Malenadu Mitra
ರಾಜ್ಯ ಶಿವಮೊಗ್ಗ ಸಾಗರ ಹೊಸನಗರ

ನಾವು ಮುಗ್ಧರು, ನಮಗೆ ನ್ಯಾಯ ಕೊಡು ಭಗವಂತ ! ಧರ್ಮಸ್ಥಳ ಮಂಜುನಾಥ ಸ್ವಾಮಿ ಮೊರೆಹೋದ ಶರಾವತಿ ಸಂತ್ರಸ್ತರು!

ಆಡಳಿತ ಪಕ್ಷದ ಶಾಸಕರ ಸಾರಥ್ಯ , ಹಂಗಾದ್ರೆ ಬಿಜೆಪಿ ಸರಕಾರ ಸಂತ್ರಸ್ತರಿಗೆ ಕೈ ಎತ್ತಿತಾ..?

ಶಿವಮೊಗ್ಗ: ಆರು ದಶಕಗಳ ಸಮಸ್ಯೆಯನ್ನು ಹದಿನೈದು ದಿನದಲ್ಲಿ ಬಗೆಹರಿಸುವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನವೆಂಬರ್ ೨೨ ರಂದು ಶಿವಮೊಗ್ಗ ಈಡಿಗ ಭವನದಲ್ಲಿ ಹೇಳಿಕೆ ನೀಡಿದ್ದರು. ಇತ್ತಿಚೆಗೆ ತೀರ್ಥಹಳ್ಳಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತ್ರಸ್ತರ ಸಮಸ್ಯೆ ಇತ್ಯರ್ಥ ನಮ್ಮ ಧರ್ಮ ಎಂದಿದ್ದರು. ಸಾಗರ ಶಾಸಕ ಹರತಾಳು ಹಾಲಪ್ಪ ನೇತೃತ್ವದ ಬಿಜೆಪಿ ಬೆಂಬಲಿತ ಶರಾವತಿ ಸಂತ್ರಸ್ತರು ಭಾನುವಾರ ಧರ್ಮಸ್ಥಳಕ್ಕೆ ಹೋಗಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿ ಮಾಡಿದ್ದಾರೆ. ಮಾತ್ರವಲ್ಲದೆ ದೇವರ ಸನ್ನಿಧಾನದಲ್ಲಿ ಮನವಿ ಪತ್ರ ಇಟ್ಟು ದಿಕ್ಕುಕಾಣದಾಗಿದೆ ಭಗವಂತ ನೀನೇ ಕಾಪಾಡು ಎಂದು ಪೂಜೆ ಸಲ್ಲಿಸಿ ಬಂದಿದ್ದಾರೆ…..

ಶಿವಮೊಗ್ಗ ಜಿಲ್ಲೆಯ ಸುಮಾರು 25ಸಾವಿರ ಕುಟುಂಬಗಳ ಭೂಮಿಯ ಹಕ್ಕು ಕಸಿದುಕೊಂಡಿರುವ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ದೊಡ್ಡ ಹೋರಾಟ ಮಾಡುತ್ತಿದೆ. ಸಮಸ್ಯೆ ಪರಿಹರಿಸುತ್ತೇವೆ ಎಂದು ಬಿಜೆಪಿ ಸರಕಾರ ಹೇಳುತ್ತಿದೆ ಆದರೂ ಅವರದೇ ಪಕ್ಷದ ಶಾಸಕರು ನೇತೃತ್ವದಲ್ಲಿ ದೇವರ ಸನ್ನಿಧಿಗೆ ಹೋಗಿರುವುದು ಸಮಸ್ಯೆ ಮತ್ತಷ್ಟು ಕಗ್ಗಂಟಾಗಿರುವುದರ ದ್ಯೋತಕ ಎನ್ನಲಾಗುತ್ತಿದೆ…

