ಗೆಳೆಯ ಲೋಲಿತ್ ಅಂತಹ ಅವಸರ ಏನಿತ್ತು ನಿನಗೆ ?, ಇದು ಶಿವಮೊಗ್ಗ ನಗರದಲ್ಲಿ ಗುರುವಾರ ನಸುಕಿನಲ್ಲಿ ನೇಣಿಗೆ ಕೊರಳೊಡ್ಡಿದ ಆರ್ಥೋ ಸರ್ಜನ್ ಡಾ.ಲೋಹಿತ್‌ಗೆ ಆತನ ಗೆಳೆಯರು, ಸಿಬ್ಬಂದಿ ಕೇಳುತ್ತಿರುವ ಪ್ರಶ್ನೆ.
ಉದಯೋನ್ಮುಖ ಪ್ರತಿಭೆ, ಸಿಬ್ಬಂದಿಗಳ, ರೋಗಿಗಳ ನೆಚ್ಚಿನ ವೈದ್ಯ. ಎಳೆಯ ವಯಸ್ಸಿನಲ್ಲಿ ಬಾರದ ಲೋಕಕ್ಕೆ ಹೋಗಿರುವ ಕಾರಣಕ್ಕೆ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ನಿಗರ್ವಿ ಮತ್ತು ಮೌನಿಯಾಗಿದ್ದ ವೈದ್ಯ ತನ್ನ ಒಡಲೊಳಗಿನ ದುಗುಢವನ್ನು ಯಾರಿಗೂ ಹೇಳದೆ ಬದುಕು ಮುಗಿಸಿಕೊಂಡ ಬಗ್ಗೆ ಎಲ್ಲರಿಗೂ ನೋವಿತ್ತು. ಒಡನಾಡಿಗೆ ಅಂತಿಮ ನಮನ ಸಲ್ಲಿಸುವ ಸಂದರ್ಭ ಬಂದಿದ್ದು, ಮ್ಯಾಕ್ಸ್ ಆಸ್ಪತ್ರೆಯಲ್ಲಿ ಎಲ್ಲರಿಗೂ ಆಘಾತ ತಂದಿತ್ತು.
ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಬಂದಿದ್ದ ಯುವ ವೈದ್ಯ. ಲೋಕವನರಿಯದ ಮಗು, ಮಡದಿ ಪಕ್ಕದ ರೂಮಲ್ಲಿ ಮಲಗಿರುವಾಗ ಮತ್ತೊಂದು ರೂಮಿಗೆ ಹೋಗಿ ಸಾವಿಗೆ ಶರಣಾಗಿದ್ದಾರೆ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಹಲಗೇರಿಯವರಾಗಿದ್ದ ಲೋಲಿತ್ ನಿವೃತ್ತ ಶಿಕ್ಷಕ ಲೋಕೇಶ್ವರ್ ನಾಯ್ಕ ಅವರ ಪುತ್ರ. ವಿದ್ಯಾರ್ಥಿದೆಸೆಯಿಂದಲೂ ರ್‍ಯಾಂಕ್ ವಿದ್ಯಾರ್ಥಿಯಾಗಿದ್ದ ಆತ, ವೈದ್ಯಕೀಯ ವ್ಯಾಸಂಗದ ಸಹಪಾಠಿಯನ್ನು ಪ್ರೇಮಿಸುತ್ತಿದ್ದರೂ, ಇಬ್ಬರು ಅವಳಿ ಸೋದರಿಯರನ್ನು ಮುಂದೆ ನಿಂತು ವಿವಾಹ ಮಾಡಿದ್ದರು. ಭಾವೀ ಪತ್ನಿಯನ್ನು ಸಾಗರ ಸರಕಾರಿ ಆಸ್ಪತ್ರೆಗೆ ವರ್ಗಾವಣೆ ಮಾಡಿಸಿಕೊಂಡು ಕುಟುಂಬದ ಒಪ್ಪಿಗೆ ಪಡೆದು ಕೇವಲ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ. ಪತ್ನಿ ಡಾ.ಸುಚಿತ್ರಾ ಸಾಗರ ಸೀಮೆಯಲ್ಲಿ ಹೆಸರು ಗಳಿಸಿರುವ ಪ್ರಸೂತಿ ತಜ್ಞೆ.
