ಶಿವಮೊಗ್ಗ: ಐಸಿಸ್ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ ನಗರದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರಿನ ಮಾಜ್ ಮುನೀರ್ ಮತ್ತು ಸಿದ್ದೇಶ್ವರ ನಗರದ ಯಾಸೀನ್‌ಗೆ ಹೇಗೆ ಸಂಪರ್ಕ ಬಂದಿತ್ತು. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾರೀಕ್ ಎಲ್ಲಿದ್ದಾನೆ. ಈ ಮೂವರಲ್ಲದೆ ಮತ್ಯಾರಿದ್ದಾರೆ ಮತ್ತು ಮೂವರ ಹಿಂದೆ ಯಾವ ಸಂಘಟನೆಯಿಂದ ಎಂಬಿತ್ಯಾದಿ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಪೊಲೀಸರು ನಡೆಸುತ್ತಿದ್ದಾರೆ.
ಶಂಕಿತರು ಒಂದು ಗುಪ್ತ ಜಾಲವನ್ನು ಸೃಷ್ಟಿ ಮಾಡಿಕೊಂಡು ರಾಜ್ಯದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸುತ್ತಿದ್ದರು ಎಂಬ ಅಂಶ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ. ಉಗ್ರ ಸಂಘಟನೆಯಾದ ಐಸಿಸ್ ಜತೆ ಸಂಪರ್ಕ ಹೊಂದಿರುವುದು ಗೊತ್ತಾಗಿದ್ದು, ಬಾಂಬ್ ತಯಾರಿಕೆಯ ಬಗ್ಗೆ ತರಬೇತಿ ಪಡೆದಿದ್ದರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಸ್ಥಳ ಮಹಜರು:
ಸಿದ್ದೇಶ್ವರ ನಗರದಲ್ಲಿರುವ ಸಯ್ಯದ್ ಯಾಸಿನ್ ನನ್ನು ಆತನ ಮನೆಗೆ ಕರೆತಂದು ಪೊಲೀಸರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು ನಡೆಸಿದ್ದಾರೆ. ಮನೆ ಸಮೀಪ ಇರುವ ಗುರುಪುರದ ತುಂಗಾ ನದಿ ದಂಡೆ ಬಳಿ ಕರೆದೊಯ್ದು ಮಹಜರು ನಡೆಸಿದ್ದಾರೆ. ಯಾಸಿನ್, ಶಾರೀಕ್ ಹಾಗೂ ಮಾಜ್ ಬಾಂಬುಗಳನ್ನು ತಯಾರಿಸಿ ಪ್ರಯೋಗಕ್ಕಾಗಿ ತುಂಗಾ ನದಿಗೆ ಎಸೆಯುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ. ಬಂಧಿತರ ಮೊಬೈಲ್‌ಗಳಿಂದ ಸ್ಫೋಟಕ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ.
ವೈದ್ಯಕೀಯ ಪರೀಕ್ಷೆ:
ಶಂಕಿತ ಉಗ್ರರಾದ ಮಾಜ್ ಮುನೀರ್ ಅಹಮ್ಮದ್ ಹಾಗೂ ಯಾಸಿನ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ವೈದ್ಯಕೀಯ ಪರೀಕ್ಷೆ ನಂತರ ತೀರ್ಥಹಳ್ಳಿ ಡಿವೈಎಸ್‌ಪಿ ಶಾಂತವೀರಯ್ಯ ನೇತೃತ್ವದ ತಂಡ ಮಾಜ್‌ನನ್ನು ಹೆಚ್ಚಿನ ತನಿಖೆಗಾಗಿ ಮಂಗಳೂರಿಗೆ ಕರೆದೊಯ್ದಿದೆ.
ಎಫ್‌ಎಸ್‌ಎಲ್ ತಂಡ ಆಗಮನ:
ಶಿವಮೊಗ್ಗಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್) ಅಧಿಕಾರಿಗಳು ಆಗಮಿಸಿದ್ದಾರೆ. ನಗರದ ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ. ಅಲ್ಲದೇ ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡ ಶಿವಮೊಗ್ಗಕ್ಕೂ ಭೇಟಿ ನೀಡಿ ಇನ್ನಷ್ಟು ಸಾಕ್ಷ್ಯ ಸಂಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳ ತಂಡ ಕೂಡ ಶಿವಮೊಗ್ಗಕ್ಕೆ ಭೇಟಿ ನೀಡಿ ತುಂಗಾ ನದಿ ಹಾಗೂ ಬಂಧಿತ ಆರೋಪಿಗಳ ಮನೆ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿದ್ದಾರೆ.
ಕುಟುಂಬಸ್ಥರಿಂದ ದೂರು:
ಸೈಯ್ಯದ್ ಯಾಸೀನ್ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದು, ಪೋನ್ ಸ್ವೀಚ್ಡ್ ಆಫ್ ಆಗಿದ್ದ ಕಾರಣ ಯಾಸೀನ್ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಶಂಕಿತ ಉಗ್ರ ಸಯ್ಯದ್ ಯಾಸೀನ್ ಅಜ್ಜ ಶಾಮೀರ್ ಖಾನ್ ತಿಳಿಸಿದ್ದಾರೆ.
