ಶಿಕಾರಿಪುರ: ರೈತರಿಗೆ ಒಂದಿಂಚು ಭೂಮಿ ನೀಡುವ ಕಾರ್‍ಯಕ್ರಮ ನೀಡದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರದ್ದು ಮತ್ತೊಂದೆಡೆ ಬಗರ್‌ಹುಕುಂ ರೈತರನ್ನು ಜೈಲಿಗೆ ಕಳುಹಿಸುವ ಕಾಯ್ದೆ, ಬೆಂಗಳೂರು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಬಗರ್‌ಹುಕುಂ ಸಾಗುವಳಿ ರೈತರ ಹಿತ ಕಾಯುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ ಅದಕ್ಕಾಗಿ ಕೇಂದ್ರ, ರಾಜ್ಯ ಸರಕಾರದ ರೈತ ವಿರೋಧಿ ನೀತಿ ವಿರೋಧಿಸಿ ಹೋರಾಟದ ನೆಲವಾದ ಶಿಕಾರಿಪುರದಿಂದಲೆ ಜೈಲ್‌ಭರೋ ಚಳುವಳಿ ಆರಂಭಿಸಬೇಕು ಈ ನಿಟ್ಟಿನಲ್ಲಿ ರೈತರು ಹೋರಾಟಕ್ಕೆ ಮುಂದಾಗುವುದು ಇಂದಿನ ಅನಿವಾರ್‍ಯ ಆಗಿದೆ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ರೈತರಿಗೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಯಾವುದೆ ವಿಚಾರಣೆ ಇಲ್ಲದೆ ವಜಾಗೊಳಿಸಲಾಗಿದೆ. ರೈತರ ಮೇಲೆ ಭೂಕಬಳಿಕೆ ನ್ಯಾಯಾಲಯ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಬೆಂಗಳೂರಿಗೆ ಅಲೆಯುವಂತೆ ಮಾಡಿರುವುದು ದುರಂತ. ಬಗರ್‌ಹುಕುಂ ರೈತರ ಹಿತ ಕಾಯುವ ಭರವಸೆ ನೀಡಿ ಎಲ್ಲ ಅಧಿಕಾರ ಅನುಭವಿಸಿದ ಬಿ.ಎಸ್.ಯಡಿಯೂರಪ್ಪ ರೈತರಿಗೆ ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ ಎಂದರು.
ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡಬೇಕಿದ್ದ ಕೇಂದ್ರ ಸರಕಾರ ಅರಣ್ಯ ಕಾಯ್ದೆಗೆ ಇನ್ನಷ್ಟು ಬಲತುಂಬುವ ಕೆಲಸ ಮಾಡುತ್ತಿದೆ. ಕೃಷಿಗೆ ಬಳಸುವ ಗೊಬ್ಬರ, ಔಷಧಿ ದರ ಹೆಚ್ಚಳ, ಬೆಂಬಲ ಬೆಲೆ ಘೋಷಣೆಗೆ ಸೀಮಿತವಾಗಿದ್ದು ರಾಜ್ಯದಲ್ಲಿ ಎಲ್ಲಿಯೂ ಖರೀದಿ ಕೇಂದ್ರ ತೆರೆಯಲಿಲ್ಲ. ಮಾರುಕಟ್ಟೆಯಲ್ಲೂ ಉತ್ತಮ ದರ ರೈತನಿಗೆ ಸಿಗುತ್ತಿಲ್ಲ ರೈತರ ಆದಾಯ ಹೆಚ್ಚಿಸುವ ಮೋದಿ ಮಾತು ಹೇಳಿಕೆಗೆ ಮಾತ್ರ ಎನ್ನುವಂತಾಗಿದೆ ಬಿಜೆಪಿ ವಿರುದ್ಧ ರೈತರು ಅಸಹಕಾರ ಚಳುವಳಿ ಆರಂಭಿಸಬೇಕು ಎಂದರು.