ಬಿಜೆಪಿ ಸರಕಾರ 1959 ರಲ್ಲಿ ಮಂಜೂರಾಗಿ ಈಗ ರದ್ದಾಗಿರುವ 9300ಎಕರೆ ಭೂಮಿಯನ್ನು ಮಾತ್ರ ಸರ್ವೆ ಮಾಡಿಸುತ್ತಿದ್ದು, ಕೇಂದ್ರದಿಂದ ಅದಕ್ಕೆ ಅನುಮತಿ ಪಡೆಯುವ ಪ್ರಯತ್ನ ಮಾಡಿದೆ. ಈ ಭೂಮಿ ಅರವತ್ತು ವರ್ಷಗಳ ಹಿಂದೆ ಬಿಡುಗಡೆ ಮಾಡಿರುವುದು ಅದಕ್ಕೆ ಅನುಮತಿ ಸಿಕ್ಕೇ ಸಿಗುತ್ತದೆ. ಆದರೆ ಸಂತ್ರಸ್ತರು ಸುಮಾರು 24 ಸಾವಿರ ಎಕರೆ ಭೂಮಿಯನ್ನು ಸಾಗುವಳಿ ಮಾಡಿಕೊಂಡಿದ್ದಾರೆ. ಇದರ ಸರ್ವೆ ಮಾಡುತ್ತಿಲ್ಲ. ಈ ಎಲ್ಲಾ ಭೂಮಿಯನ್ನು ಸರ್ವೆ ಮಾಡಿಸಿ ಸರಕಾರಕ್ಕೆ ಕಳಿಸುವ ಇಚ್ಚಾಶಕ್ತಿಯನ್ನು ಶಿವಮೊಗ್ಗದ ಬಿಜೆಪಿ ನಾಯಕರುಗಳು ತೋರುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಈಶ್ವರಪ್ಪ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಯ ಬಗ್ಗೆ ಗಂಭೀರವಾಗಿಲ್ಲ. ಶರಾವತಿ ಸಂತ್ರಸ್ಥರಲ್ಲಿ ಶೇ.೯೫ ಭಾಗ ಈಡಿಗರಿರುವುದೂ ಇದಕ್ಕೆ ಕಾರಣ ಎಂಬ ಅನುಮಾನದಿಂದ ಬಿಜೆಪಿ ಬೆಂಬಲಿತ ಶರಾವತಿ ಸಂತ್ರಸ್ಥರು ದೇವರ ಮೊರೆಹೋಗಿದ್ದಾರೆ ಎನ್ನಲಾಗಿದೆ.
ಧರ್ಮಾಧಿಕಾರಿಗಳ ಭೇಟಿ:
ರಾಜ್ಯಸಭೆ ಸದಸ್ಯರೂ ಆದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಬಳಿ ಮನವಿ ಪತ್ರ ಸಲ್ಲಿಸಿ, ನಮಗೆ ನ್ಯಾಯ ಕೊಡಿಸಿ, ನಮ್ಮ ಪರವಾಗಿ ಭಗವಂತನಲ್ಲಿ ಪ್ರಾರ್ಥಿಸಿ ಎಂದು ಬಿಜೆಪಿಯಲ್ಲಿರುವ ಶರಾವತಿ ಸಂತ್ರಸ್ಥರು ಮನವಿ ಮಾಡಿದ್ದಾರೆ. ಅವರು, ಹೆಗ್ಗಡೆಯವರಿಗೆ ಸಲ್ಲಿಸಿರುವ ಮನವಿ ಪತ್ರ ಇಲ್ಲಿದೆ……….

ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು

ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

ಮಾನ್ಯರೆ,

ವಿಷಯ: ಶಿವಮೊಗ್ಗ ಜಿಲ್ಲೆಯ ಸಮಸ್ತ ಶರಾವತಿ ಮುಳುಗಡೆ ಸಂತ್ರಸ್ತರು ಮಾಡಿಕೊಂಡ ಭಿನ್ನಹ

ಪೂಜ್ಯರೆ,

      ನಾವೊಂದು ಭಿನ್ನ ಸಮಸ್ಯೆಯನ್ನು ತಮ್ಮ ಸನ್ನಿಧಾನದಲ್ಲಿ ಅರಿಕೆ ಮಾಡಿಕೊಂಡು ಶ್ರೀ ಮಂಜುನಾಥ ಸ್ವಾಮಿಯೇ ನಮಗೆ ನ್ಯಾಯ ಕರುಣಿಸಬೇಕೆಂದು ಬೇಡಿಕೊಳ್ಳಲು ಭಗವಂತನ ಪುಣ್ಯಕ್ಷೇತ್ರಕ್ಕೆ ಬಂದಿದ್ದೇವೆ.

