ಶಿವಮೊಗ್ಗ,ಡಿ.21: ಹಿರಿಯ ಗಮಕ ಕಲಾವಿದ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಆರ್. ಕೇಶವಮೂರ್ತಿ(88) ಅವರು ಬುಧವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಆರೋಗ್ಯವಂತರಾಗಿ ಚಟುವಟಿಕೆಯಿಂದಲೇ ಇದ್ದ ಅವರು ಮಧ್ಯಾಹ್ನ ಊಟ ಮುಗಿಸಿ ವಿಶ್ರಾಂತಿಗೆ ಹೋಗುವಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಹಠಾತ್ ಹೃದಯಘಾತವಾಗಿದ್ದ ಕಾರಣ ಕುಸಿದು ಬಿದ್ದಿದ್ದ ಅವರು ಮತ್ತೆ ಮೇಲೇಳಲಿಲ್ಲ. ಮೃತರು ಪತ್ನಿ ರಾಜೇಶ್ವರಿ ಮತ್ತು ಮಗಳ ಉಷಾ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಗಮಕ ಕಲೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಮತ್ತು ಆ ಕಲೆಯನ್ನು ಮತ್ತೂರು ಕೃಷ್ಣಮೂರ್ತಿ ಅವರೊಂದಿಗೆ ಸೇರಿ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಕೇಶವಮೂರ್ತಿ ಅವರದಾಗಿತ್ತು. ಹೊಸಹಳ್ಳಿಯಲ್ಲಿಯೇ ಹುಟ್ಟಿ ಬೆಳೆದಿದ್ದ ಅವರು ಗಮಕ ಕಲೆಯ ಮೂಲಕ ದೇಶಮಟ್ಟದಲ್ಲಿ ಹೆಸರು ಮಾಡಿದ್ದರು. ಇತ್ತೀಚೆಗಷ್ಟೆ ಹೊಸಹಳ್ಳಿ ಗ್ರಾಮಸ್ಥರು ಅವರಿಗೆ ನಾಗರೀಕ ಸನ್ಮಾನ ಮಾಡಿ ಗೌರವಿಸಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.