ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿ ಹಳ್ಳಿ ಗ್ರಾಮಗಳ ಕತ್ತಲ ಬದುಕು ಮರೆಯಾಗುವ ದಿನ ಬಂದಿದ್ದು, ವಿದ್ಯುದೀಕರಣ ಯೋಜನೆ ಕಾಮಗಾರಿಗೆ ಡಿ.11 ರಂದು ಅಡಿಗಲ್ಲು ಬೀಳಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಚಾಲನೆ ನೀಡಲಿದ್ದಾರೆ. 360.41 ಲಕ್ಷ ರೂ.ಗಳ ಯೋಜನೆ ಇದಾಗಿದ್ದು, ಶೆಟ್ಟಿ ಹಳ್ಳಿ ಅಭಯಾರಣ್ಯದಲ್ಲಿರುವ ಈ ಅವಳಿ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕೆಂಬ ಬೇಡಿಕೆ ಆರು ದಶಕಗಳದ್ದಾಗಿತ್ತು. ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶೆಟ್ಟಿ ಹಳ್ಳಿ ಗ್ರಾಮಸ್ಥರು ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣದಿಂದ ನಿರಾಶ್ರಿತರಾಗಿದ್ದವರು. ನಾಡಿಗೆ ಬೆಳಕು ಕೊಡುವ ಯೋಜನೆಯಲ್ಲಿ ಪುನರ್ವಸತಿ ಹೊಂದಿದ್ದ ಈ ಗ್ರಾಮಗಳಲ್ಲಿ ಈವರೆಗೂ ವಿದ್ಯುತ್ ಸಂಪರ್ಕ ಇರಲಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಕರೆಂಟ್ ಇಲ್ಲದ ಏಕೈಕ ಗ್ರಾಮವಾಗಿದ್ದ ಶೆಟ್ಟಿಹಳ್ಳಿಗೆ ವಿದ್ಯುತ್ ಸಂಪರ್ಕ ಕೊಡುವ ಪ್ರಯತ್ನ ಈ ಹಿಂದೆಯೂ ನಡೆದಿತ್ತಾದರೂ ಕೈಗೂಡಿರಲಿಲ್ಲ.
ಊರಲ್ಲಿ ಕೃಷಿಗೆ ಏನೂ ತೊಂದರೆಯಿಲ್ಲ. ಅಪ್ಪಟ ಮಲೆನಾಡು ಸಂಸ್ಕೃತಿಯ ಈ ಊರಿಗೆ ಎಲ್ಲಾ ಇದ್ದರೂ ಕರೆಂಟ್ ಇಲ್ಲ ಎಂಬ ಕಾರಣಕ್ಕೆ ಹೆಣ್ಣು ಕೊಡುವವರು ಮತ್ತು ಅಲ್ಲಿಂದ ಹೆಣ್ಣು ಮದುವೆ ಮಾಡಿಕೊಳ್ಳಲು ಮುಂದೆ ಬರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಒಂದು ಬಾರಿ ವಿದ್ಯುತ್ ಕಂಬಗಳನ್ನು ಕೂಡಾ ನೆಡಲಾಗಿತ್ತು. ಆದರೆ ಅರಣ್ಯ ಇಲಾಖೆಯ ಅಸಹಕಾರದಿಂದ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಶೆಟ್ಟಿ ಹಳ್ಳಿ ಗ್ರಾಮಸ್ಥರು ಈ ಹಿಂದೆ ಹಲವು ಬಾರಿ ವಿಧಾನ ಸೌಧಕ್ಕೆ ಭೇಟಿ ನೀಡಿ ಮನವಿ ಪ್ರತಿಭಟನೆ ಮಾಡಿದ್ದರು. ಪ್ರತಿ ಚುನಾವಣೆಯಲ್ಲಿಯೂ ಶೆಟ್ಟಿಹಳ್ಳಿಗೆ ಕರೆಂಟ್ ಕೊಡುವ ಭರಸೆ ನೀಡಲಾಗುತ್ತಿತ್ತು. ಆದರೆ ಅದು ಮತ್ತೊಂದು ಚುನಾವಣೆ ತನಕ ಹಾಗೇ ಭರವಸೆಯಾಗಿಯೇ ಇರುತಿತ್ತು.
