Malenadu Mitra
ರಾಜ್ಯ ಶಿವಮೊಗ್ಗ

ಅ. 14: ಅಡಿಕೆ ಆಮದು ವಿರೋಧಿಸಿ ಪ್ರತಿಭಟನಾ ರ್‍ಯಾಲಿ, ರೈತ ಸಂಘ, ಅಮ್ಕೊಸ್, ಅಡಕೆ ವರ್ತಕರ ಸಂಘದ ಹೇಳಿಕೆ

ಶಿವಮೊಗ್ಗ: ಭೂತಾನ್ ಜೊತೆಗೆ ನೇಪಾಳ, ಶ್ರೀಲಂಕಾದಿಂದಲೂ ನಮ್ಮ ದೇಶಕ್ಕೆ ಅಡಿಕೆ ಆಮದಾಗುತ್ತಿದೆ. ಇದು ಭವಿಷ್ಯದಲ್ಲಿ ದೇಶಿ ಅಡಿಕೆ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮತ್ತು ಇದು ದೇಶದ ಅಡಿಕೆ ಬೆಳೆಗಾರರಿಗೆ ಮರಣ ಶಾಸನವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಆಮದು ನೀತಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಅ. ೧೪ ರಂದು ಪ್ರತಿಭಟನಾ ರ್‍ಯಾಲಿ ಮತ್ತು ಸಭೆಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರೆಸ್ ಕ್ಲಬ್ ನಲ್ಲಿ ಜಂಟೀ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್. ಆರ್. ಬಸವರಾಜಪ್ಪ ಮತ್ತು ಅಡಿಕೆ ಮಾರಾಟ ಸಹಕಾರ ಸಂಘಗಳ ಒಕ್ಕೂಟ, ಅಡಕೆ ವರ್ತಕರ ಸಂಘದ ಅಧ್ಯಕ್ಷ ಡಿ. ಬಿ. ಶಂಕರಪ್ಪ, ಇದು ದೇಶದ ಅಡಿಕೆ ಬೆಳೆಗಾರರಿಗೆ ಮರಣ ಶಾಸನವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಆಮದು ನೀತಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರದ ಹಿಂದೆ ಗುಟ್ಕಾ ಕಂಪನಿಗಳ ಹುನ್ನಾರವಿದೆ ಎಂದು ಆರೋಪಿಸಿದರು. ಅ. ೧೪ರಂದು ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಲಾಗುವುದು. ಪ್ರತಿಭಟನೆಗೆ ಅಡಿಕೆ ಮಾರಾಟ ಸಹಕಾರ ಸಂಘಗಳು, ಅಡಿಕೆ ವರ್ತಕರ ಸಂಘಗಳು ಬೆಂಬಲವನ್ನು ಸೂಚಿಸಿವೆ. ಆದ್ದರಿಂದ ಈ ಪ್ರತಿಭಟನೆಗೆ ರೈತರು, ಅಡಿಕೆ ಬೆಳೆಗಾರರು, ಡಿಕೆಶಿ ವರ್ತಕರು, ಕೃಷಿ ಕೂಲಿಕಾರ್ಮಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದರು.