ಸೈಯ್ಯದ್ ಯಾಸೀನ್ ಒಬ್ಬ ಒಳ್ಳೆಯ ಹುಡುಗ. ಆದರೆ, ಆತನ ತಲೆ ಕೆಡಿಸಲಾಗಿದೆ. ಸೈಯ್ಯದ್ ಯಾಸೀನ್ ಮೊದಲು ಚೆನ್ನಾಗಿ ಓದುತ್ತಿದ್ದು, ಆತ ಇಂಜಿನಿಯರಿಂಗ್ ಕಾಲೇಜಿಗೆ ಹೋದ ಮೇಲೆ ಆತನ ಮಂಗಳೂರು ಸೇರಿದಂತೆ ಇತರ ಸ್ನೇಹಿತರು ತಲೆ ಕೆಡಿಸಿದ್ದಾರೆ ಎಂದು ಯಾಸಿನ್ ಅಜ್ಜ ಶಾಮೀರ್ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಸಯ್ಯದ್ ಯಾಸೀನ್ ತಂದೆ ಅಯ್ಯೂಬ್ ಖಾನ್ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಮೂರು ಜನ ಮಕ್ಕಳು. ಯಾಸೀನ್ ಹಿರಿಯವ. ಈತನಿಗೆ ಓರ್ವ ತಮ್ಮ ಹಾಗೂ ತಂಗಿ ಇದ್ದಾರೆ. ಯಾಸೀನ್ ಚೆನ್ನಾಗಿ ಓದುತ್ತಿದ್ದ ಕಾರಣ ಆತನನ್ನು ಇಂಜಿನಿಯರಿಂಗ್ ಕಾಲೇಜಿಗೆ ಕಳುಹಿಸಲಾಗಿತ್ತು. ಈತ ಈಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದು, ಕಳೆದ ೧೫ ದಿನಗಳ ಹಿಂದೆ ಮನೆಯಿಂದ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದ. ಆದರೆ, ಈಗ ಪೊಲೀಸರು ಬಂದು ಹೇಳಿದಾಗ ನಮಗೆ ಗಾಬರಿಯಾಗಿತ್ತು ಎಂದು ತಿಳಿಸಿದ್ದಾರೆ.
ಸುಳಿವು ನೀಡಿದ ಜಬಿಯುಲ್ಲಾ
ಸಾರ್ವಕರ್ -ಟಿಪ್ಪು ಪ್ಲೆಕ್ಸ್ ವಿಚಾರದ ನಂತರ ಉಂಟಾದ ಗಲಭೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿತದ ಪ್ರಕರಣದಲ್ಲಿ ಬಂಧಿತನಾದ ಜಬಿಯುಲ್ಲಾ ವಿಚಾರಣೆ ವೇಳೆ ಉಗ್ರ ಜಾಲದ ಸಣ್ಣ ಸುಳಿವು ನೀಡಿದ್ದ ಎಂದು ಈ ಬಗ್ಗೆ ಎಸ್ಪಿ ಬಿ.ಎಂ ಲಕ್ಷ್ಮೀ ಪ್ರಸಾದ್ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಜಬಿಯನ್ನು ಕೆಲವು ದಿನ ಪೊಲೀಸ್ ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಿದ ವೇಳೆ ಆತ ಸಿದ್ದೇಶ್ವರ ನಗರದ ಯಾಸಿನ್‌ನ ಚಟುವಟಿಕೆಗಳ ಬಗ್ಗೆ ಒಂದು ಸಣ್ಣ ಸುಳಿವು ನೀಡಿದ್ದ. ತೀವ್ರ ತನಿಖೆ ನಡೆಸಿದ್ದಾಗ ಉಗ್ರ ಜಾಲ ಬಯಲಿಗೆ ಬಂದಿದೆ. ಆದರೆ, ಈ ಘಟನೆಗೂ ಸಾವರ್ಕರ್-ಟಿಪ್ಪು ಗಲಾಟೆಗೂ ಯಾವುದೇ ಸಂಬಂಧ ಇಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ. ಜಬಿಗೂ ಈ ಟೆರರ್ ಲಿಂಕ್‌ಗೂ ಸಂಬಂಧ ಇರುವ ಬಗ್ಗೆಯೂ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಶಂಕಿತ ಉಗ್ರರು ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಕೇಸ್ ದಾಖಲಾಗಿದೆ. ಶಿವಮೊಗ್ಗ ಸುತ್ತಮುತ್ತ ಭಾಗದಲ್ಲಿ ಸರ್ಚ್ ಆಗಿದೆ. ಮಂಗಳೂರು, ಶಿವಮೊಗ್ಗ ಭಾಗದಲ್ಲಿ ಇನ್ನು ರೇಡ್ ಮಾಡೋದು ಇದೆ. ಮೆಟಿರೀಯಲ್ಸ್ ಸೀಜ್ ಆಗುತ್ತಿದೆ. ಬಂಧಿತರ ಜೊತೆ ಸಂಪರ್ಕದಲ್ಲಿ ಇದ್ದವರ ವಿಚಾರಣೆ ಸಹ ಮಾಡಲಾಗುತ್ತದೆ. ಸದ್ಯಕ್ಕೆ ತನಿಖೆ ಮುಂದುವರಿದಿದೆ ಹೀಗಾಗಿ ಬೇರೆನೂ ಹೇಳಲು ಆಗುವುದಿಲ್ಲ.
-ಬಿ.ಎಂ ಲಕ್ಷ್ಮಿಪ್ರಸಾದ್, ಎಸ್ಪಿ ಶಿವಮೊಗ್ಗ