ಅದೊಂದು ಹೃದಯ ಸ್ಪರ್ಶಿ ಸಂಭ್ರಮ,ಕಳ್ಳುಬಳ್ಳಿಗಳ ಸಮಾಗಮ, ಹಸೆ ಚಿತ್ತಾರ ಮತ್ತು ಬೂಮಣ್ಣಿ ಬುಟ್ಟಿ ಚಿತ್ತಾರವೆಂಬ ದೀವರ ಅಸ್ಮಿತೆಯ ಹೆಸರಲ್ಲಿ ಒಂದು ಸಾಂಪ್ರದಾಯಿಕ ಕಲಾ ಜಗತ್ತೇ ಅಲ್ಲಿ ಅನಾವರಣಗೊಂಡಿತ್ತು. ಮಲೆನಾಡು ದೀವರ ಸಾಂಪ್ರಾಯಕ ಸೀರೆಯಲ್ಲಿ ನೀರೆಯರು ಸಂಭ್ರಮಿಸಿದರೆ, ಬಿಳಿವಸ್ತ್ರದಾರಿ ಪುರುಷರು ನಾವೇನು ಕಡಿಮೆ ಇಲ್ಲ ಎಂದು ಸಾರುವ ಮೂಲಕ ಈಡಿಗರ ಭವನದ ಒಳಾಂಗಣದಲ್ಲಿ ಚೆಲುವಿನ ಚಿತ್ತಾರವೇ ಮೇಳೈಸಿತ್ತು.
ಇದು ಧೀರ ದೀವರ ಬಳಗ, ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗಗಳು, ಜಿಲ್ಲಾ ಆರ್ಯ ಈಡಿಗ ಸಂಘ, ಮಹಿಳಾ ಸಂಘ, ರಾಮಮೋಹರ ಲೋಹಿಯಾ ಟ್ರಸ್ಟ್ ಕಾಗೋಡು, ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘ ಹಾಗೂ ಅಕ್ಷಯ ವಿವಿಧೋದ್ದೇಶ ಸಹಕಾರ ಸಂಘದ ಸಹಯೋಗದಲ್ಲಿ ಶಿವಮೊಗ್ಗ ಈಡಿಗರ ಭವನದಲ್ಲಿ ಭಾನುವಾರ ಆಯೋಜಿಸಿದ್ದ “ದೀವರ ಸಾಂಸ್ಕೃತಿಕ ವೈಭವ-2022’ ಕಾರ್ಯಕ್ರಮದ ದೃಶ್ಯ.
ದೀವರ ಹೆಮ್ಮೆಯ ಕಲೆಗಳಾದ ಹಸೆಚಿತ್ತಾರ ಮತ್ತು ಬೂಮಣ್ಣಿ ಬುಟ್ಟಿ ಚಿತ್ತಾರವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಮಟ್ಟದ ಚಿತ್ತಾರಗಿತ್ತಿ ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಮಲೆನಾಡಿನ ದೀವರ ಸಮುದಾಯದ ನೂರಾರು ಕಲಾವಿದರು ಆಗಮಿಸಿದ್ದರು. ಆದಿಮ ಕಲೆಯಾದ ಹಸೆ ಚಿತ್ತಾರವನ್ನು ಪ್ರದರ್ಶಿಸಿ ಬಹುಮಾನ ಪಡೆದುಕೊಂಡರು. ದಿನವೀಡೀ ನಡೆದ ಕಾರ್ಯಕ್ರಮದಲ್ಲಿ ಬಂಧುತ್ವದ ಹೆಸರಿನಲ್ಲಿ ಒಂದು ಭಾವ ಜಗತ್ತೇ ಅಲ್ಲಿ ಸೃಷ್ಟಿಯಾಗಿತ್ತು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೆ ಕಲಾವಿದೆ. ಗೌರಮ್ಮ ಹುಚ್ಚಪ್ಪ ಮಾಸ್ತರ್ ಆವರಿಂದ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮಣ್ ಕೊಡಸೆ ಅವರು ಹಸೆ ಚಿತ್ತಾರ ಹೇಗೆ ದೀವರದ್ದೇ ಕಲೆ ಎಂಬುದನ್ನು ವಿವರಿಸಿ ಹೇಳಿದರು. ಶಾಸಕ ಹರತಾಳು ಹಾಲಪ್ಪ ಅವರು, ದೀವರ ಕಲೆ ಸಂಸ್ಕೃತಿ ದಾಖಲಾಗಬೇಕು. ಈ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕು ಎಂದರಲ್ಲದೆ ಸಾಂಪ್ರದಾಯಕ ಹಾಡುಗಳ ಸಾಲುಗಳನ್ನು ಹೇಳುವ ಮೂಲಕ ತಮ್ಮ ಕಲಾವಂತಿಕೆ ಮೆರೆದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಮೋಹನ್ ಚಂದ್ರಗುತ್ತಿಅವರು ದೀವರ ಶ್ರೀಮಂತ ಕಲೆಯಲ್ಲಿ ಉತ್ತೇಜಿಸುವ ಮತ್ತು ಮುಂದಿನ ತಲೆಮಾರಿಗೆ ಅದನ್ನು ತಲುಪಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಪ್ರಮುಖರಾದ ಶಿವಮೊಗ್ಗ ಮಹಾನಗರ ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ್, ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಈಡಿಗ ಸಂಘದ ಎಸ್.ಸಿ.ರಾಮಚಂದ್ರ, ಈಡಿಗರ ಸೊಸೈಟಿಯ ಉಪಾಧ್ಯಕ್ಷ ರವೀಂದ್ರ ಉಪಸ್ಥಿತರಿದ್ದರು. ಧೀರದೀವರ ಬಳಗದ ಸುರೇಶ್ ಕೆ ಬಾಳೆಗುಂಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ್ ಈಡೂರು ಸ್ವಾಗತಿಸಿದರೆ, ಡಾ.ಅಣ್ಣಪ್ಪ ಮಳೀಮಠ ಕಾರ್ಯಕ್ರಮ ನಿರೂಪಿಸಿದರು.