ನಾಡಿಗೆ ಬೆಳಕು ಕೊಡುವ ಉದ್ದೇಶದಿಂದ 1959 ರಲ್ಲಿ  ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ಶರಾವತಿ ನದಿಗೆ ಅಣೆಕಟ್ಟಯನ್ನು ನಿರ್ಮಿಸಲಾಯಿತು. ಜಲವಿದ್ಯುತ್ ಉತ್ಪಾದನೆಯ ಉದ್ದೇಶದಿಂದ ನಿರ್ಮಾಣಗೊಂಡ ಈ ಮಹತ್ತರ ಯೋಜನೆಯಿಂದ ರಾಜ್ಯ ಹಾಗೂ ದೇಶಕ್ಕೆ ಬೆಳಕು ನೀಡಲಾಯಿತು. ಈ ಯೋಜನೆಯು ನಾಡಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ ಇದು ತಮಗೂ ತಿಳಿದ ವಿಚಾರ.

ಈ ಬೃಹತ್ ಅಣೆಕಟ್ಟು ನಿರ್ಮಾಣ ಮಾಡಿದ ಸಂದರ್ಭ ಸಾಗರ ತಾಲೂಕಿನ ಕರೂರು, ಬಾರಂಗಿ ಹೋಬಳಿಯಲ್ಲಿ ವಾಸವಾಗಿದ್ದ ಸುಮಾರು ಆರು ಸಾವಿರ ಕುಟುಂಬಗಳಿಗೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಅಂದರೆ ಅಂದು ಸರಕಾರವೇ ನಾಡಿಗೆ ಬೆಳಕು ಕೊಡುವ ಉದ್ದೇಶದಿಂದ ನಮ್ಮ ಪೂರ್ವಿಕರನ್ನು ಲಾರಿಯಲ್ಲಿ ಜನ ಮತ್ತು ಜಾನುವಾರು ಸಮೇತ ತುಂಬಿಕೊಂಡು ಕಾಡಿನಲ್ಲಿ ಬಿಡಲಾಯಿತು.

ವಿದ್ಯಾಭ್ಯಾಸ ಇಲ್ಲದ ನಮ್ಮ ಪೂರ್ವಿಕರು ಸರಕಾರ ಕೊಟ್ಟ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 1980 ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಮುನ್ನ ಆಗಿರುವ ಅಂದರೆ 1960 ದಶಕದಲ್ಲಿ ಆದ ಯೋಜನೆಯಲ್ಲಿ ನಿರಾಶ್ರಿತರಾದ ನಮ್ಮ ಕುಟುಂಬಗಳು ಬೆಳೆದಂತೆ ಸಮೀಪದಲ್ಲಿಯೇ ಇದ್ದ ಕಂದಾಯ ಭೂಮಿಯಲ್ಲಿ ಹೊಟ್ಟೆಪಾಡಿಗೆ ಹೆಚ್ಚುವರಿ ಸಾಗುವಳಿ ಮಾಡಿಕೊಂಡು ಜೀವನ ನಡೆಸಿಕೊಂಡು ಬಂದರು. ಎರಡು ತಲೆಮಾರಿನ ಹಿಂದೆ ಆದ ಪುನರ್ವಸತಿ ಯೋಜನೆ ಸಮರ್ಪಕ ಜಾರಿಯಾಗದೆ ನಾವಿಂದು ಸಂಕಷ್ಟದಲ್ಲಿದ್ದೇವೆ.

ಬದಲಾದ ಕಾನೂನು ಮತ್ತು ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ಅಂದು ನಮ್ಮ ಪೂರ್ವಿಕರಿಗೆ ಬಿಡುಗಡೆಯಾಗಿದ್ದ ಭೂಮಿ ಅಂದರೆ, ನಾವಿಂದು ನೆಲೆ ನಿಂತ ಜಾಗಗಳಿಗೆ ಆಗಿದ್ದ ಸುಮಾರು 56 ಅಧಿಸೂಚನೆಗಳನ್ನು ಸರಕಾರ ರದ್ದು ಮಾಡಿರುವುದರಿಂದ ನಾವಿರುವ ಭೂಮಿ ಈಗ ನಮ್ಮದಲ್ಲವಾಗಿದೆ. ಶರಾವತಿ ಸಂತ್ರಸ್ತರಿಗೆ ಸರಕಾರವೇ ಕೊಟ್ಟ ಭೂಮಿಯನ್ನು ಮತ್ತೆ ಅರಣ್ಯ ಇಲಾಖೆಗೆ ಸೇರಿಸಲಾಗಿದೆ. ಈ ಸಂಗತಿ ಅನುಭವಕ್ಕೆ ಬಂದ ಮೇಲೆ 2015-16 ರಲ್ಲಿ ಅಂದಿನ ಸರಕಾರ ಡಿನೋಟಿಫಿಕೇಷನ್ ಮಾಡಲಾಗಿತ್ತು. ಆದರೆ ಈಗ ಆ ಆದೇಶಗಳನ್ನು ಈಗ ರದ್ದು ಮಾಡಲಾಗಿದೆ. ಇದಕ್ಕೆ ಗಿರೀಶ್ ಆಚಾರ್ಯ ಎಂಬ ಪರಿಸರ ಕಾರ್ಯಕರ್ತರು ನ್ಯಾಯಾಲಯಕ್ಕೆ ಹೋಗಿರುವುದೇ ಕಾರಣವಾಗಿದೆ.  

ಆರು ದಶಕಗಳಿಂದ ನಮ್ಮ ಸಮಸ್ಯೆ ಹೀಗೆಯೇ ಇದೆ. ಈಗಿನ ಸರಕಾರ 23-09-2021 ರಂದು ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶರಾವತಿ ಸಂತ್ರಸ್ತರ ಭೂಮಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಶೇಷ ಜಿಲ್ಲಾಧಿಕಾರಿ ಮತ್ತು ಹತ್ತಕ್ಕೂ ಹೆಚ್ಚು ಸಿಬ್ಬಂದಿ ನೇಮಿಸಲು ತೀರ್ಮಾನ ಮಾಡಲಾಗಿತ್ತು. ಆದರೆ ಅದು ಅನುಷ್ಠಾನಗೊಳ್ಳಲಿಲ್ಲ. ನ್ಯಾಯಾಲಯದ ಆದೇಶ ಮತ್ತು ಅದನ್ನು ಅನುಸರಿಸಿದ ಸರಕಾರದ ಆದೇಶಗಳಿಂದ ಶಿವಮೊಗ್ಗ ಜಿಲ್ಲೆಯ ಸುಮಾರು ೨೫ ಸಾವಿರ ಬಡ ಕೃಷಿ ಕುಟುಂಬಗಳು ಮುಂದಿನ ದಾರಿ ಕಾಣದೆ ಕಂಗೆಟ್ಟಿದ್ದೇವೆ.

ಎರಡು ತಲೆಮಾರಿನ ಹಿಂದೆ ಆಗಿದ್ದ ಯೋಜನೆಯಲ್ಲಿ ಕೇವಲ 9200 ಎಕರೆ ಭೂಮಿಯನ್ನು ಬಿಡುಗಡೆ ಮಾಡಲಾಗಿತ್ತು. ಈಗ ವಿಭಕ್ತ ಕುಟುಂಬಗಳಾಗಿದ್ದು, ಎರಡು ತಲೆಮಾರಿನ ನಂತರ ವಾಣಿಜ್ಯ ಉದ್ದೇಶವಿಲ್ಲದೆ, ಜೀವನೋಪಾಯಕ್ಕೆ 1,2,3 ನಾಲ್ಕು ಹೆಚ್ಚೆಂದರೆ ಒಂದು ಕುಟುಂಬ 5 ಎಕರೆ ಜಮೀನು ಸಾಗುವಳಿ ಮಾಡಿಕೊಂಡಿರಬಹುದು. ಈಗ ಅಂದಾಜು ೨೫ ಸಾವಿರ ಕುಟುಂಬಗಳು ಪ್ರಭುತ್ವದ ತಪ್ಪು ನಡೆಗಳಿಂದಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ.

