ಶರಾವತಿ ಮುಳುಗಡೆ ಸಂತ್ರಸ್ಥರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ವಿಷದ ಬಾಟಲಿ ಕೊಟ್ಟುಬಿಡ್ಲಿ,ಆಗ ಈ ಸಮಸ್ಯೆಯೇ ಜೀವಂತವಾಗಿರುವುದಿಲ್ಲ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಗೋಪಾಲಕೃಷ್ಣ ಬೇಳೂರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರ ಬದುಕು ಹೀನಾಯವಾಗಿದೆ. ಅವರನ್ನು ಸರ್ಕಾರ ಮರೆತಿದೆ. ಮಾನವೀಯತೆ ಇಲ್ಲದ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಅವರು ಈಗ ಎಲ್ಲಿಗೆ ಹೋಗಬೇಕು. ಅವರಿಗೆ ಹಕ್ಕುಪತ್ರ ಕೊಡದೆ ಹೋದರೆ ಹೋರಾಟ ಬಲಯುತವಾಗುತ್ತದೆ ಎಂದರು.
ಕೊಲೆಗಡುಗ ಸರ್ಕಾರ:
ಬಿಜೆಪಿ ಸರ್ಕಾರ ಕೊಲೆಗಡುಕ ಸರ್ಕಾರವಾಗಿದೆ ಮಂಡ್ಯ, ಮೈಸೂರು, ಶಿವಮೊಗ್ಗ ಸೇರಿದಂತೆ ಕೊಲೆಗಳು ನಡೆಯುತ್ತಲೇ ಇವೆ. ಅತ್ಯಾಚಾರಿಗಳು ಹೆಚ್ಚಾಗುತ್ತಲೆ ಇದ್ದಾರೆ. ಘಟನೆಗಳು ನಡೆದಾಗ 5, 10,25 ಲಕ್ಷ ಹಣ ಕೊಟ್ಟು ಮುಚ್ಚಿಹಾಕುತ್ತಾರೆ. ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುತ್ತಾರೆ. ಮಂಡ್ಯ ಕೊಲೆಗೆ ಸಂಬಂಧಿಸಿದಂತೆ ನಮ್ಮ ಶೋಭಾ ಮೇಡಂ ಸುಮ್ಮನಿರುತ್ತಾರೆ. ಬಹುಶಃ ಅವರಿಗೆ 2 ನಾಲಿಗೆ ಇರಬೇಕು ಎಂದು ಟೀಕಿಸಿದರು.
ದೇವಸ್ಥಾನಕ್ಕೆ ಹೋಗಲು ಕಾಲುನೋವಿಲ್ಲ ವಿಧಾನಸಭೆಗೆ ಬರಲು ಕಾಲುನೋವು:
ಬಿಜೆಪಿಯವರು ಅದರಲ್ಲೂ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುತ್ತಾರೆ. ಅತ್ತ ಯಡಿಯೂರಪ್ಪನವರು ಸಂಕಲ್ಪ ಯಾತ್ರೆ ಮಾಡುತ್ತಿದ್ದರೆ, ಇತ್ತ ಈಶ್ವರಪ್ಪನವರು ಮಂಡಿನೋವು ಎಂದು ಗೈರಾಗಿದ್ದಾರೆ. ಅವರಿಗೆ ದೇವಸ್ಥಾನಕ್ಕೆ ಹೋಗಲು ಕಾಲು ನೋವಿಲ್ಲ. ವಿಧಾನಸಭೆಗೆ ಹೋಗಲು ಕಾಲುನೋವು ಬಂದುಬಿಡತ್ತೆ ಎಂದು ವ್ಯಂಗ್ಯವಾಡಿದರು.
ಯತ್ನಾಳ್ ಬಳಿ ಸಿಡಿ ಇದೆ:
ಬಿಜೆಪಿಯನ್ನು ಸದಾ ಟೀಕಿಸುತ್ತಲೇ ಬಂದಿರುವ ಅವರದೇ ಪಕ್ಷದ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಈಗ ನೋಟಿಸ್ ಕೊಡುತ್ತಿದೆಯಂತೆ ಆದರೆ ಅವರನ್ನು ಪಕ್ಷದಿಂದ ತೆಗೆದುಹಾಕಲು ಸಾದ್ಯವೇ ಇಲ್ಲ. ತಾಕತ್ತಿದ್ದರೆ ಬಿಜೆಪಿ ಮುಖಂಡರು ಯತ್ನಾಳ್ ಅವರನ್ನು ಹೊರಹಾಕಲಿ. ಆದರೆ ಅದು ಆಗುವುದಿಲ್ಲ. ಏಕೆಂದರೆ ಯತ್ನಾಳ್ ಹತ್ತಿರ ಬಿಜೆಪಿಯ ಕೆಲವು ಮಂತ್ರಿ ಹಾಗೂ ಶಾಸಕರ ಸಿಡಿ ಇದೆ ಎಂಬ ಗುಮಾನಿ ಇದೆ. ಈ ಕಾರಣದಿಂದ ಬಿಜೆಪಿ ನಾಯಕರು ಯತ್ನಾಳ್ ಕಂಡರೆ ಭಯಪಡುತ್ತಾರೆ ಎಂದು ಹೇಳಿದರು.
ಅಡಕೆ ಬೆಳೆಗಾರರ ಆತಂಕ:
ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಎಲೆಚುಕ್ಕಿ ರೋಗಕ್ಕೆ ಅಡಿಕೆ ಇರಲಿ ಅಡಿಕೆ ಮರಗಳೇ ನಾಶವಾಗುತ್ತಿವೆ. ಈ ಸರ್ಕಾರ ಬೆಳೆಗಾರರ ಬದುಕನ್ನು ಕಸಿದುಕೊಂಡಿದೆ. ತಕ್ಷಣವೇ ರೈತನಿಗಮ ಮಾಡಿ ಕನಿಷ್ಠ ೫೦೦ ಕೋಟಿ ರೂ.ಗಳನ್ನು ಮೀಸಲಾಗಿರಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ, ಕೆ.ಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ ಕರಿಯಣ್ಣ, ಜಿ.ಡಿ. ಮಂಜುನಾಥ್, ರವಿಕುಮಾರ್ ಮತ್ತಿತರರಿದ್ದರು.
ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರು ಯಾವ ಆಹಾರವನ್ನು ತಿನ್ನಬೇಕು ಎಂದು ಅವರಿಗೆ ಗೊತ್ತಿದೆ. ಆದರೆ ಈ ಬಿಜೆಪಿ ಸರ್ಕಾರ ಅದನ್ನು ವಿವಾದಗೊಳಿಸುತ್ತಿದೆ. ಈಶ್ವರಪ್ಪ ಸಾವರ್ಕರ್ ಸಾಮ್ರಾಜ್ಯ ಮಾಡಲು ಹೊರಟಿದ್ದಾರೆ. ಮೊದಲು ಅವರು ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲಿ
–ಗೋಪಾಲಕೃಷ್ಣ ಬೇಳೂರು