Malenadu Mitra
ರಾಜ್ಯ ಶಿವಮೊಗ್ಗ

2 A ಮೀಸಲಾತಿ ಕೊಡದಿದ್ದರೆ, ಬಿಜೆಪಿ ಪಂಚಮಸಾಲಿಗಳ ವಿಶ್ವಾಸ ಕಳೆದುಕೊಳ್ಳಲಿದೆ

ಪ್ರತಿಬಾರಿ ಯಡಿಯೂರಪ್ಪನವರು ಚುನಾವಣಾ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪಂಚಮಸಾಲಿ ಲಿಂಗಾಯತ ಮಲೆಗೌಡ ಸಮಾಜವನ್ನು ೨ಎ ಮೀಸಲಾತಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದರೂ ಭರವಸೆಯನ್ನು ಮರೆತಿದ್ದಾರೆ. ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜದ ಆಶೀರ್ವಾದ ಕಳೆದುಕೊಳ್ಳಲಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್, ಪಂಚಮಸಾಲಿ ಮಹಾಸಭಾ ಧರ್ಮಕ್ಷೇತ್ರ ಕೂಡಲಸಂಗಮ ಶಿವಮೊಗ್ಗ ಜಿಲ್ಲಾ ಘಟಕ ವತಿಯಿಂದ ಲಿಂಗಾಯತ ಪಂಚಮಸಾಲಿ, ಲಿಂಗಾಯತ ಮಲೆಗೌಡ ಸಮುದಾಯವನ್ನು ಪ್ರವರ್ಗ ‘2ಎ’ ಮೀಸಲಾತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮತ್ತು ಮುಖ್ಯಮಂತ್ರಿಗಳಿಗೆ ಜ್ಞಾಪನಾ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಲ್ಲಿ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೆರವಣಿಗೆಯ ಮೂಲಕ ಪಂಚಮಸಾಲಿ ಸಮಾಜದ ಬಾಂಧವರೊಂದಿಗೆ ಗೋಪಿವೃತ್ತದವರೆಗೆ ಪಾದಯಾತ್ರೆ ನಡೆಸಿ, ನಂತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ದ್ದಾಗ ಸೆಪ್ಟೆಂಬರ್ 21-2021 ರಲ್ಲಿ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಅವರು ಅಧಿಕಾರ ತ್ಯಾಗ ಮಾಡಿದ ಮೇಲೆ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ೩ ಬಾರಿ ಭರವಸೆ ನೀಡಿ ವಿಫಲವಾಗಿದೆ. ಕೊನೆಗೆ ಅನಿವಾರ್ಯವಾಗಿ ಮುಖ್ಯ ಮಂತ್ರಿಗಳ ಮನೆ ಮುಂಭಾಗ ಧರಣಿ ಕೂರುವ ತೀರ್ಮಾನ ಮಾಡಿದಾಗ ಸಂಧಾನ ಸಭೆ ನಡೆಸಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದಲ್ಲದೇ, ಆಯೋಗ ರಚಿಸಿ ಸಮೀಕ್ಷೆಗೆ ತೀರ್ಮಾನ ಮಾಡಲಾಗಿತ್ತು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದರು.

ಮಾಜಿ ಶಾಸಕ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಇದು ೫ನೇ ಹಂತದ ಅಂತಿಮ ಹೋರಾಟ, ಈಗಾಗಲೇ ಎಲ್ಲಾ ಪಕ್ಷದ ಎಲ್ಲಾ ನಾಯಕರಿಗೆ ಸಮಾಜದ ಬಗ್ಗೆ ತಿಳಿಸಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತುಳಿತಕ್ಕೊಳಗಾದ ಸಮಾಜ ನಮ್ಮದು. ನಮ್ಮ ಮಕ್ಕಳು ಕೂಡ ವಿದ್ಯಾವಂತರಾಗಬೇಕು. ಐಎಎಸ್, ಐಪಿಎಸ್ ಆಗಬೇಕೆಂಬ ಹಂಬಲ ಎಲ್ಲರಿಗೂ ಇದೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಇನ್ನು ಕಾಯಲು ನಾವು ಸಿದ್ಧರಿಲ್ಲ. ತಕ್ಷಣ ಸ್ಪಂದಿಸದಿದ್ದರೆ ಪರಿಣಾಮ ಮುಂದಿನ ದಿನಗಳಲ್ಲಿ ಬೊಮ್ಮಾಯಿ ಸರ್ಕಾರ ಅನುಭವಿಸಲಿದೆ ಎಂದು ಎಚ್ಚರಿಸಿದರು. ಸಮಾಜದ ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಪ್ರೊ. ವಿಜಯಕುಮಾರ್, ರುದ್ರೇಗೌಡ ಕಡೆಮನೆ, ಎಂ.ಎಸ್.ಕುಮಾರ್, ಎಂ.ಪಿ.ವಿಜಯ್‌ಕುಮಾರ್, ನವೀನ್, ಲಿಂಗಪ್ಪಣ್ಣ ಕೆಳಗೇರಿ ಮೊದಲಾದವರಿದ್ದರು.

ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗಮನಕ್ಕೆ ತಂದು ಮೀಸಲಾತಿ ಬೇಡಿಕೆ ಈಡೇರಿಸಲು ಸರ್ವ ಪ್ರಯತ್ನ ಮಾಡಲಾಗವುದು.

ಬಿ.ವೈ. ರಾಘವೇಂದ್ರ
ಸಂಸದ

Ad Widget

Related posts

ಪ್ರತಿ ತಾಲೂಕಲ್ಲೂ ಆಮ್ಲಜನಕ ಘಟಕ

Malenadu Mirror Desk

ಶಿವಮೊಗ್ಗದಲ್ಲಿ ತಗ್ಗಿದ ಕೊರೊನ, 5 ಸಾವು, 197 ಸೋಂಕು

Malenadu Mirror Desk

ಶರಾವತಿ ಸಂತ್ರಸ್ತರ ಪರವಾಗಿ ಸಿಎಂ ಮನೆಗೂ ಮುತ್ತಿಗೆ ಹಾಕ್ತೇವೆ ಮನೆಗೆ ಬರುತ್ತೇವೆಂದರೆ ನಮ್ಮ ಪ್ರತಿನಿಧಿಯಾದ ಸಂಸದರಿಗೇಕೆ ಭಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.