ಶಿವಮೊಗ್ಗ:
ಈ ಬಾರಿ ಚಂದ್ರಗುತ್ತಿ ದೇವಸ್ಥಾನದಲ್ಲಿ ಪ್ರತ್ಯೇಕ ದಸರಾ ಉತ್ಸವ ಮಾಡುವ ಮೂಲಕ ಸ್ಥಳೀಯ ಶಾಸಕ ಕುಮಾರ್ ಬಂಗಾರಪ್ಪ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿ ಗೊಂದಲ ಉಂಟು ಮಾಡಿದ್ದೂ, ಅಲ್ಲದೇ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಚಂದ್ರಗುತ್ತಿ ರೇಣುಕಾಂಬ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ ದೂರಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯವಾಗಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಮುಜರಾಯಿ ಇಲಾಖೆ ಅನುಮತಿಯನ್ನೂ ಪಡೆಯದೆ ಚುನಾವಣೆ ಗಿಮಿಕ್‌ಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿ ಒಡೆದು ಆಳುವ ನೀತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೦೧೬ ರಿಂದ ಸಮಿತಿಯವರು ಊರಿನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರತೀ ವರ್ಷ ನವರಾತ್ರಿ ಉತ್ಸವ ಮಾಡುತಿದ್ದರು. ಇದರಲ್ಲಿ ಸರ್ವ ಸಮುದಾಯದವರು ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಸಮಿತಿಯವರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಶಾಸಕರು ಏಕಾಏಕಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದೂ ಅಲ್ಲದೆ ಟ್ರ್ಯಾಕ್ಟರ್ ಮೇಲೆ ಪಲ್ಲಕ್ಕಿ ಮೆರವಣಿಗೆ ಮಾಡಿ ದೇವಸ್ಥಾನದ ಸಂಪ್ರದಾಯ ಗಾಳಿಗೆ ತೂರಿದ್ದಾರೆ ಎಂದರು.
ದೇವರ ಉತ್ಸವ ಹೇಗಿರಬೇಕು ಎಂಬುದನ್ನು ಆಗಮಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ ಪಲ್ಲಕ್ಕಿಯಲ್ಲಿ ದೇವಿಯ ಮೆರವಣಿಗೆ ಮಾಡುವುದು ಸಂಪ್ರದಾಯವಾಗಿ ಬಂದಿದೆ. ಅಂದು ಹಣ್ಣುಕಾಯಿ ಮಾಡಿಸಿದ ಭಕ್ತರು ಪಲ್ಲಕ್ಕಿ ಬರುವ ಮಾರ್ಗದಲ್ಲಿ ಮಲಗುತ್ತಾರೆ. ಹೀಗೆ ಮಲಗಿದ ಭಕ್ತರನ್ನು ದಾಟಿಕೊಂಡು ಪಲ್ಲಕ್ಕಿ ಮುಂದೆ ಹೋಗಲಿದೆ. ಆದರೆ ಈ ಬಾರಿ ವಾಹನದಲ್ಲಿ ಮೆರವಣಿಗೆ ಮಾಡಿದ್ದರಿಂದಾಗಿ ಇದಕ್ಕೆ ಅವಕಾಶವಾಗಿಲ್ಲ. ಇದು ಭಕ್ತರಿಗೆ ನೋವು ತಂದಿದೆ ಎಂದರು.
ಮಂಗಳಾರತಿ ಆದ ತಕ್ಷಣ ದೇವಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತಿತ್ತು. ಆದರೆ ಈ ಬಾರಿ ಶಾಸಕರು ಪಾಲ್ಗೊಳ್ಳುವ ಸಲುವಾಗಿಯೇ ಸಲಾಂ ಕಟ್ಟೆಯಲ್ಲಿ ದೇವಿಯನ್ನು ೩ ತಾಸು ಕಾಯಿಸಲಾಯಿತು. ಇದು ಭಕ್ತರಿಗೆ ತೀವ್ರ ನೋವು ತಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಮುಜರಾಯಿ ಇಲಾಖೆ ಆಯುಕ್ತರು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಹುಲ್ತಿಕೊಪ್ಪ ಒತ್ತಾಯಿಸಿದರು.
ಬನ್ನಿ ಮುಡಿಯಲು ಹೋದ ಸಮಿತಿಯ ೧೧ ಜನರ ಮೇಲೆ ಸುಳ್ಳು ಕೇಸು ಹಾಕಿಸಿದ್ದಾರೆ. ಶಾಸಕರು ಹಿಂದೂ ಧರ್ಮ ಒಡೆಯುವ ಕೆಲಸ ಮಾಡಿದ್ದು, ಶಾಸಕರನ್ನು ಕೇಳಿ ಪೂಜೆ ಮಾಡಬೇಕು. ಭಜನೆ ಮಾಡಬೇಕು. ಮೆರವಣಿಗೆ ನಡೆಸಬೇಕೆಂಬ ಧೋರಣೆಯನ್ನು ಈ ಮಾಡಿದ್ದಾರೆ. ಸರ್ಕಾರದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದಾರೆ ಎಂದರು.
ಚಂದ್ರಗುತ್ತಿ ಗ್ರಾಪಂ ಅಧ್ಯಕ್ಷ ರತ್ನಾಕರ್ ಮಾತನಾಡಿ, ಪಂಚಾಯಿತಿ ಅನುಮತಿ ಇಲ್ಲದೆ ಪಂಚಾಯಿತಿಯ ಜಾಗದಲ್ಲಿ ಶಾಮಿಯಾನ ಹಾಕಿ ಕಾರ್ಯಕ್ರಮ ಮಾಡಿದ್ದಾರೆ. ಭಕ್ತರ ಕಾಣಿಕೆ ಹಣ ದುರ್ಬಳಕೆ ಮಾಡಿದ್ದಾರೆ. ಸೊರಬ ತಾಲೂಕಿನಲ್ಲಿ ಶಾಸಕರಿಂದ ಸರ್ವಾಧಿಕಾರ ನಡೆಯುತ್ತಿದೆ ಎಂದು ಹೇಳಿದರು.
ಟ್ರಾಕ್ಟರ್‌ನಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಸಬಾರದೆಂದು ತಹಶೀಲ್ದಾರ್‌ಗೆ ಪಂಚಾಯಿತಿಯಿಂದ ಮನವಿ ಮಾಡಲಾಗಿತ್ತು. ಇದನ್ನು ಪರಿಗಣಿಸದೆ ಭಕ್ತರ ಭಾವನೆಗೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಳ್ಳಲಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ರೇಣುಕಾ ಪ್ರಸಾದ್, ನಾಗರಾಜ್ ಮೊದಲಾದವರು ಇದ್ದರು.