Malenadu Mitra
ರಾಜ್ಯ ಶಿವಮೊಗ್ಗ

ನಿಜನಾಯಕ ಬಂಗಾರಪ್ಪ, ಅವರ ಸ್ಥಾನ ತುಂಬುವ ವ್ಯಕ್ತಿ ದಶಕ ಕಳೆದರೂ ಸಿಕ್ಕಿಲ್ಲ

ಬಡವರ ಬಂಧು, ವರ್ಣರಂಜಿತ ರಾಜಕಾರಣಿ ನೇರ ನಡೆನುಡಿಯಿಂದಲೇ ಹೆಸರಾಗಿ ಜನಮಾನಸದಲ್ಲಿ ಸದಾ ಹಸಿರಾಗಿರುವ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ಅವರ ಹನ್ನೊಂದನೇ ಪುಣ್ಯಸ್ಮರಣೆ (ಡಿಸೆಂಬರ್ ೨೬) ಇಂದು. ಅವರು ಬೌತಿಕವಾಗಿ ನಮ್ಮನ್ನು ಅಗಲಿ ೧೧ ವರ್ಷಗಳಾದವು. ಆದರೆ ಕೆಲಸ, ಜನ ಪ್ರೀತಿ ,ಶೋಷಿತ ಸಮುದಾಯದ ಮೇಲೆ ಅವರಿಗಿದ್ದ ಪ್ರೀತಿಯಿಂದಾಗಿ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಬಂಗಾರಪ್ಪ ಅವರು ಒಬ್ಬ ವ್ಯಕ್ತಿಯಾಗಿರದೆ ಸಮಷ್ಟಿಯ ಶಕ್ತಿಯಾಗಿದ್ದರು. ಸರಿ ಸುಮಾರು ಮೂರು ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಚುಂಬಕ ಶಕ್ತಿಯಂತೆ ಇದ್ದ ಅವರು ತಮ್ಮ ಎದೆಗಾರಿಕೆಯಿಂದಾಗಿ ವಿರೋಧಿಗಳ ಎದೆಯಲ್ಲಿ ಸದಾ ನಡುಕು ಹುಟ್ಟಿಸಿದವರು.


ಬಂಗಾರಪ್ಪ ಇರುವ ತನಕ ಮಲೆನಾಡಿನ ರಾಜಕಾರಣ ಅವರ ಅಂಕೆಯಲ್ಲಿಯೇ ನಡೆದುಕೊಂಡು ಬಂದಿತ್ತು. ಅವರಿಲ್ಲದೆ ಒಂದು ದಶಕವೇ ಗತಿಸಿದರೂ, ಅವರಿಂದ ಉಂಟಾದ ರಾಜಕೀಯ ನಿರ್ವಾತವನ್ನು ತುಂಬುವ ಮತ್ತೊಬ್ಬ ವ್ಯಕ್ತಿ ಇಲ್ಲಿ ಹುಟ್ಟಿಬಂದಿಲ್ಲ. ಹಲವು ಬಿಕ್ಕಟ್ಟುಗಳಿಂದ ತತ್ತರಿಸಿರುವ ಮಲೆನಾಡು ಸವಾಲುಗಳಿಗೆ ಎದೆಯೊಡ್ಡುವ ಒಬ್ಬ ಸಮರ್ಥ ನಾಯಕನ ಕೊರತೆಯನ್ನು ಈಗಲೂ ಎದುರಿಸುತ್ತಿದೆ. ಮಲೆನಾಡು ಮಾತ್ರವಲ್ಲದೆ, ಗಡಿವಿವಾದದ ಈ ಹೊತ್ತಿನಲ್ಲಿ ಬಂಗಾರಪ್ಪ ಮತ್ತೆ ಮತ್ತೆ ನೆನಪಾಗುತ್ತಾರೆ. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮಿಳುನಾಡಿಗೆ ಕಾವೇರಿ ನದಿಯ ನೀರನ್ನು ಹರಿಸಲಾಗದು ಎಂಬ ಸುಗ್ರೀವಾಜ್ಞೆಯನ್ನು ತರುವ ಮೂಲಕ ನಾಡು ನುಡಿ ವಿಚಾರದಲ್ಲಿ ಯಾವತ್ತೂ ರಾಜೀಯಾಗುವ ಮನುಷ್ಯ ನಾನಲ್ಲ ಎಂಬುದನ್ನು ತೋರಿಸಿ ಈ ಮಣ್ಣಿನ ಪ್ರೇಮ ಮೆರೆದಿದ್ದರು.