ನಾಲ್ಕನೇ ಶಂಕುಸ್ಥಾಪನೆ:
ಶೆಟ್ಟಿಹಳ್ಳಿ ಗ್ರಾಮವು ಶಿವಮೊಗ್ಗದಿಂದ 18 ಕಿಲೋಮೀಟರ್ ದೂರದಲ್ಲಿದ್ದು, ಸುಮಾರು 200 ಮನೆಗಳಿದ್ದು, ಅಲ್ಲಿಗೆ ವಿದ್ಯುತ್ ಸಂಪರ್ಕ ಕೊಡುವುದರಿಂದ ವಿದ್ಯುಚ್ಚಕ್ತಿ ಮಂಡಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಒಂದು ಕಾರಣವಾದರೆ, ದಟ್ಟ ಅರಣ್ಯದಲ್ಲಿ ವಿದ್ಯುತ್ ಕಂಬ ಅಳವಡಿಸಲು ಅರಣ್ಯ ಇಲಾಖೆ ಅನುಮತಿ ನೀಡಿರಲಿಲ್ಲ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಒಂದು ಬಾರಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎರಡು ಬಾರಿ ಶೆಟ್ಟಿಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡಿಗಲ್ಲು ಹಾಕಿದ್ದರು. ಈಗ ನಾಲ್ಕನೇ ಬಾರಿ ಭೂಗತ ಕೇಬಲ್ ಮೂಲಕ ವಿದ್ಯುತ್ ನೀಡಲು ಬಿಜೆಪಿ ಸರಕಾರ ಮುಂದಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಇಂಧನ ಸಚಿವ ಸುನೀಲ್ ಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದರಾದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರು ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸ್ಥಳಾಂತರಕ್ಕೆ ಹುನ್ನಾರ:
ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿ ಗ್ರಾಮಗಳು ಅಭಯಾರಣ್ಯದಲ್ಲಿ ಇರುವ ಕಾರಣ ಆನೆ ಹಾವಳಿಯಿದೆ. ಮೂಲ ಸೌಕರ್ಯ ಕೊರತೆ ಮುಂದಿಟ್ಟುಕೊಂಡು ಗ್ರಾಮಸ್ಥರನ್ನು ಅಲ್ಲಿಂದ ಸ್ಥಳಾಂತರಿಸುವ ಪ್ಯಾಕೇಜ್ ಕೂಡಾ ತಯಾರಾಗಿತ್ತು. ಅರಣ್ಯ ಇಲಾಖೆ ಯೋಜನೆ ಸಿದ್ಧಪಡಿಸಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಗ್ರಾಮದ ಶೇ 30 ಮಂದಿ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದ್ದರು. ಉಳಿದ ಜನರು ಒಮ್ಮೆ ನಾಡಿಗೆ ಬೆಳಕು ಕೊಡಲು ನಮ್ಮನ್ನು ಎತ್ತಂಗಡಿ ಮಾಡಿ ಈಗ ಕೃಷಿ ಭೂಮಿ ,ಮನೆ ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ್ ನೇತೃತ್ವದಲ್ಲಿ ಈ ಸಂಬಂಧ ಸಭೆಗಳೂ ನಡೆದಿದ್ದವು.
