ಶಿವಮೊಗ್ಗ : ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ನೀಡುವ ವರ್ಷದ ಸೈಬರ್ ಕಾಪ್ ಪ್ರಶಸ್ತಿಯನ್ನು ಶಿವಮೊಗ್ಗ ಸಿ.ಇ.ಎನ್ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ಕೆ.ಟಿ.ಗುರುರಾಜ್ ಅವರಿಗೆ ಪ್ರಧಾನ ಮಾಡಲಾಯಿತು.
ಹರಿಯಾಣದ ಗುರುಗ್ರಾಮದಲ್ಲಿ ನಡೆದ ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸಮಾವೇಶದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿಗೆ ದೇಶಾದ್ಯಂತ ಸೈಬರ್ ಪೊಲೀಸರು ಭೇದಿಸಿದ ಪ್ರಕರಣಗಳ ಪರಿಶೀಲನೆ ನಡೆಸಲಾಗುತ್ತದೆ. ಅಂತಿಮ ಹಂತದಲ್ಲಿ ಮೂವರು ಪೊಲೀಸರ ಹೆಸರಿತ್ತು. ಶಿವಮೊಗ್ಗದ ಸಿಇಎನ್ ಕ್ರೈಮ್ ಠಾಣೆ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್, ಮಧ್ಯಪ್ರದೇಶದ ಭೂಪಾಲ್ ಸೈಬರ್ ಅಂಡ್ ಹೈಟೆಕ್ ಠಾಣೆ ಇನ್ಸ್ ಪೆಕ್ಟರ್ ನೀತು ಕುನ್ಸರಿಯಾ, ಮುಂಬೈ ವೆಸ್ಟ್ ರೀಜನ್ ಸೈಬರ್ ಠಾಣೆ ಇನ್ಸ್ ಪೆಕ್ಟರ್ ಸುವರ್ಣಾ ಶಿಂಧೆ ಅವರು ಅಂತಿಮ ಹಂತದ ಪ್ರಶಸ್ತಿ ರೇಸ್ ನಲ್ಲಿದ್ದರು. ಇವರು ಪತ್ತೆ ಹಚ್ಚಿದ ಪ್ರಕರಣಗಳ ಪರಿಶೀಲನೆ ನಡೆಸಿದ ಜ್ಯೂರಿ, ಕೆ.ಟಿ.ಗುರುರಾಜ್ ಅವರಿಗೆ ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿ ಘೋಷಿಸಿದೆ.
ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ವಿವಿಧ ಕ್ಷೇತ್ರದ ಪರಿಣಿತರಿದ್ದರು. ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸುಪ್ರೀಂ ಕೋರ್ಟ್ ನ್ಯಾಯವಾದಿ ವಾಕುಲ್ ಶರ್ಮಾ, ಘೆSಐPಐS ಟೆಲಿಕಾಂ ಸೆಕ್ಯೂರಿಟಿ ವಿಭಾಗದ ಡಿಪ್ಯೂಟಿ ಡೈರೆಕ್ಟರ್ ಜನರಲ್ ಎಸ್.ಕೆ.ಬಲ್ಲಾ, ಕೇಂದ್ರ ಗೃಹ ಸಚಿವಾಲಯ ಅಧೀನದ ಫಾರೆನ್ಸಿಕ್ ಸೈನ್ಸ್ ಸರ್ವಿಸ್ ಸಂಸ್ಥೆ ಮಾಜಿ ವಿಜ್ಞಾನಿ ಕೃಷ್ಣಶಾಸ್ತ್ರಿ ಪೆಂಡ್ಯಾಲ ಅವರು ಜ್ಯೂರಿ ಪ್ಯಾನಲ್ ನಲ್ಲಿದ್ದರು.
ಮಕ್ಕಳ ಅಶ್ಲೀಲ ಚಿತ್ರಗಳನ್ನು ಇಂಟರ್ ನೆಟ್ ಗೆ ಅಪ್ಲೋಡ್ ಮಾಡುತ್ತಿರುವ ಪ್ರಕರಣವನ್ನು ಶಿವಮೊಗ್ಗ ಸಿ.ಇ.ಎನ್ ಠಾಣೆ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಭೇದಿಸಿದ್ದರು. ಶಿವಮೊಗ್ಗದ ಶಿಕ್ಷಕನೊಬ್ಬ ಈ ಕೃತ್ಯ ಎಸಗಿದ್ದ. ಕೆ.ಟಿ.ಗುರುರಾಜ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ೨೦ ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಈ ಪ್ರಕರಣದ ಶೀಘ್ರ ತನಿಖೆ, ಆರೋಪಿಗೆ ಶಿಕ್ಷೆ ಕೊಡಿಸಿದ್ದು ಭಾರತದ ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಶಿವಮೊಗ್ಗ ಸಿ.ಇ.ಎನ್ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ಕೆ.ಟಿ.ಗುರುರಾಜ್ ಅವರು ಪ್ರಸ್ತುತ ಕಡೂರಿನ ಪೊಲೀಸ್ ಟ್ರೈನಿಂಗ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.