ನಾಡು ಕಂಡ ಶ್ರೇಷ್ಠ ದಾರ್ಶನಿಕ , ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯನ್ನು ಜಿಲ್ಲಾ ಆರ್ಯ ಈಡಿಗರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೆ. ೧೦ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಚರಿಸಲಾಗುವುದು ಎಂದು ಈಡಿಗರ ಸಂಘದ ಜಿಲ್ಲಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ ಹೇಳಿದರು.
ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಾರಾಯಣಗುರು ಜಯಂತಿ ಆಚರಿಸಲು ಒಪ್ಪಿಗೆ ನೀಡಿರುವುದು ಸಂತೋಷದ ವಿಷಯವಾಗಿದೆ. ಬ್ರಹ್ಮಶ್ರೀ ನಾರಾಯಣಗುರುಗಳು ಕೇವಲ ಒಂದು ಸಮುದಾಯಕ್ಕೆ ಗುರುವಾಗಿರದೆ ಸರ್ವ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದರು. ಅವರ ದಿನಾಚರಣೆಯನ್ನು ಆರ್ಯ ಈಡಿಗರ ಸಂಘ ಮತ್ತು ಸಮಾಜದ ಇತರೆ ಸಂಘಗಳ ಆಶ್ರಯದಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ಆಚರಿಸುತ್ತಿದದ್ದೇವೆ. ಜಿಲ್ಲಾ ಉಸ್ತುವಾರಿ ಸಚಿ ಡಾ.ಕೆ.ಸಿ. ನಾರಾಯಣಗೌಡ ಕಾರ್ಯಕ್ರಮ ಉದ್ಘಾಟಿಸುವರು ಎಂದು ತಿಳಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಇಂಧನ ಸಚಿವ ವಿ. ಸುನಿಲ್ ಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಬಿ.ಕೆ. ಸಂಗಮೇಶ್, ಕೆ.ಬಿ. ಅಶೋಕ್ ನಾಯ್ಕ್, ಆಯನೂರು ಮಂಜುನಾಥ್, ಎಸ್.ಎಲ್. ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿಶೆಟ್ಟಿ, ಡಿ.ಎಸ್. ಅರುಣ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಸ್.ಎಂ. ಹರೀಶ್ ವಿಶೇಷ ಉಪನ್ಯಾಸ ನೀಡಲಿದ್ದು, ಭದ್ರಾವತಿ ವಾಸು ತಂಡದವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ, ಜಿಪಂ ಸಿಇಒ, ಪಾಲಿಕೆ ಆಯುಕ್ತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಸೇರಿದಂತೆ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸಿ. ರಾಮಚಂದ್ರ ಮಾತನಾಡಿ, ನಾರಾಯಣಗುರುಗಳ ಚಿಂತನೆಗಳಲ್ಲಿ ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಅವರ ತತ್ವಗಳನ್ನು ಇಂದಿನ ಸಮಾಜಕ್ಕೆ ತಲುಪಿಸಬೇಕು ಈ ನಿಟ್ಟಿನಲ್ಲಿ ಜಯಂತಿ ಆಚರಣೆ ಒಂದು ಹಬ್ಬವಾಗಬೇಕು. ಈ ಕಾರ್ಯಕ್ರಮಕ್ಕೆ ಸಮಾಜ ಎಲ್ಲಾ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿದರು.
ಸಂಘದ ಪದಾಧಿಕಾರಿ ಜಿ ಡಿ ಮಂಜುನಾಥ್ ಮಾತನಾಡಿ, ನಾರಾಯಣ ಗುರುಗಳು ಸಮಾಜ ಸುಧಾರಕರು ಜಾತಿ ಭೇದಗಳ ಅಳಿಸಿದ ಮಹಾನ್ ವ್ಯಕ್ತಿ, ಇಂತಹ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ತಪ್ಪದೇ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ, ಎನ್.ಹೊನ್ನಪ್ಪ, ಬಿಲ್ಲವ ಸಂಘದ ಅಧ್ಯಕ್ಷ ಭುಜಂಗಯ್ಯ, ಬ್ರಹ್ಮಶ್ರೀ ನಾರಾಯಣಗುರು ಆರ್ಯ ಈಡಿಗ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ರೀತಾ ಪೂಜಾರಿ, ಹರೀಶ್ ಎಸ್.ಎನ್, ಪ್ರಮುಖರಾದ ಎಸ್.ಎಂ. ಮಹೇಶ್, ಪ್ರೊ.ಕಲ್ಲನ, ವಕೀಲರಾದ ಕೆ.ಎಲ್. ಉಮೇಶ್, ಹೊದಲ ಶಿವು, ಲಲಿತ ಹೊನ್ನಪ್ಪ ಮುಂತಾದವರಿದ್ದರು.