ಕಾಂಗ್ರೆಸ್ ಜಿಲ್ಲಾ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಮಾತನಾಡಿ, ಊಳುವವನೆ ಹೊಲದೊಡೆಯ ಕಾಯ್ದೆ ಮೂಲಕ ರಾಜ್ಯದ ೧೫ಲಕ್ಷ ರೈತರಿಗೆ ಭೂಮಿ ನೀಡಿದ್ದು, ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡುವ ಲಕ್ಷಾಂತರ ರೈತರಿಗೆ ಭೂಮಿ ಹಕ್ಕು ನೀಡಿದ್ದು, ಅರಣ್ಯ ಹಕ್ಕು ಕಾಯ್ದೆ, ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ೯೪ಸಿ, ೯೪ಸಿಸಿ ಅಡಿಯಲ್ಲಿ ಹಕ್ಕು ನೀಡುವ ಕಾಯ್ದೆ ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಲಕ್ಷಾಂತರ ಅರ್ಜಿ ವಿಚಾರಣೆ ಇಲ್ಲದೆ ವಜಾಗೊಳಿಸಿದ್ದು ಬಿಜೆಪಿ. ಈಗಾಗಲೆ ಮಂಜೂರು ಮಾಡಿದ್ದ ಭೂಮಿ ಪುನಃ ಅರಣ್ಯ ಇಲಾಖೆಗೆ ಇಂಡೀಕರಣ ಮಾಡಿದ್ದು ಫಹಣಿ ಹೊಂದಿ ಬ್ಯಾಂಕ್‌ನಲ್ಲಿ ಸಾಲಪಡೆದವರ ಜಮೀನು ಇದೀಗ ಅರಣ್ಯ ಇಲಾಖೆ ವಶವಾಗಿಸಿದ್ದು ಬಿಜೆಪಿ. ಭೂಕಬಳಿಕೆ ಕಾಯ್ದೆ ಮೂಲಕ ರೈತರ ಮೇಲೆ ಪ್ರಕರಣ ದಾಖಲಿಸಿದ್ದು ಬಿಜೆಪಿ. ಕೃಷಿಕರಲ್ಲದವರೂ ಕೃಷಿಭೂಮಿ ಪಡೆಯಲು ಕಾಯ್ದೆ ರೂಪಿಸಿದ್ದು ಬಿಜೆಪಿ. ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ರಸಗೊಬ್ಬರ ದರ ಹೆಚ್ಚಳ ಮಾಡಿ ರೈತರು, ಬಡವರ ಜೀವನ ದುಸ್ತರಗೊಳಿಸಿದ ಬಿಜೆಪಿ ವಿರುದ್ಧ ರೈತರು ದಂಗೆ ಏಳಬೇಕು ಗ್ರಾಮಕ್ಕೆ ಬಂದರೆ ಕಾಲಿಡುವುದಕ್ಕೆ ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧು ಬಂಗಾರಪ್ಪ ಮಾತನಾಡಿ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುತ್ತೇನೆ ಎಂದು ತಾಲೂಕಿನ ರೈತರಿಗೆ ಭರವಸೆ ನೀಡುತ್ತಾ ೪೦ವರ್ಷ ರಾಜಕೀಯ ಅಧಿಕಾರ ಪಡೆದ ಬಿ.ಎಸ್.ಯಡಿಯೂರಪ್ಪ ಈಗ ರೈತರನ್ನು ಜೈಲಿಗೆ ಕಳುಹಿಸುವ ಕಾಯ್ದೆ ಜಾರಿಗೆ ತಂದರು. ರೈತರ, ಬಡವರ ಹಿತ ಕಾಯುವುದು ಕಾಂಗ್ರೆಸ್ ಪಕ್ಷ ಮಾತ್ರ. ರೈತ ವಿರೋಧಿ ನೀತಿ ಅನುಸರಿಸುವ ಜತೆ ದೊಡ್ಡ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಬಿಜೆಪಿ ಪಕ್ಷ ಯಾರೂ ನಂಬಬೇಡಿ. ಒಮ್ಮೆ ಮಗ, ಮತ್ತೊಮ್ಮೆ ಅಪ್ಪ ಸಂಸತ್‌ಗೆ, ವಿಧಾನಸಭೆಗೆ ಆಯ್ಕೆಯಾಗಿ ಅಧಿಕಾರ ಅನುಭವಿಸುತ್ತಲೆ ಇದ್ದಾರೆ ಆದರೂ ತಾಲೂಕಿನ ನೀರಾವರಿ ಯೋಜನೆಗೆ ಪಾದಯಾತ್ರೆ ಮಾಡಿದ್ದು ನಾವು ಅದಕ್ಕೆ ಮಂಜೂರಾತಿ ನೀಡಿದ್ದು ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರಕಾರ ಬಿಜೆಪಿ ಕೇವಲ ಜನರಿಗೆ ಸುಳ್ಳು ಭರವಸೆ ನೀಡುತ್ತದೆ ಅದನ್ನು ನಂಬಬೇಡಿರಿ ಎಂದು ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜಗೌಡ ಮಾತನಾಡಿ, ಸೈಕಲ್ ಮೇಲೆ ತಾಲೂಕು ಸುತ್ತಿ ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ನೀಡುತ್ತೇನೆ ಎಂದು ಭರವಸೆ ನೀಡಿ ಎಲ್ಲ ಅಧಿಕಾರ ಅನುಭವಿಸಿದರೂ ರೈತನಿಗೆ ಇನ್ನೂ ನೆಮ್ಮದಿ ಸಿಕ್ಕಿಲ್ಲ. ಪಟ್ಟಣದ ಪುರಸಭೆ, ತಹಸೀಲ್ದಾರ್ ಕಚೇರಿ, ತಾ.ಪಂ. ಎಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗಿದೆ. ತಾಲೂಕಿನಲ್ಲಿ ನೂರಾರು ಕೋಟಿ ಮೌಲ್ಯದ ಕಾಮಗಾರಿ ನಡೆಯುತ್ತಿದೆ ಅವೆಲ್ಲವೂ ಗುಣಮಟ್ಟದಿಂದ ಕೂಡಿಲ್ಲ ಗುತ್ತಿಗೆದಾರರೆ ಪ್ರಧಾನಿಗೆ ದೂರು ನೀಡಿದ್ದಾರೆ ಬಿಜೆಪಿಗೆ ಅಧಿಕಾರದಿಂದ ದೂರ ಇಡಬೇಕು ಈ ನಿಟ್ಟಿನಲ್ಲಿ ಜನತೆ ಚಿಂತನೆ ನಡೆಸಿರಿ ಎಂದರು.
ಸಭೆಗೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಗರ್‌ಹುಕುಂ ರೈತರು ಮೆರವಣಿಗೆ ನಡೆಸಿ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ನಗರದ ಮಹಾದೇವಪ್ಪ, ಮಾಜಿ ಶಾಸಕ ಬಿ.ಎನ್.ಮಹಲಿಂಗಪ್ಪ, ಮುಖಂಡರುಗಳಾದ ನಾಗರಾಜಗೌಡ, ಉಳ್ಳಿ ದರ್ಶನ್, ಭಂಡಾರಿ ಮಾಲತೇಶ್, ಹುಲ್ಮಾರ್ ಮಹೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಶಾಂತವೀರಪ್ಪಗೌಡ, ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ದಯಾನಂದ ಗಾಮ, ಚುರ್ಚಿಗುಂಡಿ ರುದ್ರಗೌಡ್ರು, ಅರುಣ್‌ಕುಮಾರ್, ಶಿವ್ಯಾನಾಯ್ಕ, ಹಿರೇಜಂಬೂರು ಚಂದ್ರಶೇಖರ್, ಬಗರ್‌ಹುಕುಂ ರೈತರು, ಕಾರ್‍ಯಕರ್ತರು ಇದ್ದರು.