ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಅಂದಿನ ಅರಣ್ಯ ಇಲಾಖೆ ಕಾರ್ಯದರ್ಶಿ ಮದನ್ ಗೋಪಾಲ್ ಅವರು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರುವಂತೆ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ ಶ್ರೀನಿವಾಸ್ ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಪುನರ್‌ವಸತಿ ಕಲ್ಪಿಸುವ ಸಂಬಂಧ ಅಂದಿನ ಅರಣ್ಯ ಇಲಾಖೆ ಕಾರ್ಯದರ್ಶಿ ಮದನ್ ಗೋಪಾಲ್ ಅವರು ಸಾಲು ಸಾಲು ಸಭೆ ನಡೆಸಿ ದಾಖಲಾತಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತಂದರೆ ಮಾತ್ರ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರವಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ಇನ್ನೂ ಜೀವಂತವಾಗಿ ಇರಲಿದೆ ಎಂದರು.
ಮದನ್ ಗೋಪಾಲ್ ವರದಿ ಅನುಷ್ಠಾನ ಮಾಡಿದರೆ ಮುಳುಗಡೆ ಸಂತ್ರಸ್ಥರ ಶೇ.೯೫ ರಷ್ಟು ಸಮಸ್ಯೆ ಪರಿಹಾರವಾಗಲಿದೆ.ಕೂಡಲೇ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆ ಮಾಡುವ ಸಲುವಾಗಿ ೯ ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲಾಗಿತ್ತು. ಕೇಂದ್ರದ ಅನುಮತಿ ಪಡೆಯದೆ ಡಿನೋಟಿಪಿಕೇಷನ್ ಮಾಡಲಾಗಿದೆ ಎಂದು ಪ್ರಶ್ನಿಸಿ ಪರಿಸರವಾದಿಯೊಬ್ಬರು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಈ ವಿಚಾರವಾಗಿ ಮಾ.೦೪ ರಂದು ಹೈಕೋರ್ಟ್ ಆದೇಶ ನೀಡಿದೆ.ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡಲು ಕೇಂದ್ರದ ಅನುಮತಿ ಪಡೆದು ಹಂಚಿಕೆ ಮಾಡುವಂತೆ ಸೂಚಿಸಿ ಡಿನೋಟಿಪಿಕೇಷನ್ ರದ್ದು ಮಾಡಿತ್ತು. ಆದರೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡದೆ ಕರ್ತವ್ಯ ಲೋಪ ಎಸಗಿದೆ. ೧೯೫೩-೬೪ರಲ್ಲಿ ಅರಣ್ಯ ಇಲಾಖೆಯಿಂದ ೧೩೫೦೦ ಎಕರೆ ಅರಣ್ಯ ಭೂಮಿಯನ್ನು ಶರಾವತಿ ಮುಳುಗಡೆ ಸಂತ್ರಸ್ಥರ ಪುನರ್ವಸತಿಗಾಗಿ ಬಿಡುಗಡೆ ಮಾಡಲಾಗಿದೆ.೧೯೮೦ ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೂ ಮುನ್ನವೇ ಬಿಡುಗಡೆಯಾದ ಜಾಗಕ್ಕೆ ಕೇಂದ್ರದ ಅನುಮತಿ ಅವಶ್ಯಕತೆ ಇಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾದ ಕಾರಣ ಇಂದು ಮುಳುಗಡೆ ಸಂತ್ರಸ್ಥರು ಭೂಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ದೂರಿದರು.
ಡಿನೋಟಿಪಿಕೇಷನ್ ಆದೇಶ ಪ್ರಶ್ನಿಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ರಿಟ್ ಪಿಟಿಷನ್ ಗೆ ಶರಾವತಿ ಮುಳುಗಡೆ ಸಂತ್ರಸ್ಥರ ಪರವಾಗಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿಲ್ಲ ಎಂದು ಆರೋಪಿಸಿದ ಅವರು, ೨೦೨೧ ಸೆ.೨೩ ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಅಂದಿನ ಅರಣ್ಯ ಸಚಿವ ಉಮೇಶ್ ಕತ್ತಿ,ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು-ಅಧಿಕಾರಿಗಳು ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರ ಸಭೆ ನಡೆಸಿ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದಾಗಿ ತಿಳಿಸಿದ್ದರು. ೧೩ ತಿಂಗಳು ಕಳೆದರೂ ಕೇಂದ್ರದ ಅನುಮತಿ ಪಡೆಯದೇ ಈಗ ಏಕಾಏಕಿ ಡಿನೋಟಿಪಿಕೇಷನ್ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿರುವುದು ಅಘಾತ ತಂದಿದೆ ಎಂದರು.
ಕೇಂದ್ರ ಸರ್ಕಾರದ ಅನುಮತಿ ಪಡೆಯುವಂತೆ ಸಿಎಂ ಮೇಲೆ ಒತ್ತಡ ಹಾಕುವಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಜಿಲ್ಲೆಯ ಶಾಸಕರು,ಸಂಸದರು ವಿಫಲರಾಗಿದ್ದಾರೆ.ಇದು ನಾಚಿಕೆಗೇಡು.ನಾಡಿಗೆ ಬೆಳಕು ಕೊಟ್ಟವರ ಬಗ್ಗೆ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಡುಬ ರಾಘವೇಂದ್ರ, ಕೆರೆ ಹಳ್ಳಿ ರಾಮಪ್ಪ, ಲೋಕೇಶ್ ಕರಕುಚ್ಚಿ,ರಘುಪತಿ,ಸುಧೀರ್ ಸಂಕ್ಲಾಪುರ ಇದ್ದರು.
ಶರಾವತಿ ಮುಳುಗಡೆ ಸಂತ್ರಸ್ಥರು ಒತ್ತುವರಿದಾರರಲ್ಲ.ಅರಣ್ಯ ಭೂಮಿಯಲ್ಲಿ ಬಿಟ್ಟಿದ್ದು ರಾಜ್ಯ ಸರ್ಕಾರ ವೇ ಹೊರತು ನಾವೇ ಬಂದು ಕುಳಿತಿಲ್ಲ.ನಮಗೆ ಸಿಗಬೇಕಾದ ನ್ಯಾಯ ಸಮ್ಮತ ಜಮೀನನ್ನು ಸರ್ಕಾರ ನೀಡಬೇಕು.
–ರಾಮಪ್ಪ,ಕೆರೆಹಳ್ಳಿ