ಸಿಗಂದೂರು ಸೆ.೨೭: ದೇವಿ ಸ್ವರೂಪವಾಗಿರುವ ಮಣ್ಣು, ನೀರು, ಮತ್ತು ಗಾಳಿ ಕಲುಷಿತವಾಗಲು ಬಿಡಬಾರದು ಅವುಗಳ ಸಂರಕ್ಷಣೆಯಿಂದ ಮನು ಕುಲದ ಏಳಿಗೆಗೆ ಸಹಕಾರಿಯಾಗುತ್ತದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮ ಸಾಲಿ ಜಗದ್ಗುರು ಮಹಾ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ಶ್ರೀ ಕ್ಷೇತ್ರ ಸಿಂಗದೂರಿನಲ್ಲಿ ಶರನ್ನವರಾತ್ರಿ ಉತ್ಸವದ ಎರಡನೇ ದಿನವಾದ ಮಂಗಳವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಜೀವಜಲ ಕಲುಷಿತವಾಗದಂತೆ ಎಚ್ಚರಿಕೆ ವಹಿಸಿ ಶುದ್ಧವಾಗಿರಿಸಬೇಕು. ಒಳಗಿನ ಮತ್ತು ಹೊರಗಿನ ಶತೃಗಳಿಂದ ದೇಶದ ಭದ್ರತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಪ್ರಾಣದ ಹಂಗು ತೊರೆದು ದೇಶದ ರಕ್ಷಣೆಗೆ ಎದೆಯೊಡ್ಡಿರುವ ಯೋಧರನ್ನು ನಾವು ಗೌರವಿಸಿ ಪ್ರೋತ್ಸಾಹಿಸಬೇಕು ಎಂದರು. ಕ್ಷೇತ್ರವನ್ನು ಚೆನ್ನಾಗಿ ಬೆಳಸಿ ಸಮಾಜಮುಖ ಸೇವೆ ಮಾಡುತ್ತಿರುವ ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪನವರ ಸೇವೆಯನ್ನು ಪ್ರಶಂಸಿಸಿ ನಿಮ್ಮ ಎಲ್ಲ ಧಾರ್ಮಿಕ ಸೇವಾ ಕಾರ್‍ಯಕ್ರಮಕ್ಕೆ ತಮ್ಮ ಸಹಕಾರ ವಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಸಿಗಂದೂರು ಕ್ಷೇತ್ರದ ನೂತನ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಮೀನಾಕ್ಷಿ ರಾಮಪ್ಪ, ಧರ್ಮದರ್ಶಿ ಡಾ. ಎಸ್.ರಾಮಪ್ಪ, ಪ್ರಧಾನ ಕಾರ್ಯದರ್ಶಿ ಎಚ್. ಆರ್. ರವಿಕುಮಾರ್, ಮಲ್ಲಿಕಾರ್ಜುನ ಹಕ್ರೆ ಮತ್ತಿತರರು ಪಾಲ್ಗೊಂಡಿದ್ದರು.