Malenadu Mitra
ರಾಜ್ಯ ಶಿವಮೊಗ್ಗ

ಮಕ್ಕಳಿಗೆ ಉತ್ತಮ ಸಂಸ್ಕಾರ ಮನೆಯಿಂದಲೇ ಶುರುವಾಗಬೇಕು:ಡಿಎಸ್.ಅರುಣ್


ಶಿವಮೊಗ್ಗ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್‌ನ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

ಶಿವಮೊಗ್ಗ:   ಮಕ್ಕಳಿಗೆ ಉತ್ತಮ ಸಂಸ್ಕಾರ  ಕೊಡುವ ಕೆಲಸ ಮನೆಯಲ್ಲಾಗಬೇಕು. ಇದರ ಜವಾಬ್ದಾರಿಯನ್ನು ಪಾಲಕರೇ ಹೊರಬೇಕು. ಮಕ್ಕಳತ್ತ ನಿರ್ಲಕ್ಷ್ಯ ವಹಿಸದೆ ಗಮನಹರಿಸಿ ಉತ್ತಮ ವ್ಯಕ್ತಿಗಳನ್ನಾಗಿ ಬೆಳೆಸುವ ಗುರುತರ ಜವಾಬ್ದಾರಿ ಇದೆ ಎಂದು ವಿಧಾನಪರಿಷತ್ ಸದಸ್ಯ ಡಿ. ಎಸ್. ಅರುಣ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಸಂಜೆ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ, ಬಹುಮಾನ ವಿತರಣೆ ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ಮಕ್ಕಳು ಸದಾ ಕ್ರಿಯಾಶೀಲರಾಗಿರಬೇಕು. ಅವರನ್ನು ಹೇಗೆ ಬೆಳೆಸಬೇಕೆನ್ನುವ ಅವಲೋಕನ ನಡೆಯಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಕೊರೊನಾದಿಂದ ಮಕ್ಕಳ ಕೈಗೆ ಬಂದ ಮೊಬೈಲ್ ಅವರನ್ನು ಇನ್ನಷ್ಟು ಅದಕ್ಕೆ ಆಪ್ತರನ್ನಾಗಿ ಮಾಡಿದೆ. ಇದರಿಂದ ಅವರನ್ನು ಹೊರತರಬೇಕು. ಮೊಬೈಲ್ ಚಟದಿಂದ ಹೊರಬಂದರೆ ಮಾತ್ರ ಅವರ ಕ್ರಿಯಾಶೀಲತೆ ಹೆಚ್ಚಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಮೊಬೈಲ್ ಬಿಡಲು ಸಿದ್ಧರಿಲ್ಲ. ಆದರೆ  ಬಿಡುವಂತೆ ಪಾಲಕರು ಮಾಡುವುದು ಈಗ ಅನಿವಾರ್‍ಯವಾಗಿದೆ ಎಂದು ಹೇಳಿದರು.

 ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ  ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ,  ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡಬಹುದು ಎನ್ನುವುದನ್ನು ಶಿವಮೊಗ್ಗ ಪತ್ರಕರ್ತರು ತೋರಿಸಿಕೊಟ್ಟಿದ್ದಾರೆ. ಕೇವಲ ಸುದ್ದಿ ಬರೆಯುವುದಕ್ಕಷ್ಟೇ ಸೀಮಿತರಾಗದೆ ಸಮಾಜದ ಇತರೆ ಕೆಲಸಕ್ಕೂ ಮುಂದಾಗಬೇಕು. ಸ್ವಾಭಿಮಾನದಿಂದ ಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗಬೇಕಿದೆ. ಬಾಹ್ಯ ಆಕರ್ಷಣೆಗಳಿಗೆ ಸಿಲುಕದೆ ಬದ್ಧತೆ ಮತ್ತು ಏಕಮನಸ್ಸಿನಿಂದ ವಿದ್ಯಾಭ್ಯಾಸ ಮುಂದುವರಿಸಬೇಕು. ಯುವಶಕ್ತಿ ಸರಿದಾರಿಯಲ್ಲಿ ಸಾಗುವಂತಾಗಬೇಕೆಂದರು.

ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕ  ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿರುವುದು ಶ್ಲಾಘನೀಯ. ಇದೊಂದು ವಿಭಿನ್ನ ಕೆಲಸ. ತಮ್ಮ ದಿನನಿತ್ಯದ ಕೆಲಸಗಳಿಂದ ಹೊರಬಂದು ಇಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪತ್ರಕರ್ತರು ಮಾದರಿಯಾಗಿದ್ದಾರೆ ಎಂದರು.
 ಕ್ರಾಂತಿದೀಪ ಪ್ರಾದೇಶಿಕ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ ಅವರು ರಾಜ್ಯ ನಿವೃತ್ತ ಪತ್ರಕರ್ತರ ಮಾಸಾಶನ ಸಮಿತಿ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರನ್ನು ಈ ಸಂದರ್ಭದಲ್ಲಿ ಸಂಘದಿಂದ ಗೌರವಿಸಲಾಯಿತು. ಸನ್ಮಾನಕ್ಕುತ್ತರವಾಗಿ ಮಾತನಾಡಿದ ಅವರು, ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ವೈಶಿಷ್ಟ್ಯಪೂರ್ಣ ಕೆಲಸಗಳನ್ನು ಮಾಡುತ್ತಿದೆ. ಸಮಾಜದಲ್ಲಿ ಬೇರುಬಿಡುತ್ತಿರುವ ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆ ಹೊರತರುವ ಕೆಲಸ ಮಾಡಿದೆ. ವಿಶಿಷ್ಟ ಕಾರ್‍ಯಕ್ರಮದ ಮೂಲಕ ಸಂಘ ಮಹತ್ವದ ಹೆಜ್ಜೆ ಇಡುತ್ತಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಪ್ರಾಸ್ತಾವಿಕ ಮಾತನಾಡಿ, ಪತ್ರಕರ್ತರ ಸಂಘಟನೆ ಹಮ್ಮಿಕೊಂಡಿರುವ ಜನಮುಖು ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಸಂಘದ ಕಾರ್‍ಯದರ್ಶಿ ಸಂತೋಷ್ ಕಾಚಿನಕಟ್ಟೆ ಸ್ವಾಗತಿಸಿದರು. ಸಂಘದ ಗೌರವ ಅಧ್ಯಕ್ಷ ಎಸ್.ಚಂದ್ರಕಾಂತ್, ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಉಪಸ್ಥಿತರಿದ್ದರು. ಲಿಯಾಕತ್ ವಂದಿಸಿದರೆ, ಹೊನ್ನಾಳಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡಬಹುದು ಎನ್ನುವುದನ್ನು ಶಿವಮೊಗ್ಗ ಪತ್ರಕರ್ತರು ತೋರಿಸಿಕೊಟ್ಟಿದ್ದಾರೆ. ಕೇವಲ ಸುದ್ದಿ ಬರೆಯುವುದಕ್ಕಷ್ಟೇ ಸೀಮಿತರಾಗದೆ ಸಮಾಜದ ಇತರೆ ಕೆಲಸಕ್ಕೂ ಮುಂದಾಗಬೇಕು

  ಸಿ. ಎಸ್. ಷಡಕ್ಷರಿ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ

Ad Widget

Related posts

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳನ್ನು ತಿಳಿಸಬೇಕು
ಪುನಶ್ಚೇತನ ಕಾರ್ಯಾಗಾರದಲ್ಲಿ ಉಪನಿರ್ದೇಶಕ ಕೃಷ್ಣಪ್ಪ ಸಲಹೆ

Malenadu Mirror Desk

ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

Malenadu Mirror Desk

ಮಾರಿಜಾತ್ರೆಯ ಸಡಗರದಲ್ಲಿ ಮಲೆನಾಡಿನ ಹೆಬ್ಬಾಗಿಲು ಮಾರಿಕಾಂಬೆ ಆರಾಧನೆಗೆ ಸಿಂಗಾರಗೊಂಡ ಸಿಹಿಮೊಗೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.