ಕುವೆಂಪು ವಿವಿ: ಡಾ. ಬಿ. ಆರ್. ಅಂಬೇಡ್ಕರ್‌ರವರ 66ನೇ ಮಹಾಪರಿನಿಬ್ಬಾಣ ದಿನಾಆಚರಣೆ
ಶಂಕರಘಟ್ಟ, ಡಿ. 06: ಸಂವಿಧಾನವು ಪ್ರಜಾಪ್ರಭುತ್ವ, ಸಮಾನತೆ, ಜಾತ್ಯಾತೀತತೆ, ಭ್ರಾತೃತ್ವಗಳನ್ನು ಅಳವಡಿಸಿಕೊಳ್ಳಲು ನಿರ್ದೇಶಿಸುತ್ತಿದ್ದರೆ, ಇಂದಿನ ಪ್ರಭುತ್ವವು ತದ್ವಿರುದ್ಧ ದಿಕ್ಕಿನಲ್ಲಿ ವಿಜೃಂಭಿಸುತ್ತಿದೆ ಎಂದು ಚಿತ್ರದುರ್ಗದ ವಿಶ್ರಾಂತ ಪ್ರಾಚಾರ್ಯ ಹಾಗೂ ಅಂಬೇಡ್ಕರ್ ವಾದಿ ಸಿ. ಕೆ. ಮಹೇಶ್ ವಿಷಾದ ವ್ಯಕ್ತಪಡಿಸಿದರು.
ಕುವೆಂಪು ವಿವಿಯ ಡಾ, ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಬೆಳಿಗ್ಗೆ ವಿವಿಯ ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ ಬಿ. ಆರ್. ಅಂಬೇಡ್ಕರ್‌ರವರ 66ನೇ ಮಹಾಪರಿನಿಬ್ಬಾಣ ದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಹಿನ್ನೆಲೆಯಾಧರಿಸಿ ಮಾತ್ರ ಮೀಸಲು ನೀಡಲು ಸಂವಿಧಾನ ಅನುವು ಮಾಡಿಕೊಟ್ಟಿತ್ತು. ಆದರೆ ಪ್ರಭುತ್ವವು ಆರ್ಥಿಕ ಮಾನದಂಡದಡಿ ಅದನ್ನು ನೀಡಲು ಆರಂಭಿಸಿರುವುದು ಸಂವಿಧಾನದ ಮೂಲ ಆಶಯಕ್ಕೆ ನೀಡಿದ ಪೆಟ್ಟಾಗಿದೆ. ದಲಿತರ, ಹಿಂದುಳಿದ ಸಮುದಾಯದವರ ಬಡತನ ಮಟ್ಟವನ್ನು 2.5 ಲಕ್ಷಕ್ಕೆ ಮಿತಿಗೊಳಿಸಿರುವ ಆಡಳಿತಾಂಗವು ಮೇಲ್ವರ್ಗಗಳ ಬಡತನ ಮಟ್ಟವನ್ನು 8 ಲಕ್ಷದವರೆಗೂ ವಿಸ್ತರಿಸಿರುವುದು ಅಸಮಾನತೆಯ ನಡೆಯಲ್ಲದೇ ಮತ್ತೇನು? ಎಂದು ಪ್ರಶ್ನಿಸಿದರು.
ದಿನದಿನವೂ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು, ಉದ್ಯಮಗಳನ್ನು ಸರ್ಕಾರವೇ ಮುಂದೆನಿಂತು ಮಾರಾಟ ಮಾಡುತ್ತಿರುವುದು ಅಂಬಾನಿ, ಅದಾನಿಗಳನ್ನು ಬಲಶಾಲಿಗಳನ್ನಾಗಿಸುತ್ತಿದೆ. ಹೀಗೆ ಒಬ್ಬ ವ್ಯಕ್ತಿ/ಕುಟುಂಬದ ಬಳಿ ಹಣ, ಸಂಪತ್ತು, ಅಧಿಕಾರಗಳು ಕ್ರೂಢಿಕರಣಗೊಳ್ಳುತ್ತಿರುವುದು ರಾಜ್ಯನೀತಿ ನಿರ್ದೇಶಕ ತತ್ವಗಳ ಉಲ್ಲಂಘನೆಯಾಗಿದೆ. ಪಾರ್ಲಿಮೆಂಟ್, ಶಾಸನ ಸಭೆಗಳಲ್ಲಿ ಶ್ರೀಮಂತರು, ಬಲಾಢ್ಯರು ಹೋಗಿ ಕೂರುತ್ತಿರುವುದು ಅವರ ಅನುಕೂಲಕ್ಕೆ ತಕ್ಕಂತೆ ಕಾನೂನು, ನಿಯಮಾವಳಿಗಳನ್ನು ರೂಪಿಸಿಕೊಳ್ಳಲು ದಾರಿಮಾಡಿಕೊಟ್ಟಿದೆ.