ಒಂದು ತಿಂಗಳು ಹತ್ತು ದಿನದ ಹಿಂದೆ ಹೆರಿಗೆಯಾಗಿದ್ದ ಸುಚಿತ್ರಾ, ಮೈಸೂರು ಜಿಲ್ಲೆ ಕೆ.ಆರ್.ಪೇಟೆಯಿಂದ ಬಾಣಂತನಕ್ಕೆ ಶಿವಮೊಗ್ಗದ ಗೋಪಾಲಗೌಡ ಬಡವಾವಣೆಯಲ್ಲಿರುವ ತಮ್ಮ ಮನೆಗೇ ಬಂದಿದ್ದರು. ವಾರದ ಹಿಂದೆ ಇಲ್ಲಿಗೆ ಬಂದಿದ್ದ ಪತ್ನಿಯ ಆರೈಕೆಗೆ ಕೆಲಸದವರನ್ನು ನೇಮಿಸಿದ್ದ ಲೋಲಿತ್ ಮಾತ್ರ ಚಿಕ್ಕದೊಂದು ಡೆತ್ ನೋಟ್ ಬರೆದಿಟ್ಟು ಹೊರಟು ಹೋಗೇ ಬಿಟ್ಟಿದ್ದಾರೆ.
ಅಂತರಜಾತಿ ವಿವಾಹವಾಗಿದ್ದರೂ ಅನೋನ್ಯವಾಗಿಯೇ ಇದ್ದ ದಂಪತಿ ಬದುಕು ಕಟ್ಟಿಕೊಂಡು ಮುನ್ನಡೆಯುತ್ತಿರುವಾಗಲೇ ವಿಧಿಯಾಟ ಅವರನ್ನು ಬೇರೆ ಮಾಡಿದೆ. ಎಲ್ಲವೂ ಸರಿಯಾಗಿಯೇ ಇದ್ದ ಲೋಲಿತ್ ಬರೆದ ಅಂತಿಮ ಪತ್ರದಲ್ಲಿ, ಬಯಸಿದ ಜೀವನ ಸಿಗಲಿಲ್ಲ, ನಿರೀಕ್ಷಿತ ಯಶಸ್ಸು ಕಾಣದ ಕಾರಣ ಜೀವತ್ಯಾಗ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸೋದರಿಯರು, ಪೋಷಕರು ಮತ್ತು ಪತ್ನಿಗೆ ಕ್ಷಮೆ ಕೇಳಿದ್ದು, ತಮ್ಮ ಸಾವಿಗೆ ತಾವೇ ಕಾರಣ, ಪೊಲೀಸರು ಮತ್ತು ಮೀಡಿಯಾದವರು ಈ ವಿಷಯ ಹೈಲೈಟ್ ಮಾಡಬಾರದಾಗಿಯೂ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲೋಲಿತ್ ಎನ್.ಹೆಚ್ ಆಸ್ಪತ್ರೆಯಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ವೃತ್ತಿ ನೈಪುಣ್ಯತೆಯಿಂದ ಹೆಸರುವಾಸಿಯಾಗಿದ್ದರು. ಅವರ ನಿಧನಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಕಂಬನಿ ಮಿಡಿದಿದೆ.
ಬುಧವಾರ ಕೆಲಸ ಮುಗಿಸಿ ಬಂದು ಮನೆಯ ಹಾಲ್‌ನಲ್ಲಿ ಮಲಗಿದ್ದ ಲೋಲಿತ್, ಮಧ್ಯರಾತ್ರಿ ರೂಮಿಗೆ ಹೋಗಿ ಮಲಗಿದ್ದರು. ಬೆಳಗ್ಗೆ ರೂಮಿನ ಬಾಗಿಲು ತೆಗೆಯದೆ ಮತ್ತು ಮೊಬೈಲ್ ಕರೆಗೂ ಪತಿ ಸ್ಪಂದಿಸದಿದ್ದರಿಂದ ಗಾಬರಿಯಾದ ಸುಚಿತ್ರಾ ಅವರು, ಬಂಧುಗಳಿಗೆ ಫೋನ್ ಮಾಡಿದ್ದರು. ಕೆಲಸದಾಕೆಯೊಂದಿಗೆ ಸೇರಿ ರೂಮಿನ ಚಿಲಕ ಮುರಿದು ನೋಡಿದಾಗ ಲೋಲಿತ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಣತ ಯುವ ವೈದ್ಯನ ಅಕಾಲಿಕ ಮರಣಕ್ಕೆ ಶಿವಮೊಗ್ಗದ ವೈದ್ಯಲೋಕ ತೀವ್ರ ಕಂಬನಿ ಮಿಡಿದಿದೆ.
ಬಾಳಿ ಬದುಕಿ ಸಮಾಜಕ್ಕೆ ಬೆಳಕಾಗಬೇಕಿದ್ದ ಲೋಲಿತ್ ದುಡುಕದೆ ಇದ್ದಿದ್ದರೆ ಸಮಾಜದ ಒಂದು ಆಸ್ತಿಯಾಗುತ್ತಿದ್ದರು. ವಿಧಿಯಾಟ ಏನಿತ್ತೊ ಪ್ರತಿಭಾವಂತ ಜೀವವೊಂದು ಅಕಾಲಿಕವಾಗಿ ಅಗಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಬಂಧುಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂಬುದೊಂದೇ ಅವರ ಒಡನಾಡಿಗಳಿಗಿರು ದಾರಿ.