ಭೂತಾನ್‌ನಿಂದ ೧೭ ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯನ್ನ ಪ್ರತಿವರ್ಷ ಒIP ಷರತ್ತು ಇಲ್ಲದೆ ಆಮದು ಮಾಡಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಇದು ಮುಂದಿನ ದಿನಗಳಲ್ಲಿ ೫೦ ಸಾವಿರ ಮೆಟ್ರಿಕ್ ಟನ್‌ಗಿಂತಲೂ ಆಮದನ್ನು ಹೆಚ್ಚಿಸಬಹುದು. ಆಗ ನಮ್ಮ ದೇಶದ ಅಡಿಕೆ ಬೆಲೆಯು ಕೂಡ ಕಡಿಮೆಯಾಗುವ ಸಾಧ್ಯತೆ ಇದೆ. ರೈತ ಸಂಘಟನೆ ಮತ್ತು ಅಡಿಕೆ ಸಹಕಾರಿ ಸಂಸ್ಥೆಗಳು ಪರಿಷ್ಕರಣಾ ಕೆ.ಜಿ ಅಡಿಕೆಗೆ ಆಮದು ಸುಂಕವನ್ನು ೨೬೦ರೂ. ನಿಂದ ೩೬೦ರೂ. ಗಳಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಈಗಾಗಲೇ ಬೇಡಿಕೆಯನ್ನು ಸಲ್ಲಿಸಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಆಮದು ಸುಂಕವಿಲ್ಲದೆ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಅಡಿಕೆ ಮಂಡಿ ವರ್ತಕರ ಸಂಘದ ಅಧ್ಯಕ್ಷ ಡಿ ಎಂ ಶಂಕರಪ್ಪ, ಸಹ್ಯಾದ್ರಿ ಅಡಿಕೆ ಸಹಕಾರ ಸಂಘದ ಅಧ್ಯಕ್ಷ ಎಚ್.ಎನ್. ವಿಜಯದೇವ್, ಭದ್ರಾವತಿಯ ಅಡಿಕೆ ಸಹಕಾರ ಸಂಘದ ಅಧ್ಯಕ್ಷ ಸಿ. ಮಲ್ಲೇಶಪ್ಪ, ರೈತ ಸಂಘದ ಮುಖಂಡರಾದ ಹಿಟ್ಟೂರು ರಾಜು, ಎಸ್. ಶಿವಮೂರ್ತಿ, ಕೆ. ರಾಘವೇಂದ್ರ, ಮೊದಲಾದವರಿದ್ದರು.

ಕರ್ನಾಟಕದ ಗೃಹ ಮಂತ್ರಿ ಮತ್ತು ಅಡಿಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ನಿಯೋಗ ಕೆರೆದುಕೊಂಡು ಹೋಗಲಾಗುವುದು ಎಂದು ಹೇಳಿರುವುದು ಸ್ವಾಗತಾರ್ಹ. ಆದಷ್ಟು ಬೇಗ ಕೇಂದ್ರ ಸರಕಾರದ ಬಳಿ ನಿಯೋಗ ಹೋಗಬೇಕು. ಅಡಿಕೆ ಆಮದಿನ ಬಗ್ಗೆ ಚರ್ಚೆಯಾಗಬೇಕು. ಬೆಳೆಗಾರರಿಗೆ ಸಮರ್ಪಕ ಉತ್ತರ ಸಿಗುವುದರ ಜೊತೆಗೆ ನ್ಯಾಯ ದೊರಕಿಸಿಕೊಡಬೇಕು.

ಆರ್. ಎಂ ರವಿ, ತುಮ್ಕೋಸ್ ಅಧ್ಯಕ್ಷ, ಚನ್ನಗಿರಿ

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಿ
ತೀರ್ಥಹಳ್ಳಿ ಕಾಂಗ್ರೆಸ್ ಕಿಸಾನ್ ಘಟಕದಿಂದ ಮನವಿ

