ಶಿವಮೊಗ್ಗ ನಗರದ ಪ್ರತಿಷ್ಟಿತ ಹಿಂದೂ ಮಹಾಸಭಾದ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗೆ ಸಕಲ ಸಿದ್ಧತೆಯಾಗಿದೆ. ಹಿಂದೂ ಮಹಾಸಭಾ ಕಾರ್ಯಕರ್ತರು ಇಡೀ ನಗರವನ್ನು ಕೇಸರಿಮಯಗೊಳಿಸಿದ್ದಾರೆ. ಕುರುಕ್ಷೇತ್ರ ಯುದ್ಧಕ್ಕೂ ಮುನ್ನ ಶ್ರೀ ಕೃಷ್ಣ ಅರ್ಜುನನಿಗೆ ನೀಡುವ ಗೀತೋಪದೇಶದ ಪರಿಕಲ್ಪನೆಯಲ್ಲಿ ವಿಶೇಷ ಮಹಾದ್ವಾರ ನಿರ್ಮಾಣ ಮಾಡಲಾಗಿದೆ.
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಗಣಪತಿ ಮೆರವಣಿಗೆ ಮತ್ತು ಅದ್ದೂರಿ ಹಬ್ಬದಾಚರಣೆ ಇರಲಿಲ್ಲ. ಈ ಕಾರಣದಿಂದ ಶಿವಮೊಗ್ಗದ ಹಿಂದೂಮಹಾಸಭಾ ಗಣಪತಿ ರಾಜಬೀದಿ ಉತ್ಸವ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಮೆರವಣಿಗೆಗೆ ಶಿವಮೊಗ್ಗ ಮಾತ್ರವಲ್ಲದೆ ಅಕ್ಕಪಕ್ಕದ ಊರುಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಮಾಮೂಲಿಯಾಗಿದೆ.
ಗಣಪತಿ ರಾಜಬೀದಿ ಉತ್ಸವ ಸಾಗುವ ಮಾರ್ಗವನ್ನು ಸಂಪೂರ್ಣವಾಗಿ ಅಲಂಕಾರ ಮಾಡಲಾಗಿದೆ. ಎಲ್ಲೆಲ್ಲೂ ಕೇಸರಿ ಬಂಟಿಂಗ್ಸ್, ಕೇಸರಿ ಧ್ವಜ ಹಾರಾಡುತ್ತಿವೆ. ನಗರದ ಗಾಂಧಿ ಬಜಾರ್, ನೆಹರು ರಸ್ತೆಯ ಪ್ರವೇಶದ್ವಾರವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ.
ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರ:
ಶಿವಮೊಗ್ಗದ ಪ್ರತಿ ಸರ್ಕಲ್ ಹಾಗೂ ರಸ್ತೆಗಳಲ್ಲಿ ವಾಸುದೇವ ಬಲವಂತ ಫಡ್ಕೆ, ಮಹಾತ್ಮ ಗಾಂಧೀಜಿ , ಚಂದ್ರಶೇಖರ್ ಅಜಾದ್, ಸುಭಾಷ್ ಚಂದ್ರ ಬೋಸ್, ಸಂಗೊಳ್ಳಿ ರಾಯಣ್ಣ ,ಕರ್ತಾರ್ ಸಿಂಗ್ ವಲ್ಲಭಬಾಯ್ ಪಟೇಲ್ ಪಟೇಲ್, ರಾಜ್‌ಗುರು, ಬಾಲಗಂಗಾಧರ ತಿಲಕ್, ಭಗತ್‌ಸಿಂಗ್, ಒನಕೆ ಓಬವ್ವ, ರಾಮಪ್ರಸಾದ್ ಬಿಸ್ಮಿಲ್ಲಾ, ಜತಿನ್ ದಾಸ್, ಕೆ.ಎಂ ಮುನ್ಸಿ, ಮಂಗಲ್ ಪಾಂಡೆ, ಅಷ್ಫಖುಲ್ಲಾ ಖಾನ್, ಭಾರತಿ ಯಾರ್, ಮದನ್ ಲಾಲ್ ದಿಂಘ್ರಾ ಸೇರಿದಂತೆ ಹಲವು ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಗಳನ್ನು ಅಳವಡಿಸಲಾಗಿದೆ.
ಸ್ವಾತಂತ್ರ್ಯ ಅಮೃತಮಹೋತ್ಸವದಂದು ಅಮೀರ್ ಅಹಮದ್ ಸರ್ಕಲ್‌ನಲ್ಲಿ ವಿವಾದಕ್ಕೆ ಕಾರಣವಾಗಿದ್ದ ಸಾವರ್ಕರ್ ಅವರ ಬೃಹತ್ ಪ್ಲೆಕ್ಸ್ ಅಳವಡಿಸಲಾಗಿದೆ.
ಖಾಕಿ ಕಣ್ಗಾವಲು:
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಪೊಲೀಸ್ ಇಲಾಖೆಯಿಂದ ಹಾಗೂ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ವತಿಯಿಂದ ೨೦೦ ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಬಂದೋಬಸ್ತ್ ಕರ್ತವ್ಯಕ್ಕೆ ೩ ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ನಗರಕ್ಕೆ ಬರುವ ಎಲ್ಲಾ ರಸ್ತೆಗಳ ಹೊರವಲಯದಲ್ಲಿ ಚೆಕ್ ಪೋಸ್ಟ್ ತೆರೆದು ತಪಾಸಣೆ ನಡೆಸಲಾಗುತ್ತಿದೆ. ಮೆರವಣಿಗೆ ಸುತ್ತಮುತ್ತ ಸ್ಥಳಗಳ ಕಣ್ಗಾವಲಿಗೆ ಪೊಲೀಸ್ ಇಲಾಖೆಯಿಂದ ಡ್ರೋನ್ ಗಳ ಬಳಕೆ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.