ಶಿವಮೊಗ್ಗ: ಶಾಲಾ ಶೈಕ್ಷಣಿಕ ಪ್ರವಾಸದ ಬಸ್ ಪಲ್ಟಿಯಾಗಿ ಹತ್ತು ಮಕ್ಕಳಿಗೆ ಗಂಭೀರ ಗಾಯ ಹಾಗೂ ಇಬ್ಬರು ಮಕ್ಕಳಿಗೆ ಕೈ ಮುರಿತವಾಗಿರುವ ಘಟನೆ ಗುರುವಾರ ಸಾಗರ ತಾಲೂಕು ತುಮರಿ ಸಮೀಪದ ಬ್ಯಾಕೋಡು ಬಳಿ ನಡೆದಿದೆ.
ಬ್ಯಾಕೋಡು ಸಮೀಪದ ವಕ್ಕೋಡು ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದರಿಂದ ಈ ಅಪಘಾತ ಸಂಭವಿಸಿದೆ. ದೈವವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಮೈಸೂರು ಜಿಲ್ಲೆ ಹುಣಸೂರು ಧರ್ಮಾಪುರ ಸರಕಾರಿ ಪ್ರೌಢಶಾಲೆಯ ಮಕ್ಕಳು ಕೊಲ್ಲೂರಿನಿಂದ ಸಿಗಂದೂರಿಗೆ ಪ್ರಯಾಣಿಸುತ್ತಿದರು. ಬಸ್‌ನಲ್ಲಿ ೬೦ ಮಕ್ಕಳು ೭ ಜನ ಶಿಕ್ಷಕ ಶಿಕ್ಷಕಿಯರು ಇದ್ದರು.
ಬೆಳಗ್ಗೆ 9 ಗಂಟೆ ಹೊತ್ತಿಗೆ ಅಪಘಾತ ಸಂಭವಿಸುತ್ತಿದ್ದಂತೆ ತುಮರಿ ಸುತ್ತಮುತ್ತಲ ಗ್ರಾಮಸ್ಥರು ನೆರವಿಗೆ ಧಾವಿಸಿದರು. ಶಿಕ್ಷಕರು, ಆರೋಗ್ಯ ಇಲಾಖೆ ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿ ಸ್ಥಳೀಯರೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳಿಗೆ ತುಮರಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಸಾಗರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಶ್ರೀ ಕ್ಷೇತ್ರ ಸಿಗಂದೂರಿನ ಆಂಬ್ಯುಲೆನ್ಸ್ ಅನ್ನು ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲು ಒದಗಿಸಲಾಗಿತ್ತು. ದೇವಾಲಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ರವಿಕುಮಾರ್ ಸ್ಥಳದಲ್ಲಿ ಹಾಜರಿದ್ದು, ರಕ್ಷಣಾಕಾರ್ಯದಲ್ಲಿ ಭಾಗಿಯಾಗಿದ್ದರು. ಸ್ಥಳೀಯ ಪ್ರಮುಖರಾದ ಬರಗಲು ವಿಜಯಕುಮಾರ್, ಹಾಸ್ಟೆಲ್ ಮಂಜು, ಬಾಳಗುಡ್ಡಿ ಡಾಕಪ್ಪ, ಕಪ್ಪದೂರು ದೇವರಾಜ್, ಸಾಮಾಜಿಕ ಕಾರ್ಯಕರ್ತೆ ಸಂಧ್ಯಾಸಿಗಂದೂರು ಮತ್ತಿತರರು ರಕ್ಷಣಾಕಾರ್ಯದಲ್ಲಿ ಭಾಗಿಯಾಗಿದ್ದರು. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.