ತೀರ್ಥಹಳ್ಳಿ :ಎಲೆ ಚುಕ್ಕಿ ರೋಗಕ್ಕೆ ತೋಟಗಾರಿಕಾ ಅಧಿಕಾರಿಗಳು ನೀಡಿರುವ ಶಿಫಾರಸಿನಂತೆ ಪಡೆದ ಕ್ರಿಮಿನಾಶಕ ಔಷಧಿUಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಅಡಿಕೆ ಬೆಳೆಗಾರ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಸರ್ಕಾರ ಕೂಡಲೇ ರೋಗಬಾಧಿತ ಅಡಿಕೆ ತೋಟಗಳಿಗೆ ವಿಜ್ಞಾನಿಗಳನ್ನು ಕಳುಹಿಸಿ ಪರಿಣಾಮಕಾರಿ ಔಷಧಿಯನ್ನು ಕಂಡುಹಿಡಿಯುವ ಮೂಲಕ ರೈತರ ನೆರವಿಗೆ ಬರಬೇಕೆಂದು ಕಿಸನ್ ಕಾಂಗ್ರೆಸ್‌ನ ತೀರ್ಥಹಳ್ಳಿ ಘಟಕ ಮುಖ್ಯಮಂತ್ರಿಯನ್ನು ಆಗ್ರಹಿಸಿದೆ.
ಈ ಸಂಬಂಧ ಶುಕ್ರವಾರ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದ ಕಿಸಾನ್ ಕಾಂಗ್ರೆಸ್‌ನ ಮುಖಂಡರು, ತಾಲ್ಲೂಕಿನಲ್ಲಿ ತೋಟಗಾರಿಕಾ ಸಂಶೋಧನಾ ಕೇಂದ್ರ ಇದ್ದರೂ ಸಹ ಇಲ್ಲಿಯ ವಿಜ್ಞಾನಿಗಳು ರೋಗ ಬಾಧಿತ ಅಡಿಕೆ ತೋಟಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿಯನ್ನಾಗಲೀ, ಔಷಧಿಯ ವಿವರವನ್ನಾಗಲೀ ನೀಡದೇ ನಿರ್ಲಿಪ್ತರಾಗಿದ್ದಾರೆ. ಇವರ ಧೋರಣೆ ಖಂಡನೀಯ ಎಂದಿದ್ದಾರೆ.
ಸುಮಾರು ೨ ವರ್ಷಗಳಿಂದ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಈಗ ಈ ರೋಗವು ತೀವ್ರವಾಗಿ ಉಲ್ಬಣಗೊಂಡಿದೆ. ಅಡಿಕೆ ಬೆಳೆಗಾರರು ಬೀದಿಪಾಲಾಗುವ ಸ್ಥಿತಿಗೆ ತಲುಪಿದ್ದಾರೆ. ರೋಗ ನಿಯಂತ್ರಣಕ್ಕೆ ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಕಿಸಾನ್ ಘಟಕದ ಅಧ್ಯಕ್ಷ ಮಳಲೇಕೊಪ್ಪ ಧರಣೇಶ್, ಉಪಾಧ್ಯಕ್ಷರಾದ ಹೊರಬೈಲ್ ಪ್ರಭಾಕರ್, ಜಾವಗಲ್ ರಾಮಸ್ವಾಮಿ, ವಕ್ತಾರ ಪಡುವಳ್ಳಿ ಹರ್ಷೇಂದ್ರಕುಮಾರ್, ರೈತ ಮುಖಂqರಾದ ಬೊಬ್ಬಿ ರಾಘವೇಂದ್ರ ಶೆಟ್ಟಿ, ಮೇಲಿನಕುರುವಳ್ಳಿ ಶಂಕರ್ ಶೆಟ್ಟಿ, ಬಡಬೈಲ್ ರಮೇಶ್, ಸಂದೀಪ್ ಹೆಗ್ಡೆ ಮೇಗರವಳ್ಳಿ, ಮಾರಿಗುಣಿ ಜಗದೀಶ್, ವಿನಯ್ ಹೊರಬೈಲು, ದಬ್ಬಣಗದ್ದೆ ನಾಗರಾಜ್ ಉಪಸ್ಥಿತರಿದ್ದರು.

ಆಮದು ಅಡಿಕೆಯಿಂದ ಮಾರುಕಟ್ಟೆ ಮೇಲೆ ಅಡ್ಡ ಪರಿಣಾಮವಾಗದು
ಪತ್ರಿಕಾಗೋಷ್ಟಿಯಲ್ಲಿ ಮ್ಯಾಮ್ಕೋಸ್ ಹೇಳಿಕೆ