ಕಾಲಾಂತರಿಂದ ಈ ಎಲ್ಲಾ ಕುಟುಂಬಗಳು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಗೆ ನಡೆದುಕೊಳ್ಳುತ್ತ ಬಂದ ಮುಗ್ಧ ಜನರದ್ದಾಗಿವೆ. ನಮ್ಮ ಸಮಸ್ಯೆಗೆ ಯಾರು ಕಾರಣ, ಯಾವ ಕೈಗಳು ನಮ್ಮ ಸಮಸ್ಯೆಗೆ ಮೂಲವಾಗಿವೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ.ಜಗತ್ತಿಗೆ ಬೆಳಕು ಕೊಡಲು ಕಣ್ಣು ಕಳೆದುಕೊಂಡ ನಾವು ವಾಸಿಸುವ ಮನೆ ಮತ್ತು ಉಳುವ ಭೂಮಿಯನ್ನು ಹೇಗಿದೆಯೊ ಹಾಗೆ ಮಂಜೂರು ಮಾಡಿಕೊಡುವ ಇಚ್ಚಾಶಕ್ತಿಯನ್ನು ಸರಕಾರಗಳು ತೋರುತ್ತಿಲ್ಲ. ಇದಕ್ಕೆ ಯಾರು ಮತ್ತು ಯಾಕೆ ಅಡ್ಡಿಯಾಗಿದ್ದಾರೆ ಎಂಬುದು ಚಿದಂಬರ ರಹಸ್ಯವಾಗಿ ಉಳಿದಿದೆ.

ನಾವು ಮುಗ್ಧ ಜನ ನಮಗೆ ದೇವರ ಮೇಲೆ ನಂಬಿಕೆ ಇದೆ. ಶ್ರೀ ಮಂಜುನಾಥ ಸ್ವಾಮಿಯ ಒಕ್ಕಲುಗಳೇ ಎಂದು ನಮ್ಮನ್ನು ನಾವು ಭಾವಿಸಿಕೊಂಡಿದ್ದೇವೆ. ನಮಗೆ ಸರಕಾರ, ನ್ಯಾಯಾಲಯ ಎಲ್ಲಿಯೂ ಈವರೆಗೆ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ನಂಬಿದ ದೇವರ ಸನ್ನಿಧಾನಕ್ಕೆ ಬಂದು ನಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದೇವೆ. ಮಲೆನಾಡಿನ ಪ್ರತಿ ಮನೆಯಲ್ಲಿಯೂ ಮಂಜುನಾಥ ಸ್ವಾಮಿಯ ಮತ್ತು ಧರ್ಮಾಧಿಕಾರಿಗಳಾದ ನಿಮ್ಮ ಫೋಟೊಗಳಿವೆ. ನಿತ್ಯ ಪೂಜೆ ಮಾಡುವ ಭಗವಂತನಲ್ಲಿ ಮತ್ತು ಪೂಜ್ಯರಾದ ನಿಮ್ಮಲ್ಲಿ ಬಂದು ನೋವು ತೋಡಿಕೊಂಡರೆ ಜೀವ ಹಗುರವಾಗುತ್ತದೆ ಎಂದು ಬಂದಿದ್ದೇವೆ. ಸಮಸ್ತ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಸ್ವಾಮಿಯಲ್ಲಿ ನಮಗೆ ಬೆಳಕು ಕೊಡು, ನಾವು ಉಳುವ ಭೂಮಿಗೆ ಒಡೆತನ ಕೊಡು ಎಂದು ಭಕ್ತಪೂರ್ವಕವಾಗಿ ಪ್ರಾರ್ಥಿಸುತ್ತಿದ್ದೇವೆ.

ಶ್ರೀ ಸ್ವಾಮಿಯ ಭಕ್ತರು…..

ReplyForward

Ad Widget

Related posts

ಕಾಶೀನಾಥ್ ಮನೆಗೆ ಚಿನ್ನದ ಹುಡುಗ, ಕನ್ನಡಿಗ ಕೋಚ್ ಅಲ್ಲ ಎಂದವರಿಗೆ ನೀರಜ್ ಚೋಪ್ರಾ ಉತ್ತರ

Malenadu Mirror Desk

ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

Malenadu Mirror Desk

ಲಾಕ್‍ಡೌನ್ ಕಠಿಣ,ಎಣ್ಣೆಗೆ ಅವಕಾಶ !

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.