ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಖಿಲಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸುತ್ತದೆ ಎಂದು ಹಿರಿಯ ನಾಯಕ ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.
ಸಾಗರದ ಗಾಂಧಿಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಬಡಕುಟುಂಬದಿಂದ ಬಂದಿರುವ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿರುವುದು ಸುಲಭದ ಮಾತಲ್ಲ. ಅವರ ಶ್ರಮ ಪಕ್ಷ ನಿಷ್ಠೆ ರಾಜಕೀಯ ಬದ್ಧತೆ ಅವರನ್ನು ಎತ್ತರಕ್ಕೆ ಏರುವಂತೆ ಮಾಡಿದೆ ಎಂದರು.
ಸಾಗರದ ಶಾಸಕ ಹಾಲಪ್ಪ ಏನು ಕೆಲಸ ಮಾಡಿದ್ದಾರೆ, ಗಣಪತಿ ಕೆರೆ ಮಾಡಿರುವುದು ಸಾಧನೇನಾ?, ಕೆರೆ ದಂಡೆಮೇಲೆ ಬಾವುಟ ಹಾರಿಸಿ ಕಂಬ ನಿಲ್ಲಿಸಿ ಬೇಲಿ ಹಾಕಿರುವುದೇ ಅಭಿವೃದ್ಧಿ ಕೆಲಸನಾ ಎಂದು ಪ್ರಶ್ನಿಸಿದ ಕಾಗೋಡು ತಮ್ಮ ಸೋಲಿನ ಕುರಿತು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಗೋಪಾಲಕೃಷ್ನ ಬೇಳೂರು ಮಾತನಾಡಿ ದಲಿತ ವರ್ಗದ ಹಿಂದುಳಿದ ಸಮುದಾಯಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವುದನ್ನು ಅಭಿನಂದಿಸುತ್ತೇನೆ ಎಂದರು.
ಸಾಗರ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಸಾಗರ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು,ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿಕಾಗೋಡು,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ,ಸಾಗರ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ನಗರಸಭೆ ಸದಸ್ಯೆ ಶ್ರೀಮತಿ ಲಲಿತಮ್ಮ,ತಾ.ಪಂ.ಮಾಜಿ ಅಧ್ಯಕ್ಷೆ ಜ್ಯೋತಿ,ನಗರಸಭೆ ಸದಸ್ಯೆ ಶ್ರೀಮತಿ ಮಧುಮಾಲತಿ ಮತ್ತಿತರರಿದ್ದರು.
ಎಲ್ಲೋ ವ್ಯಾಪಾರ ಮಾಡಿಕೊಂಡು ಸಾರಾಯಿ ಮಾರಿಕೊಂಡಿದ್ದವರು ಬಂದು ಚುನಾವಣೆಗೆ ನಿಂತು ಸೋಲಿಸುತ್ತಾರೆಂದರೆ ರಾಜಕೀಯದ ಸ್ಥಿತಿ ಎಲ್ಲಿಗೆ ಮುಟ್ಟಿದೆ ಹೇಳಿ, ನಾನು ದುಡ್ಡು ಮಾಡದಿರುವುದು ಆಸ್ತಿ ಮಾಡದಿರುವುದೇ ತಪ್ಪಾಗಿದೆ. ಜನ ಆಸ್ತಿ ದುಡ್ಡಿಗೆ ಬೆಲೆ ಕೊಡುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಕಾಗೋಡು ತಿಮ್ಮಪ್ಪ, ಮಾಜಿ ಸಚಿವ