ಶಿವಮೊಗ್ಗ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿ), ಡೂ ಮೈಂಡ್ಸ್ ಡಿಸೈನ್ ಲ್ಯಾಬ್, ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ಅ. ೧೪ರ ಅಂತಾರಾಷ್ಟ್ರೀಯ ಇ-ತ್ಯಾಜ್ಯ ದಿನದ ಅಂಗವಾಗಿ ಇ-ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ ಬಗ್ಗೆ ವಿಚಾರ ಸಂಕಿರಣ ಹಾಗೂ ೧೫ ದಿನಗಳ ತ್ಯಾಜ್ಯ ಸಂಗ್ರಹಣಾ ಅಭಿಯಾನವನ್ನು ಶಿವಮೊಗ್ಗ ನಗರದಾದ್ಯಂತ ಹಮ್ಮಿಕೊಳ್ಳಲಾಗಿದೆ.
ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಂಸ್ಥೆಗಳ ಮುಖಂಡರಾದ ಎನ್. ಗೋಪಿನಾಥ್, ಜಿ.ಎಲ್ ಜನಾರ್ದನ್, ಡಾ. ಧನಂಜಯ ಸರ್ಜಿ, ಡಿ. ವೆಂಕಟೇಶ್, ರಂಗನಾಥ್ ಅಭಿಯಾನದ ಮಾಹಿತಿ ನೀಡಿದರು. ಅಕ್ಟೋಬರ್ ೧೪ರಂದು ಆಚಾರ್ಯ ತುಳಸಿ ಕಾಲೇಜಿನ, ಚಂದನ ಸಭಾಂಗಣದಲ್ಲಿ ಮಧ್ಯಾಹ್ನ ೧.೫೫ಕ್ಕೆ ಆರಂಭಗೊಳ್ಳಲಿದೆ. ಕಾರ್ಯಕ್ರಮಕ್ಕೆ ಜಿಲ್ಲಾಡಳಿತ, ಮಹಾ ನಗರಪಾಲಿಕೆ, ಸರ್ಜಿ ಫೌಂಡೇಶನ್ ಶಿವಮೊಗ್ಗ, ಐ ಸೆವೆನ್ ಬೆಂಗಳೂರು, ರೇಡಿಯೋ ಶಿವಮೊಗ್ಗ ಎಫ್‌ಎಂ೯೦.೮, ಶಿವಮೊಗ್ಗ ಐ ಟಿ ಅಸೋಸಿಯೇಷನ್, ರಾಷ್ಟ್ರೀಯ ಶಿಕ್ಷಣ ಸಮಿತಿ, ಎನ್‌ಎಸ್‌ಎಸ್ ಶಿವಮೊಗ್ಗ ಸಹಕಾರ ನೀಡಲಿವೆ ಎಂದರು.
ಡಾ. ಧನಂಜಯ ಸರ್ಜಿ ಮಾತನಾಡಿ, ಇ-ತ್ಯಾಜ್ಯದಿಂದ ಪರಿಸರದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕ್ಯಾನ್ಸರ್, ಬುದ್ಧಿಮಾಂದ್ಯತೆ ಸೇರಿದಂತೆ ಹಲವು ಕಾಯಿಲೆಗಳ ಜೊತೆಗೆ ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ. ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇದರ ನಿರ್ವಹಣೆ ಅತಿಮುಖ್ಯ. ಜೊತೆಗೆ ಇ-ತ್ಯಾಜ್ಯದ ಮರು ಬಳಕೆಯಿಂದ ಆದಾಯ ಕೂಡ ಬರುತ್ತದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಜಾಗತಿಕವಾಗಿ, ಪ್ರತಿ ವರ್ಳ ಸುಮಾರು ೫೭ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಪ್ರತಿ ವ್ಯಕ್ತಿಯಿಂದ ಸುಮಾರು ೬.೮ ಕೆ.ಜಿ.ಗಳಿಗೂ ಹೆಚ್ಚಿನ ಸರಾಸರಿ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದೆ. ಊಹಿಸಬಹುದಾದಂತೆ, ಈ ಹಂಚಿಕೆ ಅಸಮಾನತೆಯಿಂದ ಕೂಡಿದ್ದು, ಶ್ರೀಮಂತ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದೆ. ಇದರ ಮರುಬಳಕೆ ಅಗತ್ಯ ಎಂದರು.
ರಂಗನಾಥ್ ಮಾತನಾಡಿ, ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಟಿವಿ., ಕಂಪ್ಯೂಟರ್ ಮುಂತಾದವುಗಳ ಮರುಬಳಕೆಯಿಂದ ಚಿನ್ನ, ತಾಮ್ರ ಕೂಡ ಉತ್ಪಾದನೆ ಸಾಧ್ಯ ಎಂದರು.
ಕಾರ್ಯಕ್ರಮ: ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ . ಅವರು ಉದ್ಘಾಟಿಸುವರು. ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಗೋಪಿನಾಥ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ನಾರಾಯಣ ರಾವ್, ವಿಶೇಷ ಆಹ್ವಾನಿತರಾಗಿ ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ, ಡಾ. ಧನಂಜಯ’ ಸರ್ಜಿ, ಮಹಾನಗರಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡ ಭಾಗವಹಿಸುವರು. ನಂತರ ಮಹಾನಗರಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡರು ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ಚಾಲನೆ ನೀಡುವರು. ಐ ಸೆವೆನ್ ಬೆಂಗಳೂರು (ಅಧಿಕೃತ ಇ-ತ್ಯಾಜ್ಯ ಸಂಸ್ಕರಣಾ ಸಂಸ್ಥೆ) ವತಿಯಿಂದ ವೇಣುಗೋಪಾಲ್ ಮತ್ತು ಜಿ.ವಿ. ವಾಸುದೇವ್ ರವೀಂದ್ರ, ಸೋಷಿಯಲ್ ಸೈಂಟಿಸ್ಟ್‌ರವರು ಉಪನ್ಯಾಸ ನೀಡುವರು. ಕಾರ್ಯಕ್ರಮವು ರೇಡಿಯೋ ಶಿವಮೊಗ್ಗ ಟಿವಿ ಭಾರತ್ ಇವರ ಸಹಯೋಗದಲ್ಲಿ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ನವೀನ್, ರಮೇಶ್ ಹೆಗ್ಡೆ, ವಿಜಯಕುಮಾರ್, ವೆಂಕಟೇಶ್, ವಸಂತ್ ಹೋಬಳಿದಾರ್, ಜನಾರ್ಧನ್, ಗಣೇಶ್ ಅಂಗಡಿ, ಪ್ರದೀಪ್ ಎ.ಬಿ. ಮುಂತಾದವರಿದ್ದರು.
previous post
next post