ಶಿವಮೊಗ್ಗ ನಗರದ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿ ಅದ್ಧೂರಿಯಾಗಿ ಆಚರಿಸಿದರು.
ಗುರುವಾರ ಬೆಳಿಗ್ಗೆಯಿಂದಲೆ ಅವರ ನೂರಾರು ಅಭಿಮಾನಿಗಳು ಒಟ್ಟಾಗಿ ಬೆಳಿಗ್ಗೆ ಗೋಪಾಳದ ರಾಯರ ಮಠ ಮತ್ತು ಕೃಷ್ಣ ಮಠದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.
ಅವರ ಮನೆಯಲ್ಲಿ ದಕ್ಷಿಣ ಮತ್ತು ಉತ್ತರ ಬ್ಲಾಕ್ ಕಾಂಗ್ರೆಸ್‌ನ ಕಾರ್ಯಕರ್ತರು ಕೇಕ್ ಕಟ್ ಮಾಡುವುದರ ಮೂಲಕ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ಟೈಲರ್‍ಸ್ ಅಸೋಸಿಯೇಷನ್‌ನಿಂದ ಅಭಿನಂದನಾ ಕಾರ್ಯಕ್ರಮ, ಸಂತ ಥಾಮಸ್ ಕ್ರೀಡಾಂಗಣದಲ್ಲಿ ರಕ್ತದಾನ ಶಿಬಿರ ಮತ್ತು ಕೆಬಿಪಿ ಕಪ್ ಟೂರ್ನಮೆಂಟ್‌ನ್ನು ವಿನೋಬನಗರ ಕೆಬಿಪಿ ಯುವಕರ ಬಳಗ ಆಯೋಜಿಸಿತ್ತು. ವಿಪ್ರ ಸಮಾಜದ ವತಿಯಿಂದ ಕೆಬಿಪಿ ಹುಟ್ಟು ಹಬ್ಬದ ಅಂಗವಾಗಿ ಮಹಾವೀರ ಗೋ ಶಾಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಆಟೋ ಕಾಂಪ್ಲೆಕ್ಸ್ ವರ್ಕರ್‍ಸ್ ವತಿಯಿಂದ ಹಾಗೂ ಕೋಟೆ ಮಾರಿಕಾಂಬ ದೇವಾಲಯ ಸಮಿತಿಯಿಂದ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಮಾಜಿ ಶಾಸಕರಿಗೆ ಅಭಿನಂದಿಸಲಾಯಿತು. ಶಾರದಾ ದೇವಿ ಅಂಧರ ವಿಕಾಸ ಶಾಲೆಯಲ್ಲಿ ನೇತ್ರದಾನ ಶಿಬಿರ ಹಾಗೂ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲಾಯಿತು.