ತೀರ್ಥಹಳ್ಳಿ: ಮೇಲಿನ ಕುರುವಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಅವಿನಾಶ್, ವಿಂಧ್ಯಾ ಅವರ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದ ಘಟನೆ ಬುಧವಾರ ನಡೆದಿದೆ.
ಮೇಲಿನ ಕುರುವಳ್ಳಿ ಕಲ್ಲು ಕುಟಿಕರ ಸಹಕಾರ ಸಂಘದಲ್ಲಿ ಸಭೆ ನಡೆಸಿ ಬಂಡೆ ಪ್ರದೇಶವನ್ನು ಬಂಡೆ ಕಾರ್ಮಿಕರೊಂದಿಗೆ ವೀಕ್ಷಿಸಲು ಬಂದಾಗ, ಅದೇ ಸಮಯದಲ್ಲಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ಮಂಗಳವಾರ ರಾತ್ರಿ ಗಣಿ, ಭೂವಿಜ್ಞಾನ ಇಲಾಖೆಯವರು ಬಂಡೆ ಪ್ರದೇಶಕ್ಕೆ ಬಂದು ಟ್ರಂಚ್ ಹೊಡೆದು ಕಿರುಕುಳ ಕೊಟ್ಟ ಬಗ್ಗೆ ಆಕ್ರೋಶಗೊಂಡ ಕಿಮ್ಮನೆ ಅವರು, ನೀವು ಕಾನೂನು ಮೀರಿ, ಶಾಸಕರ ಚೇಲಾಗಳಂತೆ ಕೆಲಸ ಮಾಡಿದ್ದೀರಿ. ಮನುಷ್ಯತ್ವ ಮುಖ್ಯ,ಬಡವರ ಮೇಲೆ ದೌರ್ಜನ್ಯ ಮಾಡಿದ್ದೀರಿ ಎಂದು ಹರಿಹಾಯ್ದರು,
ನಾವು ಇಲಾಖೆಯ ಕಾನೂನಿನಂತೆ ಕೆಲಸ ಮಾಡುತ್ತೇವೆ. ಇಲ್ಲಿ ಕೆಲವು ವ್ಯಕ್ತಿಗಳು ರಾಜಕೀಯ ತಂದು ಗ್ರಾಮಸ್ಥರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇ-ಟೆಂಡರ್ ಮೂಲಕವೇ ಬಂಡೆ ಹರಾಜು ನಡೆಯುತ್ತದೆ. ನಾವು ಕ್ರಮದಂತೆ ಕಾರ್ಯನಿರ್ವಹಿಸುತ್ತೇವೆ ಎಂದು ಅಧಿಕಾರಿ ವಿಂಧ್ಯಾ ಮತ್ತು ಅವಿನಾಶ್ ಉತ್ತರಿಸಿದರು.
ನಂತರ ಮೇಲಿನ ಕುರುವಳ್ಳಿ ಗ್ರಾಪಂ.ಸದಸ್ಯ ನಿಶ್ಚಲ್,ನಾಗರಾಜ್ ಪೂಜಾರಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಯಿತು. ಕೂಡಲೇ ಸ್ಥಳಕ್ಕೆ ತೀರ್ಥಹಳ್ಳಿಯ ಪಟ್ಟಣ ಪೊಲೀಸರು ಆಗಮಿಸಿ ವಾತಾವರಣವನ್ನು ತಿಳಿಗೊಳಿಸಿದರು.
ದೌರ್ಜನ್ಯ ಖಂಡಿಸಿ ಪಾದಯಾತ್ರೆ, ಧರಣಿ
ತೀರ್ಥಹಳ್ಳಿ: ಬಡ ಬಂಡೆ ಕಾರ್ಮಿಕರ ಮೇಲೆ ಶಾಸಕ,ಸಚಿವ ಆರಗ ಜ್ಞಾನೇಂದ್ರ ಅವರ ಅನುಯಾಯಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ನಿರಂತರ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ಅಕ್ಟೋಬರ್ ೧೩ರ ಗುರುವಾರದಂದು (ಇಂದು) ಮೇಲಿನ ಕುರುವಳ್ಳಿ ಕಲ್ಲುಕುಟಿಕರ ಸಹಕಾರ ಸಂಘದ ಕಚೇರಿಯಿಂದ ಪಾದಯಾತ್ರೆಯ ಮೂಲಕ ತೀರ್ಥಹಳ್ಳಿ ತಾಲೂಕು ಆಫೀಸ್ ಕಚೇರಿ ವರೆಗೆ ತೆರಳಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪಟ್ಟಣದ ಮೇಲಿನಕುರುವಳ್ಳಿ ಕಲ್ಲುಕುಟೀಕರ ಸಂಘದ ಕಚೇರಿಯಲ್ಲಿ ಬಂಡೆ ಕೂಲಿ ಕಾರ್ಮಿಕರ ಸಭೆಯಲ್ಲಿ ಮಾತನಾಡಿದರು.