ಶಿವಮೊಗ್ಗದಲ್ಲಿ ನಿಷೇಧಿತ ಭಯೋತ್ಪದಕ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಮೇರೆಗೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ರಾಷ್ಟ್ರಧ್ವಜವನ್ನು ಸುಟ್ಟು ಹಾಕಿರವ ಮತ್ತು ಸ್ಪೋಟಕಗಳನ್ನು ಇಟ್ಟುಕೊಂಡಿರುವ ಆರೋಪ ಕೇಳಿ ಬಂದಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆಯ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಮಂಗಳೂರಿನ ಮಾಜ್ ಮುನೀರ್ ಅಹಮದ್ (೨೨) ಮತ್ತು ಶಿವಮೊಗ್ಗ ಸಿದ್ದೇಶ್ವರ ನಗರದ ಸಯ್ಯದ್ ಯಾಸೀನ್ (೨೧) ಬಂಧಿತರು. ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಶಾರೀಕ್ ಎಂಬಾತನ ಬಂಧನವಾಗಬೇಕಿದೆ.
ಐಸಿಸ್ ನಂಟು
ಮೂವರು ಶಂಕಿತರು ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಭಯೋತ್ಪಾದಕ ಕೃತ್ಯಗಳನ್ನು ಮುಂದುವರಿಸುವ ಸಲುವಾಗಿ ಒಳಸಂಚು ರೂಪಿಸಿದ್ದರು ಎಂದು ಆಪಾದಿಸಲಾಗಿದೆ.
ಸ್ಫೋಟಕಗಳು, ರಾಷ್ಟ್ರ ಧ್ವಜ
ಶಂಕಿತರು ಸಾರ್ವಜನಿಕ ಆಸ್ತಿ ಮತ್ತು ಪ್ರಾಣಕ್ಕೆ ಅಪಾಯವಾಗುವ ಸ್ಪೋಟಕಗಳನ್ನು ಇಟ್ಟುಕೊಂಡಿರುವ ಶಂಕೆ ಇದೆ. ಭಾರತದ ರಾಷ್ಟ್ರಧ್ವಜವನ್ನು ಸುಟ್ಟಿರುವುದಾಗಿ ತಿಳಿದು ಬಂದಿದೆ ಎಂದು ಎಫ್‌ಐಆರ್’ನಲ್ಲಿ ತಿಳಿಸಲಾಗಿದೆ.
ಯುಎಪಿಎ ಅಡಿ ಪ್ರಕರಣ
ಬಂಧಿತರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ನಿರ್ಬಂಧ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇಬ್ಬರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆ.೨೯ರವರೆಗೆ ಶಂಕಿತರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.