ಶಿವಮೊಗ್ಗ,ಅ.೨೯: ರಾಜ್ಯ ಸರಕಾರ ಶ್ರೀ ನಾರಾಯಣಗುರು ಅಭಿವೃದ್ಧಿ ಕೋಶವನ್ನು ರಚನೆ ಮಾಡಿ ಶನಿವಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳ ಟಿಪ್ಪಣಿಯ ಅನುಸಾರ ಕ್ರಮಕೈಗೊಂಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಅಕ್ಕಮಹಾದೇವಿ ಅವರು ಈ ಆದೇಶ ಹೊರಡಿಸಿದ್ದಾರೆ.
ಈಡಿಗ ಸಮಾಜದ ವ್ಯಾಪ್ತಿಗೆ ಬರುವ ೨೬ ಉಪ ಪಂಗಡಗಳ ಅಭಿವೃದ್ಧಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರತ್ಯೇಕವಾಗಿ ನಾರಾಯಣಗುರು ಅಭಿವೃದ್ಧಿ ಕೋಶ ಆರಂಭಿಸಲಾಗುವುದು. ಈಡಿಗ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಕೋಶ ಕೆಲಸ ಮಾಡಲಿದೆ. ಕೋಶಕ್ಕೆ ನುರಿತ ಅಧಿಕಾರಿಯನ್ನು ನೇಮಿಸಿ ಕಾರ್ಪಸ್ ಫಂಡ್ ಮೀಸಲಿಡಬೇಕೆಂದು ಮುಖ್ಯಮಂತ್ರಿಗಳ ಸೂಚನೆಯಂತೆ ಅವರ ಪ್ರಧಾನ ಕಾರ್ಯದರ್ಶಿಗಳು ಟಿಪ್ಪಣಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪ್ರತ್ಯೇಕ ಕೋಶ ರಚಿಸಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಅದರಲ್ಲೂ ಕರಾವಳಿ ಮತ್ತು ಮಲೆನಾಡಿನಲ್ಲಿ ಪ್ರಬಲವಾಗಿರುವ ಈಡಿಗ ಸಮುದಾಯ ಅಭಿವೃದ್ಧಿಗಾಗಿ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಒತ್ತಡ ಕೇಳಿಬಂದಿತ್ತು. ರಾಜ್ಯಾದ್ಯಂತ ಈ ಬಗ್ಗೆ ಹೋರಾಟ ಮನವಿ ಸಲ್ಲಿಕೆ ಇತ್ಯಾದಿ ಚಟುವಟಿಕೆಗಳು ನಡೆದಿದ್ದನ್ನು ಇಲ್ಲಿ ಸ್ಮೃರಿಸಬಹುದು. ಈಡಿಗ ಸಮಾಜದ ಮಠಮಾನ್ಯಗಳು ಮುಖ್ಯಮಂತ್ರಿ ಹಾಗೂ ಸರಕಾರದ ಮೇಲೆ ಒತ್ತಡ ಹೇರಿದ್ದರು. ಸರಕಾರದಲ್ಲಿರುವ ಈಡಿಗ ಸಮಾಜದ ಸಚಿವರು ಮತ್ತು ಶಾಸಕರ ಮೇಲೆ ಈ ಬಗ್ಗೆ ತೀವ್ರ ಒತ್ತಡವಿತ್ತು. ಚುನಾವಣೆ ವರ್ಷದಲ್ಲಿ ಎಚ್ಚೆತ್ತುಕೊಂಡಿರುವ ಸರಕಾರ ಈಗ ನಾರಾಯಣಗುರು ಅಭಿವೃದ್ಧಿ ಕೋಶ ರಚನೆ ಮಾಡಿ ಆದೇಶ ಹೊರಡಿಸಿದೆ.
previous post