ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಪೀಠಾಧಿಪತಿ ಶ್ರೀ ಮುರುಘಾ ಶರಣರು ಸೇರಿದಂತೆ ಐದು ಜನರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಫೋಕ್ಸೋ ಕಾಯಿದೆ ಅಡಿಯಲ್ಲಿ ದೂರು ದಾಖಲಾಗಿದೆ.
ಮೈಸೂರು ಒಡನಾಡಿ ಸಂಸ್ಥೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಮಠವೇ ನಡೆಸುತ್ತಿರುವ ಪ್ರೌಢಶಾಲೆಯ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೌಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವಿದ್ದು, ಹಾಸ್ಟೆಲ್‌ನಿಂದ ತಪ್ಪಿಸಿಕೊಂಡು ಬಂದಿದ್ದ ಅಪ್ರಾಪ್ತ ಬಾಲಕಿಯರು ಬೆಂಗಳೂರಿಗೆ ಬಳಿಕ ಮೈಸೂರಿನ ಒಡನಾಡಿ ಸಂಸ್ಥೆಯ ಸಂಪರ್ಕಕ್ಕೆ ಬಂದಿದ್ದರು.
ಒಡನಾಡಿ ಸಂಸ್ಥೆಯು ಮಕ್ಕಳಿಗೆ ರಕ್ಷಣೆ ನೀಡಿ ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು. ಪೋಕ್ಸೋ ಕಾಯಿದೆಯನ್ವಯ ತಕ್ಷಣವೇ ದೂರು ದಾಖಲಿಸುವ ನಿಯಮವಿದೆ. ಅದರಂತೆ ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ.
ಮುರುಘಾ ಶ್ರೀಗಳು, ವಾರ್ಡನ್ ರಶ್ಮಿ, ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯರ ಅವರುಗಳು ಕ್ರಮವಾಗಿ ಒಂದರಿಂದ ಐದನೇ ಆರೋಪಿಯಾಗಿದ್ದಾರೆ. ಈ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.