ಶಿವಮೊಗ್ಗ: ಶಾಸಕ ಕೆ.ಎಸ್ ಈಶ್ವರಪ್ಪನವರು ಸಚಿವ ಸ್ಥಾನ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಅಧಿವೇಶನಕ್ಕೆ ಪಾಲ್ಗೊಳ್ಳದೇ ಗೈರು ಹಾಜರಾಗುವ ಮೂಲಕ ಶಿವಮೊಗ್ಗ ಜನತೆಗೆ ದ್ರೋಹ ಎಸಗುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕಾಗಿ ಕಾಲು ನೋವಿನ ಸಮಸ್ಯೆ ಹೇಳಿಕೊಂಡು ಕೆ ಎಸ್ ಈಶ್ವರಪ್ಪನವರು ಕಳೆದ ಬಾರಿ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ. ಈ ಬಾರಿಯೂ ಸಚಿವ ಸ್ಥಾನ ನೀಡಿಲ್ಲ ಎಂದು ಕ್ಷುಲ್ಲಕ ಕಾರಣಕ್ಕಾಗಿ ಅಧಿವೇಶನಕ್ಕೆ ಪಾಲ್ಗೊಳ್ಳದೇ ಶಿವಮೊಗ್ಗದ ಜನತೆಗೆ ದ್ರೋಹ ಎಸಗಿದ್ದಾರೆ ಎಂದರು.
ಅಧಿವೇಶನಕ್ಕೆ ಗೈರಾಗುವ ಮೂಲಕ ಈಶ್ವರಪ್ಪ ಪಕ್ಷಕ್ಕೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎನಿಸುತ್ತಿದೆ. ಯಡಿಯೂರಪ್ಪ, ಅನಂತ್ ಕುಮಾರ್ ಮತ್ತು ನಾನು ಪಕ್ಷ ಕಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಅಧಿವೇಶನಕ್ಕೆ ಹಾಜರಾಗದೆ ಇರುವುದು ಶಿವಮೊಗ್ಗ ಜನತೆಗೆ ಮಾಡಿದ ದ್ರೋಹ. ಶಿವಮೊಗ್ಗದಲ್ಲಿ ಕ್ರಿಯಾಶೀಲರಲ್ಲದ ಶಾಸಕರಂತೆ ಈಶ್ವರಪ್ಪ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮಳೆಯಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ಆಶ್ರಯ ಮನೆಗಳ ಕೆಲಸ ನಡೆಯುತ್ತಿಲ್ಲ. ಈಶ್ವರಪ್ಪ ಬೆಳಗ್ಗೆ ಒಂದು ಮಧ್ಯಾಹ್ನ ಒಂದು ರಾತ್ರಿ ಒಂದು ಮಾತನಾಡುತ್ತಿದ್ದಾರೆ ಎಂದ ಅವರು, ಈಶ್ವರಪ್ಪ ೪೦ ಪರ್ಸೆಂಟ್ ಗಿರಾಕಿ. ಇದರಿಂದ ತೊಂದರೆ ಆಗಬಹುದು ಎಂದು ಪಕ್ಷ ಸಚಿವ ಸ್ಥಾನ ನೀಡಿಲ್ಲ ಎನಿಸುತ್ತದೆ. ಪಾಸೋ, ಫೇಲೋ, ಸ್ಕೂಲ್‌ಗಾದರೂ ಹೋಗಿ ಬನ್ನಿ ಎಂದು ಶಿವಮೊಗ್ಗ ಜನತೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ವಿವಿಧ ಮೋರ್ಚಾಗಳಂತೆ ಐಟಿ, ಇಡಿ ಮೋರ್ಚಾ ಶುರುವಾಗಿದೆ ಎಂದು ಲೇವಡಿ ಮಾಡಿದ ಅವರು,ಈಶ್ವರಪ್ಪ ಮನೆ ಮೇಲೆ ಲೋಕಾಯುಕ್ತ ರೇಡ್ ಆದಾಗ ಈ ವಿಚಾರದಲ್ಲಿ ನೋಟು ಎಣಿಸುವ ಮಿಷನ್ ಸಿಕ್ಕಿತ್ತು. ಇಡಿ ಮತ್ತು ಐಟಿ ಅವರಿಗೆ ಈಶ್ವರಪ್ಪ ಕಣ್ಣಿಗೆ ಬಿದ್ದಿಲ್ವಾ ಎಂದು ಪ್ರಶ್ನಿಸಿದರು.
ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನವರಿಗೆ ಕೋರ್ಟ್ ಕ್ಲೀನ್ ಚಿಟ್ ನೀಡಬೇಕು. ಅಲ್ಲಿಯವರೆಗೆ ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಹೇಳಬೇಡಿ. ಈಶ್ವರಪ್ಪನವರಿಗೆ ಸಿಕ್ಕಾಪಟ್ಟೆ ಕೆಲಸ ಉಳಿದಿದೆ. ಅದಕ್ಕೆ ಮತ್ತೆ ಮಂತ್ರಿಯಾಗಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಸಿಂಗ್,ಪಾಲಿಕೆ ಸದಸ್ಯ ಆರ್.ಸಿ ನಾಯ್ಕ್,ಪ್ರಮುಖರಾದ ಬೊಮ್ಮನಕಟ್ಟೆ ಮಂಜುನಾಥ್,ಬಾಬಣ್ಣ, ಎಸ್.ಟಿ ಹಾಲಪ್ಪಪ್ಪ ಮತ್ತಿತರರಿದ್ದರು.