ಶಿವಮೊಗ್ಗ: ಭೂತಾನ್‌ನಿಂದ ಆಮದಾಗುವ ಅಡಿಕೆಯಿಂದ ಭಾರತದ ಮಾರುಕಟ್ಟೆ ಮೇಲೆ ಯಾವುದೇ ರೀತಿಯಿಂದಲೂ ಅಡ್ಡ ಪರಿಣಾಮ ಉಂಟಾಗುವುದಿಲ್ಲ.ಯಾವುದೇ ಕಾರಣಕ್ಕೂ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಮ್ಯಾಮ್ಕೋಸ್ ಹೇಳಿದೆ.
ಪ್ರೆಸ್ ಟ್ರಸ್ಟ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್ .ಎಸ್. ಮಹೇಶ್, ಭೂತಾನ್ ದೇಶದಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುವಾಗ ಪಶ್ಚಿಮ ಬಂಗಾಳದ ಜಯಗಾಂವ ಬಂದರಿನ ಮೂಲಕ ಆಮದು ಮಾಡಿಕೊಂಡಾಗ ಮಾತ್ರ ಕನಿಷ್ಠ ಆಮದು ಬೆಲೆ (ಮಿನಿಮಮ್ ಇಂಪೋರ್ ಪ್ರೈಸ್) ವಿನಾಯಿತಿ ಅನ್ವಯವಾಗುತ್ತದೆ ಎಂದು ಅಧಿಸೂಚನೆಯಲ್ಲಿ ಷರತ್ತು ಹಾಕಲಾಗಿದೆ. ಭೂತಾನ್ ಮೂರು ಕಡೆ ಭಾರತ ಮತ್ತು ಒಂದು ಕಡೆ ಟಿಬೆಟ್‌ನಿಂದ ಆವೃತವಾಗಿದೆ. ಭೂತಾನ್‌ನಿಂದ ಜಯಗಾಂವ್ ಬಂದರಿಗೆ ಹಸಿ ಅಡಿಕೆ ತರಲು, ಮೊದಲು ಅದನ್ನು ಭಾರತಕ್ಕೆ ರಸ್ತೆ ಮಾರ್ಗದ ಮೂಲಕ ತಂದು, ಆನಂತರ ಬಂಗಾಳಕೊಲ್ಲಿ ಸಮುದ್ರಕ್ಕೆ ಇಳಿಸಿ, ಜಯಗಾಂವ್ ಬಂದರಿಗೆ ತರಬೇಕಾಗುತ್ತದೆ. ಅಡಿಕೆ ದರಕ್ಕಿಂತ ಸಾಗಣೆ ವೆಚ್ಚವನ್ನು ಹೆಚ್ಚಿಸುತ್ತದೆ. ಆದ್ದರಿಂದ ಭೂತಾನ್‌ನಿಂದ ಭಾರತಕ್ಕೆ ಅಡಿಕೆ ಬಂದೇ ಬರುತ್ತದೆ ಎಂದು ಹೇಳಲಾಗದು ಎಂದರು.
ಈಗಾಗಲೇ ಬೇರೆ ದೇಶದಿಂದ ಆಮದಾಗುವ ಅಡಿಕೆಯನ್ನು ನಿಯಂತ್ರಿಸುವ ಬಗೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಮ್‌ಕೋಸ್ ಸೇರಿದಂತೆ ಎಲ್ಲಾ ಸಹಕಾರ ಸಂಘಗಳು ಮತ್ತು ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.


ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಒಟ್ಟು ಎಂಟು ಕೋಟಿ ರೂಪಾಯಿಗಳ ಅನುದಾನ ನಿಗದಿ ಮಾಡಿದೆ. ಇದರಲ್ಲಿ ನಾಲ್ಕು ಕೋಟಿ ರೂಪಾಯಿಗಳನ್ನು ರೈತರಿಗೆ ವಿತರಿಸಲು ಬಿಡುಗಡೆ ಮಾಡಲಾಗಿದೆ. ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು, ಹಾಸನ ಜಿಲ್ಲೆಯಲ್ಲಿ ಒಟ್ಟು ೨೦ ಸಾವಿರ ಹೆಕ್ಟೇರ್ ಅಡಿಕೆ ಬೆಳೆ ಪ್ರದೇಶದಲ್ಲಿ ಈ ರೋಗ ಹಬ್ಬಿದ್ದು, ಇದರ ನಿಯಂತ್ರಣದ ಬಗ್ಗೆ ತೋಟಗಾರಿಕೆ ಇಲಾಖೆ ಔಷಧಿ ಹಾಗೂ ಸಿಂಪರಣೆ ವೆಚ್ಚ ಭರಿಸಲು ಅನುದಾನ ಬಿಡುಗಡೆ ಮಾಡಿದೆ

-ಎಚ್. ಎಸ್. ಮಹೇಶ್

Ad Widget

Related posts

ಶಿವಮೊಗ್ಗದ ಬೇಡಿಕೆ ಪೂರೈಸಲಿರುವ ವಿಐಎಸ್‍ಎಲ್ ಆಮ್ಲಜನಕ ಘಟಕ

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಖೇಲೊ ಇಂಡಿಯಾದ ಕ್ರೀಡಾ ತರಬೇತಿ ಕೇಂದ್ರ ಇಲ್ಲ ?

Malenadu Mirror Desk

ಎದುರುಬದರಾದರೂ ಮಾತಿಲ್ಲ…..ಕತೆಯಿಲ್ಲ….ಸಿದ್ದರಾಮಯ್ಯ ನಿವಾಸದ ಬಳಿ ಬಂಗಾರಪ್ಪ ಪುತ್ರದ್ವಯರ ಮುಖಾಮುಖಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.