ಅಂಬೇಡ್ಕರ್ ಪ್ರಕಾರ ಚುನಾವಣೆಯಲ್ಲಿ ಮತವೆಂದರೆ ಮೌಲ್ಯವಾಗಿರುತ್ತದೆ. ಆದರೆ ಇಂದು ಮತಕ್ಕೆ ಶ್ರೀಮಂತರು ಅಂಟಿಸಿರುವ ಜಾತಿ, ಧರ್ಮ, ಭಾಷೆ, ಪ್ರಾಂತೀಯತೆ ವಿಚಾರಗಳು ಕೂಡಿಕೊಂಡು ಅದೊಂದು ಸರಕಾಗಿ ಮಾರ್ಪಾಟಾಗಿದೆ. ಶ್ರೀಮಂತರು ಆ ಸರಕನ್ನು ಬಡವರಿಂದ ಚುನಾವಣಾ ಸಮಯದಲ್ಲಿ ಖರೀದಿಸಿ ಗೆದ್ದು ಮತ್ತಷ್ಟು ಕೊಬ್ಬಿಹೋಗುತ್ತಿದ್ದಾರೆ. ಮತವು ಮೌಲ್ಯವೆಂದು ಜನಸಾಮಾನ್ಯರು ಅರಿತು ಎಲ್ಲ ಅಸ್ಮಿತೆಗಳನ್ನು ತೊಡೆದು ಚಲಾಯಿಸಿದಲ್ಲಿ ಒಳ್ಳೆಯ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಅದು ಪ್ರಜಾಪ್ರಭುತ್ವ ಉಳಿಯಲು, ಸಂವಿಧಾನ ಮಾತನಾಡಲು ದಾರಿಮಾಡಿಕೊಡುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಎಲ್ಲ ಯುವಮನಸ್ಸುಗಳು ಅಂಬೇಡ್ಕರ್‌ರನ್ನು ಸ್ಫೂರ್ತಿಯಾಗಿ ಪರಿಗಣಿಸಿ ನಿರಂತರ ಅಧ್ಯಯನದಲ್ಲಿ ತೊಡಗಿ ಉನ್ನತ ಸ್ಥಾನಗಳನ್ನು ಗಳಿಸಬೇಕು. ಆರ್ಥಿಕವಾಗಿ ಸದೃಢರಾಗಿ ಸಮಾನತೆ, ಭ್ರಾತೃತ್ವಗಳನ್ನು ಮೈಗೂಡಿಸಿಕೊಂಡ ಅತ್ಯುತ್ತಮ ಪ್ರಜೆಗಳಾಗಿ ದೇಶವನ್ನು ಮುನ್ನಡೆಸಬೇಕು ಎಂದು ಕರೆಕೊಟ್ಟರು.
ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್‌ಕುಮಾರ್ ಎಸ್. ಕೆ., ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಅಂಜನಪ್ಪ ಬಿ. ಹೆಚ್.. ಡಾ. ಉದ್ದಗಟ್ಟಿ ವೆಂಕಟೇಶ್, ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.
ಅಂಬೇಡ್ಕರ್ ಮತ್ತು ಶರಣ ಚಳವಳಿ
ದಿನವೊಂದರಲ್ಲಿ ಸತತ ಹದಿನೆಂಟು ತಾಸು ಅಧ್ಯಯನದಲ್ಲಿ ತೊಡಗುತ್ತಿದ್ದವರು ಅಂಬೇಡ್ಕರ್. ಅವರು ಜಗತ್ತಿನಲ್ಲೇ ಅತಿಹೆಚ್ಚು ಓದಿದ, ಬರವಣಿಗೆ ಮಾಡಿರುವ, ಮಾತನಾಡಿರುವ ವ್ಯಕ್ತಿಯಾಗಿದ್ದಾರೆ. ಸರ್ವರ ಏಳಗೆ, ಕಾಯಕ, ಸಮಾನತೆ, ಭ್ರಾತೃತ್ವಗಳನ್ನು ಪ್ರಬಲವಾಗಿ ಪ್ರತಿಪಾದಿಸಿದವರು ಬುದ್ಧ ಮತ್ತು ಬಸವಣ್ಣನವರು. ಪಕ್ಕದ ಮಹಾರಾಷ್ಟ್ರ ಲ್ಲಿದ್ದ ಬಾಬಾಸಾಹೇಬರು ಆಳವಾಗಿ ಬುದ್ಧನನ್ನು ಅಧ್ಯಯನಿಸಿದರು. ಮುಂದೆ ಬೌದ್ಧ ಧರ್ಮವನ್ನು ಒಪ್ಪಿ ಸ್ವೀಕರಿಸಿದರು. ಆದರೆ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿಯೇ ರಚಿತವಾದ ವಚನ ಸಾಹಿತ್ಯವನ್ನು ಅವರು ಗಮನಿಸದೇ ಹೋದದ್ದು ವಿಪರ್ಯಾಸ ಮತ್ತು ವಿಷಾದನೀಯ. ಇವನಾರವ, ಇವನಾರವ ಎಂದೆನದಿರಯ್ಯ; ಇವನಮ್ಮವ, ಇವನಮ್ಮವ ಎನಿರಯ್ಯ ಎಂಬ ವಚನಗಳ ಮೌಲ್ಯವನ್ನೇ ತಮ್ಮ ಬದುಕಿನುದ್ದಕ್ಕೂ ಬಾಬಾಸಾಹೇಬರು ಪಸರಿಸಲು ಬಯಸಿದ್ದು. ಅಂಬೇಡ್ಕರ್‌ರ ಗಮನಕ್ಕೆ ಯಾರಾದರೂ ವಚನ ಸಾಹಿತ್ಯದ ಆಶಯಗಳನ್ನು ತಂದಿದ್ದೇ ಆಗಿದ್ದಲ್ಲಿ ಶರಣ ಚಳವಳಿ, ಶರಣ ಧರ್ಮಗಳು ಹಾಗೂ ಕರ್ನಾಟಕ ಮತ್ತು ಭಾರತ ದೇಶಗಳು ಬೇರೊಂದು ರೂಪ, ತಿರುವುಗಳನ್ನು ಪಡೆಯುವ ಸಾಧ್ಯತೆಗಳಿದ್ದವು ಎಂಬುದು ನನ್ನ ಬಲವಾದ ನಂಬಿಕೆ ಎಂದು ಸಿ. ಕೆ. ಮಹೇಶ್ ತಿಳಿಸಿದರು.