರಿ ವತಿಯಿಂದ ವಿಶೇಷಚೇತನ ಮಕ್ಕಳ ನ್ಯೂನ್ಯತೆ ಕುರಿತು ತಾಲೂಕಿನ ಗೃಹಾಧಾರಿತ ಮಕ್ಕಳ ಪೋಷಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
ಸಮಾಜದಲ್ಲಿ ಬುದ್ಧಿಮಾಂಧ್ಯ ಇಲ್ಲವೇ, ವಿಶೇಷಚೇತನ ಮಕ್ಕಳ ಹೆತ್ತವರ ಕುರಿತು ಚುಚ್ಚಿ ಮಾತನಾಡುವುದು, ನಿಂದನೆ ಮಾಡುವುದು ನಿಲ್ಲಬೇಕು. ಮೊದಲೇ ನೋವು ಅನುಭವಿಸುತ್ತಿರುವ ಅವರಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುಬೇಕು, ಅವರನ್ನು ಹುರಿದುಂಬಿಸಬೇಕು. ಪೋಷಕರಿಗೆ ಮಾನಸಿಕವಾಗಿ ಕಿರಿಕಿರಿ ಉಂಟು ಮಾಡಬಾರದು. ಸ್ಪೂರ್ತಿದಾಯಕ ಮಾತುಗಳನ್ನಾಡಬೇಕು, ನಮ್ಮಂತೆಯೇ ಅವರೂ ಎಂದು ಭಾವಿಸಬೇಕು ಎಂದು ಹೇಳಿದರು.
ವಿಶೇಷಚೇತನರನ್ನು ನಿಭಾಯಿಸುವುದು ಹೋರಾಟವಿದ್ದಂತೆ. ಒಂದು ವೇಳೆ ಅವರಿಗೆ ವಿದ್ಯೆ ಒಲಿಯದಿದ್ದರೆ, ಅವರ ಚಾಕರಿಯನ್ನು ಸ್ವತಃ ಅವರೇ ಮಾಡಿಕೊಳ್ಳುವಂತೆ ತರಬೇತಿ, ಥೆರಫಿಯಂತಹ ಚಿಕಿತ್ಸೆಗಳನ್ನು ನೀಡುವು ಮೂಲಕ ಅವರನ್ನು ಸ್ವಾವಲಂಬಿಗಳಾಗಿರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ದೊಡ್ಡದು. ಈ ಮಕ್ಕಳಿಗೆ ವೈದ್ಯರಿಗಿಂತ ತಂದೆ, ತಾಯಿಗಳೇ ವೈದ್ಯರಿದ್ದಂತೆ. ಹಾಗಾಗಿ ಕೊನೆಯ ಉಸಿರಿರುವ ತನಕ ಜೊತೆಯಲ್ಲಿರುವ ಇವರನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ಬಿಇಒ ನಾಗೇಂದ್ರಪ್ಪ ಮಾತನಾಡಿ, ಶಿವಮೊಗ್ಗ ಸರ್ಜಿ ಪೌಂಡೇಷನ್‌ನ ಡಾ.ಧನಂಜಯ ಸರ್ಜಿ ಅವರು ಕೇವಲ ಆರೋಗ್ಯ ಕ್ಷೇತ್ರದಲ್ಲಷ್ಟೇ ಅಲ್ಲ, ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸತ್ಯಸಾಯಿ ಸಂಸ್ಥೆಯ ರಾಜ್ಯ ಸಂಚಾಲಕರಾದ ಪ್ರಭಾಕರ್ ಬೀರಯ್ಯ ಮಾತನಾಡಿ, ವಿಶೇಷಚೇತನ ಮಕ್ಕಳು ಹಾಗೂ ಪೋಷಕರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭ ಸರ್ಜಿ ಸಮೂಹ ಆಸ್ಪತ್ರೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಧನಂಜಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಕಾರಿಗಳು, ಪೋಷಕರು, ವಿಶೇಷಚೇತನ ಮಕ್ಕಳು ಹಾಜರಿದ್ದರು.