ಸಿಗಂದೂರು,ಅ.೪: ಸಿಗಂದೂರು ಶ್ರೀ ಕ್ಷೇತ್ರವನ್ನು ಧರ್ಮದರ್ಶಿಗಳಾದ ರಾಮಪ್ಪನವರು ಉತ್ತಮವಾಗಿ ಕಟ್ಟಿ ಬೆಳೆಸಿದ್ದಾರೆ. ಇಲ್ಲಿನ ಸಮಾಜಮುಖಿ ಕೆಲಸಗಳಿಂದ ಒಳಿತಾಗುತ್ತಿದೆ ಎಂದು ಶ್ರೀ ಅರುಣಾನಂದ ಸ್ವಾಮೀಜಿ ಹೇಳಿದರು.
ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ಆಯುಧಪೂಜಾ ದಿನದ ನವರಾತ್ರಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ನವರಾತ್ರಿ ಪೂರಾ ಸ್ವಾಮೀಜಿಗಳನ್ನು ಆಹ್ವಾನಿಸಿ ಆಶೀರ್ವಚನ ನೀಡುತ್ತಿರುವುದು ಉತ್ತಮವಾದ ಕೆಲಸ. ತಮ್ಮ ಕಠಿಣ ಪರಿಶ್ರಮದಿಂದ ಶ್ರೀ ಕ್ಷೇತ್ರವನ್ನು ಉತ್ತಮವಾಗಿ ಕಟ್ಟಿ ಬೆಳೆಸಿದ್ದಾರೆ ಇಲ್ಲಿ ಜಾತಿಭೇದ ತಾರತಮ್ಯವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ದೇವಸ್ಥಾನದಿಂದ ಹಲವಾರು ದೇವಸ್ಥಾನಗಳ ಜೀವನೋದ್ಧಾರ ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುವುದು ಹಲವಾರು ಕ್ರೀಡಾಕೂಟಗಳ ಆಯೋಜನೆ ಸಮುದಾಯ ಭವನಗಳ ನಿರ್ಮಾಣ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಬಡರೋಗಿಗಳಿಗೆ ವೈದ್ಯಕೀಯ ವೆಚ್ಚ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆ ವೆಚ್ಚ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಒಂದು ಧಾರ್ಮಿಕ ಕೇಂದ್ರವಾಗಿ ಮುಖ್ಯವಾಹಿನಿಯಲ್ಲಿ ಈ ರೀತಿ ಕೆಲಸ ಮಾಡುವುದು ಪುಣ್ಯದ ಕಾರ್ಯ ಇವರ ಈ ಎಲ್ಲಾ ಕಾರ್ಯಕ್ರಮಗಳ ಜೊತೆ ಹಾಗೂ ಶ್ರೀ ಕ್ಷೇತ್ರದ ಜೊತೆ ನಾನು ಹಾಗೂ ನಮ್ಮ ಶಿಷ್ಯವರ್ಗ ಮತ್ತು ನಮ್ಮ ಸಂಸ್ಥಾನ ಸದಾ ರಾಮಪ್ಪನವರ ಪರವಾಗಿ ಇರುತ್ತೇವೆ ಎಂದು ಹೇಳಿದರು.
ಧರ್ಮದರ್ಶಿ ಡಾ.ಎಸ್.ರಾಮಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್, ವ್ಯವಸ್ಥಾಪಕ ಪ್ರಕಾಶ್ ಭಂಡಾರಿ ಸೇರಿದಂತೆ ಸ್ಥಳೀಯ ಮುಖಂಡರುಗಳು ಹಾಜರಿದ್ದರು.