ತುಮರಿ: ಭಾರತೀಯ ಪರಂಪರೆಗೆ ಮನೋರೋಗವನ್ನು ನಿವಾರಿಸುವ ಅಗಾಧವಾದ ಶಕ್ತಿಇದೆ ಇಂತಹ ಶಕ್ತಿಗಳನ್ನು ಆರಾಧಿಸುವ ಭಕ್ತಿ ಮಾರ್ಗದ ಸ್ಥಳಗಳಲ್ಲಿ ಆಸ್ತಿಕರ ಭಾವನೆಗಳನ್ನು ಗೌರವಿಸುವ ಕಾರ್ಯಗಳು ನ್ಯೂನತೆಯಿಲ್ಲದೆ ನಡೆಯಬೇಕು ಎಂದು ಸೊಲೂರು ಈಡಿಗ ಮಹಾ ಸಂಸ್ಥಾನದ ರೇಣುಕಾ ಪೀಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಶ್ರೀಗಳು ಹೇಳಿದರು.
ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸೋಮವಾರ ೮ನೇ ದಿನದ ನವರಾತ್ರಿ ಉತ್ಸವದಲ್ಲಿ ಶ್ರೀಗಳು ಮಾತನಾಡಿದರು. ಉತ್ತಮ ನಿರ್ವಹಣೆ,ಪೂಜಾ ಕೈಂಕರ್ಯಗಳು, ದಾಸೋಹ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದರೆ ಮಾತ್ರ ಅದು ಸಮಾಜದ ಏಳಿಗೆಗಾಗಿ ಇರುವ ಶ್ರದ್ಧಾ ಕೇಂದ್ರ ನಡೆಯುವ ಕ್ಷೇತ್ರದ ದರ್ಶನದಿಂದ ಮಾತ್ರ ನಮ್ಮ ಇಷ್ಟಾರ್ಥ ಸಿದ್ದಿಯಾಗಲಿದೆ ಎಂದರು.
ಭಕ್ತಿ, ಶ್ರದ್ಧೆಯಿಂದ ಮಾತ್ರ ಮನುಕುಲದ ಏಳಿಗೆ ಸಾಧ್ಯ ನಾರಾಯಣ ಗುರುಗಳ ತತ್ವದೆಡೆಗೆ ಸಾಗುವ ಅನಿವಾರ್ಯತೆ ಇಂದಿನ ಸಮಾಜಕ್ಕೆ ಇದೆ.ಶಿಸ್ತು ಬದ್ಧ ಜೀವನದಿಂದ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ಲಭಿಸುತ್ತದೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಐಕ್ಯತೆ,ಸೇವಾ ಮನೋಭಾವ ಬಿತ್ತುವಲ್ಲಿ ಧಾರ್ಮಿಕ ಕ್ಷೇತ್ರಗಳ ಪಾತ್ರ ಮಹತ್ವದ್ದು. ಸರಳತೆ ನಾರಾಯಣ ಗುರುಗಳ ಜೀವನ ಪ್ರಮುಖ ಸಂದೇಶ ಇದನ್ನು ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದರು.
ಧರ್ಮಧರ್ಶಿ ಡಾ. ಎಸ್ ರಾಮಪ್ಪ ಬೆಳಿಗ್ಗೆಯಿಂದಲೇ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಚಂಡಿಕಾ ಹವನ. ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರವಿಕುಮಾರ್ ಹೆಚ್ ಆರ್, ರಾಮಚಂದ್ರ ಕಿಡದುಂಬೆ ಇದ್ದರು. ಶಿಕ್ಷಕ ಚಂದ್ರಪ್ಪ ಅಳೂರು ಕಾರ್ಯಕ್ರಮ ನಿರೂಪಿಸಿದರು.