ಶಾಸಕರ ಪ್ರಯತ್ನ:
ಹಾಲಿ ಬಿಜೆಪಿ ಶಾಸಕ ಅಶೋಕ್ ನಾಯ್ಕ ಅವರು, ಶೆಟ್ಟಿಹಳ್ಳಿಗೆ ವಿದ್ಯುತ್ ಕೊಡುವುದರಿಂದ ಲಾಭ-ನಷ್ಟದ ಪ್ರಶ್ನೆ ಬರುವುದಿಲ್ಲ. ಶರಾವತಿ ಮುಳುಗಡೆ ಸಂತ್ರಸ್ಥರೇ ಇರುವ ಈ ಗ್ರಾಮದ ಜನರ ತ್ಯಾಗಕ್ಕೆ ಬೆಲೆಕಟ್ಟಲಾಗದು. ಈ ಕಾರಣದಿಂದ ಭೂಗತ ಕೇಬಲ್ ಮೂಲಕ ವಿದ್ಯುತ್ ನೀಡಬೇಕೆಂದು ಸರಕಾರದ ಮಟ್ಟದಲ್ಲಿ ಮಾಡಿದ ಪ್ರಯತ್ನ ಫಲಿಸಿದೆ. ಇಂಧನ ಸಚಿವ ಸುನೀಲ್ ಕುಮಾರ್ ಕೂಡಾ ಈ ಜನರಿಗಾದ ಅನ್ಯಾಯವನ್ನು ಪರಿಗಣಿಸಿ ಯೋಜನೆಗೆ ಅನುಮೋದನೆ ನೀಡಿದ್ದಾರೆ.
ಅರಣ್ಯ ಮತ್ತು ಇಂಧನ ಇಲಾಖೆಯ ಉನ್ನತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಆರು ದಶಕಗಳ ಕಾಲದ ಶೆಟ್ಟಿಹಳ್ಳಿ ಜನರ ಕತ್ತಲ ಬದುಕಿಗೆ ಬೆಳಕು ನೀಡುವ ಯೋಜನೆ ಹಿಂದಿನಂತೆ ಅಡಿಗಲ್ಲಿಗೇ ನಿಲ್ಲದೆ, ಗ್ರಾಮವನ್ನು ಬೆಳಗಲಿ ಎಂಬದು ಅಲ್ಲಿನ ನಿವಾಸಿಗಳ ಆಶಯವಾಗಿದೆ.
ಒಮ್ಮೆ ಸಂತ್ರಸ್ತರಾಗಿ ಸಂಕಷ್ಟ ಅನುಭವಿಸಿರುವ ನಮ್ಮನ್ನು ಊರು ಬಿಡಿಸುವ ಬದಲು ಮೂಲ ಸೌಕರ್ಯ ನೀಡುವುದು ಸರಕಾರದ ಕರ್ತವ್ಯ. ಈಗ ಭೂಗತ ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶ ಒಳ್ಳೆಯದು ಮತ್ತು ಸ್ವಾಗತಾರ್ಹವಾದುದು. ಚುನಾವಣೆ ಸಂದರ್ಭ ಆಗಿರುವುದರಿಂದ ಇದರ ಹಿಂದೆ ರಾಜಕೀಯ ಉದ್ದೇಶ ಇರಬಾರದು. ಊರಿಗೆ ವಿದ್ಯುತ್ ಬರುತ್ತದೆ ಎಂದರೆ ಸಂತೋಷವೇ
ಎನ್.ಆರ್.ಸುಧಾಕರ್, ಯುವ ಮುಖಂಡರು, ಶೆಟ್ಟಿಹಳ್ಳಿಈ ಹಿಂದೆ ಮೂರು ಬಾರಿ ಅಡಿಗಲ್ಲು ಹಾಕಲಾಗಿತ್ತು. ಇದು ನಾಲ್ಕನೇ ಬಾರಿ, ಕೇಬಲ್ ಅಳವಡಿಸಿ ಊರಿಗೆ ವಿದ್ಯುತ್ ಸೌಕರ್ಯ ಕೊಟ್ಟಮೇಲೆಯೇ ನಂಬಬಹುದು. ನಾಡಿಗೆ ಬೆಳಕು ಕೊಟ್ಟ ಸಂತ್ರಸ್ತರಿಗೆ ಸ್ವಾಭಿಮಾನದ ಬದುಕು ಕೊಡುವುದು ಸರಕಾರದ ಕೆಲಸ. ಊರಿಗೆ ಕರೆಂಟ್ ಬರುವ ವಿಚಾರದಲ್ಲಿ ಪಕ್ಷಾತೀತ ಬೆಂಬಲ ಇದೆ
ಪುನೀತ್ ಹೆಬ್ಬೂರು, ಶೆಟ್ಟಿ ಹಳ್ಳಿ