ಶಿವಮೊಗ್ಗ : ಡಿಸೆಂಬರ್ 17 ಮತ್ತು 18ರಂದು ನಗರದ 4-5 ಸಮಾನಾಂತರ ವೇದಿಕೆಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕಸ್ಪರ್ಧೆಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.
ಅವರು ಕ್ರೀಡಾಕೂಟದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರತಿನಿತ್ಯ ಕೆಲಸ-ಕಾರ್ಯಗಳ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ನೌಕರರು ಹಾಗೂ ಕಚೇರಿ ಸಿಬ್ಬಂಧಿಗಳು ತಮ್ಮ ಒತ್ತಡದ ಕೆಲಸದಿಂದ ಮುಕ್ತರಾಗಿ ಆಟೋಟಗಳಲ್ಲಿ ಭಾಗವಹಿಸಿ, ಮನಸ್ಸಂತೋಷ ಕಂಡುಕೊಳ್ಳುವ ಸದುದ್ದೇಶದಿಂದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಅಲ್ಲದೇ ನೌಕರರಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ದೊರೆಯಲಿದೆ ಎಂದು ಅವರು ತಿಳಿಸಿದರು.
ನಡೆಯುವ ಎಲ್ಲಾ ಕ್ರೀಡೆಗಳು ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತ ನೌಕರರೆಲ್ಲರಿಗೂ ಅವಕಾಶ ದೊರೆಯಲಿದೆ. ಈ ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಗುಂಪು ಮತ್ತು ವೈಯಕ್ತಿಕ ಸ್ಪರ್ಧೆಗಳನ್ನು ನಡೆಸಲಾಗುವುದು. ಕ್ರೀಡೆಯಲ್ಲಿ ವಿಜೇತರಾದ ಹಾಗೂ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳನ್ನು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದ ಅವರು, ಭಾಗವಹಿಸಲಿರುವ ಸುಮಾರು 3,000ಕ್ಕೂ ಹೆಚ್ಚಿನ ಸ್ಪರ್ಧಾಳುಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಆಟೋಟ, ಊಟೋಪಹಾರ, ವೇದಿಕೆ ನಿರ್ವಹಣೆ, ಮೇಲುಸ್ತುವಾರಿ, ಸ್ವಾಗತ ಸಮಿತಿ ಮುಂತಾದವುಗಳಿಗಾಗಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳನ್ನೊಳಗೊಂಡ ಹಲವು ಸಮಿತಿಗಳನ್ನು ರಚಿಸಲಾಗುವುದು. ಕಾರ್ಯಕ್ರಮದ ಉದ್ಘಾಟನೆಗೆ ನಿಯಮಾನುಸಾರ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಲಾಗುವುದು ಎಂದರು.
ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಗರದ ಕುವೆಂಪು ರಂಗಮಂದಿರ, ಬಿ.ಆರ್.ಅಂಬೇಢ್ಕರ್ ಭವನ, ನೌಕರರ ಸಂಘ, ನೆಹರೂ ಕ್ರೀಡಾಂಗಣ, ಎನ್.ಇ.ಎಸ್.ಮೈದಾನ ಸೇರಿದಂತೆ ಹಲವು ಸಮನಾಂತರ ವೇದಿಕೆ-ಮೈದಾನಗಳಲ್ಲಿ ನಡೆಯಲಿವೆ ಎಂದ ಅವರು, ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ತೀರ್ಪುಗಾರರಾಗಿ ತಜ್ಞರನ್ನು ನಿಯೋಜಿಸಲಾಗುವುದು ಎಂದರು.
ಎರಡು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದ ದಿನದಂದು ಪ್ರತಿದಿನ ಸಂಜೆ ಕಲಾವಿದರನ್ನು ಆಹ್ವಾನಿಸಿ ರಸಸಂಜೆ ಹಾಗೂ ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ನೌಕರರು ಹಾಗೂ ಅಧಿಕಾರಿಗಳು ಈ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಲು, ಕ್ರೀಡಾಕೂಟದ ವ್ಯವಸ್ಥಿತ ನಿರ್ವಹಣೆಗೆ ಅನುಕೂಲವಾಗುವಂತೆ ಹಲವು ಸಮಿತಿಗಳನ್ನು ರಚಿಸಿ ಪ್ರೋತ್ಸಾಹಿಸುತ್ತಿರುವ ಜಿಲ್ಲಾಧಿಕಾರಿಗಳ ಕಾರ್ಯ ಅಭಿನಂದನೀಯವಾದುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಪ್ರಕಾಶ್, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್‍ಕುಮಾರ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ.ಸಿದ್ಧಬಸಪ್ಪ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ಅರುಣ್‍ಕುಮಾರ್, ನರಸಿಂಹಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.