ಚುನಾವಣೆ ಹೊಸ್ತಿಲಲ್ಲಿ ಜಿಲ್ಲಾ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಜೋರಾಗಿಯೇ ಆರಂಭವಾಗಿದ್ದು, ಪಕ್ಷಾಂತರಿಗಳು ಆಡಳಿತ ಪಕ್ಷ ಬಿಜೆಪಿಯತ್ತಲೇ ಒಲವು ತೋರುತ್ತಿದ್ದಾರೆ. ಡಾ. ಧನಂಜಯ ಸರ್ಜಿ ಅವರು ಗೌರಿಗದ್ದೆಯ ಅವಧೂತರಾದ ವಿನಯ್‌ಗುರೂಜಿ ಸಾರಥ್ಯದಲ್ಲಿ ಶಿವಮೊಗ್ಗದಲ್ಲಿ ನಡೆದ ಸಂಧಾನ ಸಭೆಯಲ್ಲಿ ಬಿಜೆಪಿ ಸೇರಲು ಮುಂದಾಗಿದ್ದರು ಎನ್ನಲಾಗಿದೆ.
ಬಿಜೆಪಿಯ ಪ್ರಶ್ನಾತೀತ ನಾಯಕರಾದ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ದೂರ ಸರಿದ ಮೇಲೆ ಆ ಪಕ್ಷದತ್ತ ಆಕರ್ಷಣೆ ಕಡಿಮೆಯಾಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರ ಸೇರಿದಂತೆ ಜಿಲ್ಲಾ ಹಂತದ ಪ್ರಮುಖ ನಾಲ್ವರು ಮುಂದಾಳುಗಳು ಬಿಜೆಪಿ ಪಡಸಾಲೆಗೆ ಬಂದಿದ್ದಾರೆ.
ಸೊರಬದಲ್ಲಿ ತಲ್ಲೂರು ರಾಜು ಅವರು ಬಿಜೆಪಿ ಸೇರಿದ್ದರೆ, ಶಿಕಾರಿಪುರದಲ್ಲಿ ಸಜ್ಜನ ರಾಜಕಾರಣಿ ಎನಿಸಿಕೊಂಡಿರುವ ಹೆಚ್.ಟಿ.ಬಳಿಗಾರ್ ಹಾಗೂ ಜನಪರ ಮತ್ತು ಜೀವಪರ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಸಜ್ಜನ ಡಾಕ್ಟರ್ ಧನಂಜಯ ಸರ್ಜಿ ಅವರು ಶಿವಮೊಗ್ಗದಲ್ಲಿ ಬಿಜೆಪಿ ನಡುಮನೆಗೆ ಪ್ರವೇಶ ಪಡೆದಿದ್ದಾರೆ. ಸಾಗರದ ಯುವ ಮುಂದಾಳು ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ ಪ್ರಶಾಂತ್ ಕೆ.ಎಸ್. ಅವರು ಕಮಲ ಮುಡಿಗೇರಿಕೊಂಡಿದ್ದಾರೆ.