ಧೀರ ದೀವರ ಪ್ರಶಸ್ತಿ ಪ್ರದಾನ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಈಡಿಗ ಸಮುದಾಯದ ಐದು ಮಂದಿಗೆ ಧೀರದೀವರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಗೋಡು ಚಳವಳಿಯ ಪ್ರೇರಕ ಶಕ್ತಿ ಮಂಜಮ್ಮ ಗಣಪತಿಯಪ್ಪ ಅವರ ಗೈರು ಹಾಜರಿಯಲ್ಲಿ ಅವರ ಪುತ್ರ ಉಮೇಶ್ ಹಿರೇನಲ್ಲೂರು ಅವರು ಪ್ರಶಸ್ತಿ ಸ್ವೀಕರಿಸಿದರು. ಸಮಾಜವಾದಿ ನೇತಾರ ಬಿ.ಸ್ವಾಮಿರಾವ್, ವೈದ್ಯರತ್ನ ಡಾ.ಜಿ.ಡಿ.ನಾರಾಯಣಪ್ಪ, ಇತಿಹಾಸ ಸಂಶೋಧಕ ಮಧುಗಣಪತಿ ರಾವ್ ಮಡೆನೂರು, ಕೃಷಿ ವಿಜ್ಞಾನಿ ಡಾ.ಎಂ.ಕೆ.ನಾಯ್ಕ್ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪಡೆದ ಬಿ.ಸ್ವಾಮಿರಾವ್ ಸೂಕ್ತ ವೇದಿಕೆಯಲ್ಲಿ ತುಂಬಾ ಅಭಿಮಾನದಿಂದ ಪುರಸ್ಕಾರ ಸ್ವೀಕರಿಸಿದ್ದೇನೆ. ಕುಲಬಾಂಧವರು ನೀಡಿದ ಗೌರವ ಅನನ್ಯವಾದುದು. ದೀವರ ಸಮುದಾಯ ಶೋಷಿತ ಸಮುದಾಯವಾಗಿದೆ. ರಾಜಕೀಯವಾಗಿ ಹಂಚಿಹೋಗಿದೆ.ಆದರೆ ಸಾಂಸ್ಕೃತಿಕವಾಗಿ ಎಲ್ಲರನ್ನೂ ಒಂದು ಗೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು.
ಮಾಜಿ ಸಚಿವ ಹಾಗೂ ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ಅವರು ಎಲ್ಲರಿಗೂ ಪ್ರಶಸ್ತಿ ನೀಡಿ ಮಾತನಾಡಿ, ಯಾವುದೇ ಸಮುದಾಯ ತನ್ನ ಕಲೆ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಅಗತ್ಯವಿದೆ. ದೀವರ ಹಾಡು ಹಸೆ ಕಲೆಗಳಿಗೆ ಇತ್ತೀಚೆಗೆ ಮನ್ನಣೆ ಸಿಗುತ್ತಿದೆ. ಯುವ ಸಮುದಾಯ ಆಯೋಜಿಸಿರುವ ಸಾಂಸ್ಕೃತಿಕವ ವೈಭವ ಕಾರ್ಯಕ್ರಮ ಒಂದು ಉತ್ತಮ ಸಂದೇಶ ಸಾರುತ್ತದೆ ಮತ್ತು ಇದರ ಅಗತ್ಯ ಇಂದಿನ ಪೀಳಿಗೆಗೆ ಇದೆ ಎಂದು ಹೇಳಿದರು.
ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಟಾಕಪ್ಪ ಕಣ್ಣೂರು ಅವರು, ವಾಟ್ಸ್‌ಪ್ ಬಳಗ ಈ ರೀತಿಯ ಅಭೂತಪೂರ್ವ ಕಾರ್ಯಕ್ರಮ ಮಾಡಿದೆ. ಇದಕ್ಕೊಂದು ಸಾಂಸ್ಥಿಕ ಚೌಕಟ್ಟು ಕೊಟ್ಟರೆ ಒಳಿತು ಎಂದು ಹೇಳಿದರು. ವೇದಿಕೆಯಲ್ಲಿ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ, ಅರವಿಂದ ಕರ್ಕಿಕೋಡಿ ಉಪಸ್ಥಿತರಿದ್ದರು. ವೈಭವ ಸಮಿತಿ ಸಂಚಾಲಕ ನಾಗರಾಜ್ ನೇರಿಗೆ ಅಧ್ಯಕ್ಷತೆ ವಹಿಸಿದ್ದರು. ವೀರಭದ್ರಸೂರಗುಪ್ಪೆ ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿಸಿದರು. ರವಿರಾಜ್ ಮಂಡಗಳಲೆ ಹಾಗೂ ಶೇಖರ್ ಕೋಳೂರು, ತಮ್ಮಣ್ಣ ಕೆಳದಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಡಾ.ಶಶಿಕುಮಾರ್,ಹಿಳ್ಳೋಡಿ ಕೃಷ್ಣಮೂರ್ತಿ, ಜಯದೇವಪ್ಪ ಅಭಿನಂದನಾ ಪತ್ರ ವಾಚಿಸಿದರು.
ಡಾ.ನಾಗೇಶ್ ಬಿದರಗೋಡು ಸ್ವಾಗತಿಸಿದರು. ಕಾಗೋಡು ಅಣ್ಣಪ್ಪ ಮತ್ತು ಜ್ಯೋತಿಕುಮಾರಿ ಅವರು ಕಾರ್ಯಕ್ರಮ ನಿರೂಪಿಸಿದರು.ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ದೀವರ ಸಮುದಾಯದ ಸಾಂಸ್ಕೃತಿಕ ಗಟ್ಟಿತನವನ್ನು ಬಿಂಬಿಸಿದವು.
ದೀವರ ಸಮುದಾಯ ತೀರಾ ಶೋಷಣೆ ಅನುಭವಿಸಿದ ಸಮಾಜವಾಗಿದೆ. ಅಂದು ಅಕ್ಷರ ಕಲಿಯುವುದೇ ಕಷ್ಟಕರವಾದ ಸಂದರ್ಭದಲ್ಲಿ ನಮಗೆ ವಿದ್ಯೆ ದೊರೆಯಿತು. ವೈದ್ಯನಾಗಿ ನಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆ ತಂದಿದೆ.ಸಮುದಾಯದ ಕಲೆ ಸಂಸ್ಕೃತಿ ಉಳಿಸುವ ಕಾಯಕಕ್ಕೆ ಯಾವತ್ತೂ ಬೆಂಬಲಿಸುತ್ತೇವೆ
ಡಾ.ಜಿ.ನಾರಾಯಣಪ್ಪ, ಪ್ರಶಸ್ತಿ ಪುರಸ್ಕೃತರು.
ಮಲೆನಾಡಿನಲ್ಲಿ ಅರಣ್ಯ ಸಂಬಂಧಿತ ಕಠಿಣ ಕಾನೂನಿನ ಕುಣಿಕೆಗೆ ಸಿಕ್ಕಿಕೊಂಡ ರೈತ ಸಮುದಾಯದಲ್ಲಿ ಹೆಚ್ಚಿನ ಭಾಗ ದೀವರಿದ್ದಾರೆ. ಆಡಳಿತ ಪಕ್ಷವಾಗಿ ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನ ನಾವು ಮಾಡುತ್ತಿದ್ದೇವೆ. ವಿರೋಧ ಪಕ್ಷದವರೂ ಇದಕ್ಕೆ ಹೋರಾಟ ಮಾಡುತ್ತಿದ್ದಾರೆ. ಎಲ್ಲರೂ ಸೇರಿ ಈ ಕಗ್ಗಂಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ
ಹರತಾಳು ಹಾಲಪ್ಪ, ಶಾಸಕರು
ಚಿತ್ತಾರಗಿತ್ತಿ ಪ್ರಶಸ್ತಿ ವಿಜೇತರು:
ಬೂಮಣ್ಣಿ ಬುಟ್ಟಿ ವಿಭಾಗ
ಶಿವಮ್ಮ ಸಾಗರ, ಪ್ರಥಮ,ತೇಜಸ್ವಿನಿ ಕುಪ್ಪಗಡ್ಡೆ ದ್ವಿತೀಯ, ಅಶ್ವಿನಿ ಎಸ್ ಐಗಿನ ಬೈಲು ತೃತೀಯ ಬಹುಮಾನ ಗಳಿಸಿದರು.
ಹಸೆ ಚಿತ್ತಾರ ವಿಭಾಗ:
ಲಕ್ಷ್ಮೀ ಸೋಮಶೇಖರ್ ಹಾರೋ ಹಿತ್ತಲು ಇವರು ಪ್ರಥಮ, ಅಶ್ವಿನಿ ಐಗಿನಬೈಲು ದ್ವಿತೀಯ ಹಾಗೂ ಶೃತಿ ನಾಡಕಲಸಿ ತೃತೀಯ ಬಹುಮಾನ ಗಳಿಸಿದರು. ಎರಡೂ ವಿಭಾಗಗಳಲ್ಲಿ ತಲಾ ಏಳು ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.