Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಜೀವಪರ ಸರ್ಜಿ ಬಿಜೆಪಿ ತೆಕ್ಕೆಗೆ, ಕಮಲ ಹಿಡಿದ ಕೆ.ಜಿ.ಶಿವಪ್ಪ ಪುತ್ರ ಪ್ರಶಾಂತ್

ಶಿವಮೊಗ್ಗನಗರದಲ್ಲಿ ತಮ್ಮ ಸಾಮಾಜಿಕ ಚಟುವಟಿಕೆಗಳ ಮೂಲಕ ಜನಪ್ರಿಯರಾಗಿರುವ ಡಾ.ಧನಂಜಯ ಸರ್ಜಿ ಹಾಗೂ ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ ಕೆ.ಎಸ್.ಪ್ರಶಾಂತ್ ಅವರು ತಮ್ಮ ಬೆಂಬಲಿಗರೊಂದಿಗೆ ಭಾನುವಾರ ಬಿಜೆಪಿ ಸೇರಿದರು.
ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಡಿ.ಎಸ್.ಅರುಣ್, ಗಿರೀಶ್ ಪಟೇಲ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಎಲ್‌ಎಲ್‌ಸಿ ಅರ್‌ಕೆ ಸಿದ್ದರಾಮಣ್ಣ ಅವರು ಹಾಜರಿದ್ದರು.
ಧನಂಜಯ ಸರ್ಜಿ ಅವರು ಬಿಜೆಪಿ ಪಕ್ಷದಿಂದ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಯಸಿದ್ದರು. ಆದರೆ ಅವರಿಗೆ ಮೊದಲು ಪಕ್ಷ ಸೇರಿ ಆಮೇಲೆ ಸ್ಪರ್ಧೆ ವಿಚಾರ ಎಂಬ ಸೂಚನೆ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದರೆನ್ನಲಾಗಿದೆ. ಸರ್ಜಿ ಫೌಂಡೇಷನ್ ಹಾಗೂ ಇನ್ನಿತರ ಸಂಘಟನೆಗಳೊಂದಿಗೆ ಜನಪರ ಮತ್ತು ಜೀವಪರ ಕೆಲಸ ಮಾಡುತ್ತಿದ್ದ ಸರ್ಜ ಅವರು, ಸ್ವತಂತ್ರವಾಗಿಯೇ ತಮ್ಮ ಐಡೆಂಟಿಟಿಯನ್ನು ಪ್ರಚುರಪಡಿಸಿಕೊಂಡಿದ್ದರು. ಆದರೆ ಈಗ ರಾಜಕೀಯದ ಮುಖ್ಯವಾಹಿನಿಯನ್ನು ಬಿಜೆಪಿ ಪಕ್ಷದ ಮೂಲಕ ಆಯ್ಕೆ ಮಾಡಿದಕೊಂಡಿದ್ದಾರೆ.
ಮಹತ್ವಾಕಾಂಕ್ಷಿ ಪ್ರಶಾಂತ್:
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರನ್ನು ಶಾಸಕರನ್ನು ಉತ್ಪಾದಿಸುವ ಕಾರ್ಖಾನೆ ಎಂದೇ ಕರೆಯುತ್ತಿದ್ದರು. ಅದನ್ನು ಅವರು ಹಲವು ಬಾರಿ ಸಾಬೀತುಪಡಿಸಿದ್ದರು ಕೂಡಾ. ಹೀಗೆ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದವರು ದಿವಂಗತ ಕೆ.ಜಿ.ಶಿವಪ್ಪ ಅವರು. ವಕೀಲಿಕೆ ಮಾಡಿಕೊಂಡಿದ್ದ ಅವರನ್ನು ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮಾಡಿ ಗೆಲ್ಲಿಸಿದ್ದರು. ಅವರ ಪುತ್ರ ಹಾಗೂ ಉದ್ಯಮಿ ಕೆ.ಎಸ್.ಪ್ರಶಾಂತ್ ಅವರೂ ರಾಜಕೀಯ ಮಹಾತ್ವಾಕಾಂಕ್ಷೆಯಿಂದ ಬಿಜೆಪಿ ಸೇರಿದ್ದಾರೆ.
ಸಾಗರ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿಯಿದೆ. ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಪ್ರಭಾವಿಯಾಗಿರುವ ಸಚಿವ ಸುನಿಲ್ ಕುಮಾರ್ ಅವರ ಬಾವಮೈದ ಆಗಿರುವ ಪ್ರಶಾಂತ್ ಈಗ ಬಿಜೆಪಿ ಸೇರಿದ್ದಾರೆ. ಸಾಗರ ಬಿಜೆಪಿಯಲ್ಲಿಯೂ ಬುಡಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿರುವ ಹಲವು ಮಂದಿ ಇದ್ದಾರೆ. ಈಡಿಗ ಸಮುದಾಯದ ಪ್ರಭಾವಿ ರಾಜಕಾರಣಿ ಹಾಗೂ ಶಾಸಕ ಹರತಾಳು ಹಾಲಪ್ಪ ಅವರು ಬಿಜೆಪಿಯಲ್ಲಿದ್ದಾರೆ. ಈವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದ ಪ್ರಶಾಂತ್ ಈಗ ಬಿಜೆಪಿಯಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಮುಂದಾಗಿದ್ದಾರೆ. ನೆರೆಯ ಸೊರಬದಲ್ಲಿ ಕುಮಾರ್ ಬಂಗಾರಪ್ಪ ಅವರು ಶಾಸಕರಾಗಿದ್ದು, ಪ್ರಶಾಂತ್ ಅವರ ಬಂಧುವೂ ಆಗಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಮಹತ್ತರ ಪಾತ್ರವಹಿಸಿ ಅದರ ಯಾವ ಲಾಭವನ್ನೂ ಪಡೆಯದೆ ಬಿಜೆಪಿ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸಂಬಂಧಿಗಳ ಸಂಖ್ಯೆ ಈಗ ಬಿಜೆಪಿಯಲ್ಲಿ ಹೆಚ್ಚಾಗುತ್ತಿರುವುದು ರಾಜಕೀಯ ಕಾಕತಾಳೀಯವೇ ಆಗಿದೆ.

Ad Widget

Related posts

ವಾಣಿಜ್ಯ ಮತ್ತುಕೈಗಾರಿಕಾ ಸಂಘದ ಸದಸ್ಯತ್ವ ಹೆಚ್ಚಳಕ್ಕೆ ಚಿಂತನೆ

Malenadu Mirror Desk

ಕುಲಾಂತರಿ ತಳಿಯಿಂದ ಕೃಷಿ ಸಂಸ್ಕೃತಿ ನಾಶ : ರೈತ ಸಂಘ

Malenadu Mirror Desk

ಕೋಳಿ ಅಂಕಕ್ಕೆ ಹೋಗಿ ಬೈಕ್ ಸುಟ್ಟುಕೊಂಡರು !

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.