ಕಲಾಪ್ರೇಮಿಯಾಗಿದ್ದ ಸಾರೇಕೊಪ್ಪ ಹುಲಿ

ಪುತ್ರರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರೊಂದಿಗೆ

ಚುನಾವಣೆ ಹೊತ್ತಲ್ಲಿ ಹಣ ಹಂಚಿ ಗೆಲ್ಲಬಹುದು ಎಂಬ ಉಮೇದಿನಲ್ಲಿರುವ ಈಗಿನ ರಾಜಕಾರಣಿಗಳು ಮೈಗೆ ಎಣ್ಣೆಹಚ್ಚಿಕೊಂಡೇ ಇರುತ್ತಾರೆ. ಆದರೆ ಬಂಗಾರಪ್ಪ ಅವರು ಯಾವತ್ತೂ ಜನರ ನಡುವೆ ಇರಲು ಬಯಸುತ್ತಿದ್ದರು. ಸಾಮಾನ್ಯ ಜನರಲ್ಲಿ ಬೆರೆಯುತ್ತಿದ್ದ ಅವರು, ಒಬ್ಬ ಕಲಾವಿದ ಹಾಗೂ ಕಲಾಪ್ರೇಮಿಯಾಗಿದ್ದರು. ಯಾವುದೇ ಜಾತ್ರೆ ಅಥವಾ ಉತ್ಸವಕ್ಕೆ ಹೋದರೆ ಅಲ್ಲಿನ ಜಾನಪದ ಕಲಾತಂಡದೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಸಾಹಿತ್ಯ, ಸಂಗೀತ ಕಾರ್ಯಕ್ರಮಕ್ಕೆ ಹೋದರೆ ಎಲ್ಲೂ ರಾಜಕಾರಣ ಮಾತನಾಡದೆ, ಆಯಾ ಕ್ಷೇತ್ರದ ಬಗ್ಗೆ ಮಾತ್ರ ಮಾತನಾಡುತಿದ್ದುದು ಅವರೊಬ್ಬ ಬಹುಮುಖ ಪ್ರತಿಭೆ ಎಂಬುದನ್ನು ಸಾಕ್ಷೀಕರಿಸುತಿತ್ತು.
ಬಂಗಾರಪ್ಪ ಅವರು ಎರಡು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದಿದ್ದ ಗ್ರಾಮೀಣ ಕೃಪಾಂಕ, ಆಶ್ರಯ, ೧೦ ಹೆಚ್.ಪಿ ವರೆಗಿನ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಗಳು ಒಂದು ಸಾಮಾಜಿಕ ಕ್ರಾಂತಿ ಎಂದರೆ ತಪ್ಪಾಗಲಾರದು. ಕೃಪಾಂಕದಿಂದ ಆಯ್ಕೆಯಾದ ನೌಕರನೊಬ್ಬ ತನ್ನ ಮುಂದಿನ ತಲೆಮಾರಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಹಾಯಕವಾಗುತ್ತದೆ. ಇದು ಬಂಗಾರಪ್ಪ ಅವರ ದೂರದೃಷ್ಟಿ ಚಿಂತನೆಗೆ ಸಾಕ್ಷಿಯಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಕೊಳವೆ ಬಾವಿ ತೆಗೆಸುವುದೇ ಕಷ್ಟ ಸಾಧ್ಯವಾಗಿದ್ದ ಕಾಲದಲ್ಲಿ ಉಚಿತ ಕರೆಂಟ್ ನೀಡುವ ಯೋಜನೆ ಜಾರಿಗೆ ತಂದಿದ್ದರಿಂದ ಕೃಷಿ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯೇ ಆಗಿದ್ದು, ದುಡಿಯುವ ಕೈಗಳಿಗೆ ಬಂಗಾರಪ್ಪ ಚೈತನ್ಯ ನೀಡಿದ್ದರು.

ಭೂಮಿ ಕೊಡಿಸಿದ ಧೀಮಂತ:

ವರನಟ ಡಾ.ರಾಜ್ ಕುಮಾರ್ ಅವರೊಂದಿಗೆ ಬಂಗಾರಪ್ಪ

ಐತಿಹಾಸಿಕ ಕಾಗೋಡು ಚಳವಳಿಯ ಫಲಶೃತಿಯಾಗಿ ದೇವರಾಜು ಅರಸು ಅವರು ಭೂಸುಧಾರಣಾ ಕಾಯಿದೆ-೧೯೭೪ ಅನ್ನು ಜಾರಿಗೆ ತಂದರು. ಈ ಕಾಯಿದೆಯಿಂದ ಸೀಮಿತ ಅವಧಿ ಮತ್ತು ಸೀಮಿತ ರೈತರಿಗೆ ಭೂಮಿಯ ಹಕ್ಕು ಸಿಕ್ಕಿತು. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಗರ್ ರೈತರಿಗೆ ಹಕ್ಕುಪತ್ರ ಕೊಡುವ ಸಲುವಾಗಿ ಫಾರಂ ನಂ. ೫೦ ರ ಮೂಲಕ ಬಡ ಸಾಗುವಳಿದಾರರಿಗೆ ಭೂಮಿಯ ಹಕ್ಕುಕೊಡುವ ಮೂಲಕ ಭೂ ಸುಧಾರಣಾ ಕಾಯಿದೆಯ ಆಶಯವನ್ನು ಮುಂದುವರಿಸಿದ್ದರು. ಮಲೆನಾಡಿನಲ್ಲಿ  ಶರಾವತಿ, ಚಕ್ರಾ, ವರಾಹಿ ಯೋಜನೆಗಳಿಂದ ಪುನರ್‌ವಸತಿ ಹೊಂದಿದ್ದ ರೈತರು ಈಗ ಸಂಕಷ್ಟದಲ್ಲಿದ್ದಾರೆ. ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಬೆಲೆ ಇಳಿಕೆ, ಎಲೆಚುಕ್ಕಿ ರೋಗ ಇತ್ಯಾದಿ ಸಮಸ್ಯೆಗಳು ಎದುರಾಗಿದ್ದು, ಇವು ದಿನಗಳದಂತೆ ಕಗ್ಗಂಟಾಗುತ್ತಿರುವ ಹೊತ್ತಿನಲ್ಲಿ ಬಂಗಾರಪ್ಪ ಅವರಂತಹ ಗಟ್ಟಿ ನಾಯಕತ್ವ ಮತ್ತೆ ಮತ್ತೆ ನೆನಪಾಗದೇ ಇರದು.
ಅಧಿಕಾರ ಇರಲಿ ಇಲ್ಲದೇ ಇರಲಿ ಬಂಗಾರಪ್ಪ ಅವರು ಎಂದಿಗೂ ಎದೆಗುಂದಿದವರಲ್ಲ. ಅಧಿಕಾರದಲ್ಲಿರುವ ಅವಧಿಯಲ್ಲಿ ಸಮಷ್ಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ತಂದ ಯೋಜನೆಗಳು ಇಂದಿಗೂ ಜನರನ್ನು ತಲುಪುತ್ತಿವೆ.

ಅನ್ನದಾತ ಬಂಗಾರಪ್ಪ

ಚುನಾವಣೆ ಇರಲಿ ಇಲ್ಲದಿರಲಿ ಬಂಗಾರಪ್ಪ ಅವರ ಮನೆಯ ಆವರಣದಲ್ಲಿ ಯಾವತ್ತೂ ಜನಜಂಗುಳಿ ಇರುತಿತ್ತು. ಕೆಲಸ ಅಥವಾ ಸಹಾಯ ಕೇಳಿ ಯಾರೇ ಬಂದರೂ ಅವರನ್ನು ಬರಿಗೈಲಿ ಕಳಿಸಿದ ಜಾಯಮಾನ ಅವರದಾಗಿರಲಿಲ್ಲ. ದೂರದ ಊರಿಂದ ಬಂದ ಜನರಿಗೆ ಮನೆಯಲ್ಲಿ ಕಾಫಿ, ತಿಂಡಿ, ಊಟವಂತೂ ನಿರಂತರವಾಗಿರುತಿತ್ತು. ಈ ಜನಪ್ರೀತಿ ಅವರಿಗಿದ್ದ ತಾಯ್ತನಕ್ಕೆ ಸಾಕ್ಷಿಯಾಗಿತ್ತು. ರಾಜ್ಯದಲ್ಲಿ ಭೀಕರ ಬರಗಾಲ ಬಂದ ಕಾಲದಲ್ಲಿ ಬಂಗಾರಪ್ಪ ಅವರು ಕೇವಲ ಲೋಕಸಭೆ ಸದಸ್ಯರಾಗಿದ್ದರು. ಆದರೆ ಆ ಸಂದರ್ಭ ಅವರು ಶಿವಮೊಗ್ಗ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಬಡಜನರಿಗೆ ಅಕ್ಕಿ,ರಾಗಿ ಮತ್ತು ರೈತರಿಗೆ ಬಿತ್ತನೆ ಬೀಜವನ್ನು ಉಚಿತವಾಗಿ ನೀಡುವ ಮೂಲಕ ತಾವೊಬ್ಬ ಮಾತೃಹೃದಯಿ ಎಂಬುದನ್ನು ಸಾಬೀತುಪಡಿಸಿದ್ದರು.  ೧೯೬೭ ರಿಂದ ೧೯೯೬ ರವರೆಗೆ ವಿಧಾನ ಸಭೆ ಸದಸ್ಯರಾಗಿ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದ ಬಂಗಾರಪ್ಪ ಅವರು, ಕ್ಷೇತ್ರದಲ್ಲಿ ಪ್ರಚಾರ ಮಾಡದೆಯೂ ಗೆಲ್ಲುವ ಹೆಗ್ಗಳಿಕೆಯನ್ನು ಹೊಂದಿದ್ದರು.

ಬಿಜೆಪಿಗೆ ಬಲ ನೀಡಿದ್ದೇ ಬಂಗಾರಪ್ಪ:

ಆರು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಅವರು ನಾಲ್ಕು ಬಾರಿ ಗೆಲುವು ಸಾಧಿಸಿ ಸಂಸತ್ತು ಪ್ರವೇಶಿಸಿದ್ದರು. ಅಪ್ಪಟ ಸಮಾಜವಾದಿಯಾಗಿದ್ದ ಬಂಗಾರಪ್ಪ ಅವರು, ರಾಜಕೀಯದ ಕೊನೆ ಕಾಲದಲ್ಲಿ ಬಿಜೆಪಿಗೆ ಸೇರಿದ್ದರು. ಅಲ್ಲಿನ ಸಂಸ್ಕೃತಿಗೆ ಒಗ್ಗಿಕೊಳ್ಳದ ಅವರು ಬಹುಬೇಗ ಅಲ್ಲಿಂದ ಹೊರಬಂದಿದ್ದರು. ಆದರೆ ದಕ್ಷಿಣ ಭಾರತದಲ್ಲಿ ಅಷ್ಟಕ್ಕಷ್ಟೇ ಆಗಿದ್ದ ಬಿಜೆಪಿ ರಾಜ್ಯದಲ್ಲಿ ೭೮ ಸೀಟು ಪಡೆಯುವಲ್ಲಿ ಬಂಗಾರಪ್ಪ ಅವರ ವರ್ಚಸ್ಸು ಕಾರಣವಾಗಿದ್ದನ್ನು ಯಾರೂ ಮರೆಯುವಂತಿಲ್ಲ. ತಾವು ನಂಬಿದ ಸಿದ್ಧಾಂತಗಳಿಗೆ ವಿರುದ್ಧವಾಗಿ ಎಂದೂ ನಡೆದುಕೊಳ್ಳದ ಬಂಗಾರಪ್ಪ ಅವರು, ಮತಗಳನ್ನು ಲೆಕ್ಕಕ್ಕಿಟ್ಟುಕೊಳ್ಳದೆ, ೨೦೦೯ ರ ಲೋಕಸಭೆ ಚುನಾವಣೆಯಲ್ಲಿ ಮಲೆನಾಡಿನ ಪ್ರಮುಖ ಮಠವೊಂದರ ಸ್ವಾಮೀಜಿಯನ್ನು ನೇರವಾಗಿ ಟೀಕಿಸಿದ್ದು, ಅವರ ಎದೆಗಾರಿಕೆಗೆ ಸಾಕ್ಷಿಯಾಗಿತ್ತು. ನಾಡು ಕಂಡ ಬಡವರ ಬಂಧು, ಸರ್ವಜನಾಂಗಗಳ ಜನನಾಯಕ ಬಂಗಾರಪ್ಪ ಅವರ ದೂರದೃಷ್ಟಿ ಜನಕಲ್ಯಾಣದ ರಾಜಕಾರಣ ಇಂದಿನ ಅಗತ್ಯವಾಗಿದೆ.

ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದಿಂದ ಸೋಮವಾರ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.ಈ ಸಂದರ್ಭ ಮಾಜಿಶಾಸಕ ಬೇಳೂರು ಗೋಪಾಲಕೃಷ್ಣ, ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ, ಪ್ರಮುಖರಾದ ದೇವಪ್ಪ, ಸುರೇಶ್ ಬಾಳೇಗುಂಡಿ, ಧರ್ಮರಾಜ್,ಕಾಗೋಡುರಾಮಪ್ಪ,ಎಸ್ ಸಿ ರಾಮಚಂದ್ರ, ರವಿ, ಜಿ.ಡಿ.ಮಂಜುನಾಥ್, ಹೊನ್ನಪ್ಪ, ಮಹೇಶ್, ಮಹೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು
Ad Widget

Related posts

ಬಿಜೆಪಿ ರಾಜ್ಯ ಸಮಿತಿ ಸಭೆ

Malenadu Mirror Desk

ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಗೃಹಸಚಿವ ಜ್ಞಾನೇಂದ್ರ

Malenadu Mirror Desk

ಕೊರೊನ ವಾರಿಯರ್ಸ್ ಸೇವೆ ಶ್ಲಾಘನೀಯ: ಫಾದರ್ ರೋಶನ್ ಪಿಂಟೊ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.