ಪಕ್ಷ ಸೇರಿದ ಕೆಲವೇ ದಿನಗಳಲ್ಲಿ ತಲ್ಲೂರು ರಾಜು ಅವರನ್ನು ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ವಾಲ್ಮೀಕಿ ಸಮಾಜದ ಪ್ರಮುಖರಾದ ಬಳಿಗಾರ್ ಅವರು ಶಿಕಾರಿಪುರದಲ್ಲಿ ಚುನಾವಣೆಗೆ ನಿಂತು ಸೋಲು ಕಂಡ ಮೇಲೆ ಬಿಜೆಪಿಯಲ್ಲಿಯೇ ರಾಜಕೀಯ ಆಶ್ರಯ ಪಡೆದುಕೊಳ್ಳುವ ಹಂಬಲದಲ್ಲಿದ್ದಾರೆ. ಬಿ.ವೈ.ವಿಜಯೇಂದ್ರ ಅವರು ಅಭ್ಯರ್ಥಿಯಾಗುವುದು ಖಚಿತವಾಗುತ್ತಿದ್ದಂತೆ ಕ್ಷೇತ್ರದ ಮುಂಬರಲಿರುವ ರಾಜಕೀಯ ಸನ್ನಿವೇಶವನ್ನು ಅರಿತ ಬಳಿಗಾರ್ ಬಿಜೆಪಿ ಸೇರಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿದ್ದ ಡಾ.ಧನಂಜಯ ಸರ್ಜಿ ಅವರು ತರಾತುರಿಯಲ್ಲಿ ಬಿಜೆಪಿ ಏಕೆ ಸೇರಿದರು ಎಂಬ ಕುತೂಹಲ ಎಲ್ಲರಲ್ಲಿದೆ. ಈ ಬಾರಿಯೂ ಈಶ್ವರಪ್ಪರೇ ಬಿಜೆಪಿಯ ಅಭ್ಯರ್ಥಿಯಾಗಲಿದ್ದಾರೆ ಎಂಬ ಗುಮಾನಿಗಳಿದ್ದು, ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರ ಸಮ್ಮುಖದಲ್ಲಿ ಈಶ್ವರಪ್ಪ ಮತ್ತು ಧನಂಜಯ ಸರ್ಜಿ ಅವರ ನಡುವೆ ಒಮ್ಮತ ಮೂಡಿದೆ ಎಂದು ಹೇಳಲಾಗಿದೆ. ಕಳೆದ ವಾರ ಶಿವಮೊಗ್ಗಕ್ಕೆ ಬಂದಿದ್ದ ವಿನಯ್ ಗುರೂಜಿ ಅವರು ನಗರದ ಗೋಪಾಲಗೌಡ ಬಡಾವಣೆಯ ಉದ್ಯಮಿಯೊಬ್ಬರ ಮನೆಯಲ್ಲಿ ಸಭೆ ಸೇರಿದ್ದರು. ಖುದ್ದು ವಿನಯ್ ಗುರೂಜಿಯವರ ಒತ್ತಾಸೆಯಂತೆ ಸಭೆ ನಡೆದಿದ್ದು, ಸಂಧಾನ ಏರ್ಪಟ್ಟು ಸರ್ಜಿ ಅವರ ಬೆನ್ನಿಗಿ ನಿಲ್ಲುವ ಭರವಸೆ ನೀಡಿ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.
ಸರ್ಜಿ ಬಿಜೆಪಿ ಸೇರ್ಪಡೆಯಿಂದ ನಗರದ ಹಲವು ಸಾಮಾಜಿಕ ಹೋರಾಟಗಾರರು, ಸಂಘಟನೆಗಳಿಗೆ ನಿರಾಸೆಯಾಗಿದೆ. ಕಳೆದ ಒಂದು ವರ್ಷದಿಂದ ಜನಪರ ಮತ್ತು ಜೀವಪರ ಎಂದು ಹೇಳಿಕೊಂಡಿದ್ದ ಧನಂಜಯ ಸರ್ಜಿ ಅವರೊಂದಿಗೆ ಕೆಲಸ ಮಾಡಿದ್ದ ಹಲವು ಸಂಘಟನೆಗಳು ಮತ್ತು ಮುಖಂಡರು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.
ಪ್ರಶಾಂತ್ ಅವರು ತಮ್ಮ ಬಾವ ಹಾಗೂ ಸಚಿವರಾದ ಸುನೀಲ್ ಕುಮಾರ್ ಮೂಲಕ ಬಿಜೆಪಿ ಸೇರಿದ್ದು, ವಿಧಾನ ಸಭೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದರೂ, ಅಲ್ಲಿ ಹಾಲಿ ಶಾಸಕ ಹರತಾಳು ಹಾಲಪ್ಪ ಅವರಿದ್ದು, ಅವರನ್ನು ಸೊರಬದಿಂದ ಕಣಕ್ಕಿಳಿಸಲಾಗುತ್ತದೆ ಎಂಬ ವದಂತಿಗಳಿದ್ದರೂ, ಸಾಗರ ಬಿಜೆಪಿಯಲ್ಲಿ ಟಿ.ಡಿ.ಮೇಘರಾಜ್, ಚೇತನ್ ರಾಜ್ ಕಣ್ಣೂರು ಅವರಂತಹ ಪಕ್ಷನಿಷ್ಠ ವ್ಯಕ್ತಿಗಳು ಹಲವರಿದ್ದಾರೆ.